ADVERTISEMENT

ಚನ್ನಪಟ್ಟಣ | ಜಲಸಾಹಸ ಕ್ರೀಡೆ ಆರಂಭ: ಪ್ರವಾಸಿಗರ ಕೈಬೀಸಿ ಕರೆವ ಕಣ್ವ ಜಲಾಶಯ

ಎಚ್.ಎಂ.ರಮೇಶ್
Published 2 ಫೆಬ್ರುವರಿ 2026, 5:18 IST
Last Updated 2 ಫೆಬ್ರುವರಿ 2026, 5:18 IST
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಲ್ಲಿ ಪ್ರಾರಂಭವಾಗಿರುವ ಬೋಟಿಂಗ್
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದಲ್ಲಿ ಪ್ರಾರಂಭವಾಗಿರುವ ಬೋಟಿಂಗ್   

ಚನ್ನಪಟ್ಟಣ: ತಾಲ್ಲೂಕಿನ ಗಡಿಭಾಗದ ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳು ಆರಂಭವಾಗಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆ ಕಾರ್ಯಗತವಾದಂತಾಗಿದೆ. ಆ ಮೂಲಕ ಕಣ್ವ ಜಲಾಶಯ ಈಗ ಜಿಲ್ಲೆಯ ಪ್ರಥಮ ಜಲಸಾಹಸ ಕ್ರೀಡಾತಾಣವಾಗಿ ರೂಪುಗೊಂಡು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಟಿಡಿಸಿ) ಹಾಗೂ ಕೋಸ್ಟಲ್ ಸಿ ಅಡ್ವೆಂಚರ್ ಸಂಸ್ಥೆ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಜಲ ಸಾಹಸ ಕ್ರೀಡೆ ಆರಂಭಿಸಲಾಗಿದೆ. ಹಲವಾರು ಜಲಕ್ರೀಡೆ ಪರಿಚಯಿಸಿ ಪ್ರವಾಸ ಪ್ರಿಯರು, ಸಾಹಸಪ್ರಿಯರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.

ADVERTISEMENT

ಜಲಾಶಯದಲ್ಲಿ ಜಲಕ್ರೀಡೆಗಳಿಗಾಗಿ ಕಯಾಕಿ, ಬಿಗ್‌ಬೋಟ್, ವಾಟರ್‌ ಬೈಕ್, ವಾಟರ್‌ ಬೋಟ್, ಪೆಡಲ್‌ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್, ಬಂಬರ್ ಬೋಟ್, ಪ್ಲೇಯಿಂಗ್ ಬೋಟ್‌ಗಳನ್ನು ಹಾಕುವ ಸಕಲ ಸಿದ್ಧತೆ ನಡೆಯುತ್ತಿವೆ. ಸದ್ಯ ವಾಟರ್ ಬೋಟ್, ವಾಟರ್ ಬೈಕ್, ಪೆಡಲ್ ಬೈಕ್‌ಗಳನ್ನು ಪರಿಚಯಿಸಲಾಗಿದೆ. ಶೀಘ್ರವೇ ಪ್ರವಾಸಿಗರಿಗೆ ಉಳಿದೆಲ್ಲಾ ಸೌಲಭ್ಯಗಳು ದೊರೆಯಲಿವೆ.

ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ ₹45 ಲಕ್ಷ ಅಂದಾಜು ವೆಚ್ಚದಲ್ಲಿ ಎರಡು ವಾಟರ್ ಬೈಕ್, ಎರಡು ವಾಟರ್ ಬೋಟ್, 10ಕ್ಕೂ ಹೆಚ್ಚು ಪೆಡಲ್ ಬೋಟ್‌ಗಳನ್ನು ಪರಿಚಯಿಸಲಾಗಿದೆ. ಜಲಸಾಹಸ ಕ್ರೀಡೆಯನ್ನು ಸವಿಯುವ ತಾಲ್ಲೂಕಿನ ಸಾಹಸಪ್ರಿಯರಿಗೆ ಈಗ ಕಣ್ವ ಜಲಾಶಯ ಹೊಸ ಅನುಭವವನ್ನೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಟರ್ ಬೈಕ್, ವಾಟರ್ ಬೋಟ್, ಪೆಡಲ್ ಬೋಟ್‌ಗಳನ್ನು ಹಾಕುವ ಚಿಂತನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಜಿಲ್ಲೆಯ ಮಂಚನಬೆಲೆ ಜಲಾಶಯವನ್ನು ₹145 ಕೋಟಿ ವೆಚ್ಚದಲ್ಲಿ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಈಗ ಕಣ್ವ ಜಲಾಶಯದಲ್ಲಿ ಜಲ ಸಾಹಸ ಕ್ರೀಡಾ ಯೋಜನೆ ರೂಪಿಸಲು ಮುಂದಾಗುತ್ತಿರುವುದು ಜಿಲ್ಲೆಯನ್ನು ಪ್ರವಾಸ ತಾಣವಾಗಿ ರೂಪಿಸುವ ಶುಭ ಸೂಚನೆಯಾಗಿದೆ.

ಶಾಸಕ ಸಿ.ಪಿ. ಯೋಗೇಶ್ವರ್ ತಮ್ಮ ಪತ್ನಿ ಜತೆ ಕಳೆದ ವರ್ಷ ಜನವರಿಯಲ್ಲಿ ಜಲಾಶಯದಲ್ಲಿ ವಾಟರ್ ಬೈಕ್ ರೈಡ್ ನಡೆಸುವ ಮೂಲಕ ಯೋಜನೆ ರೂಪುರೇಷೆಯನ್ನು ಪರೀಕ್ಷಿಸಿದ್ದರು. ಹಾಗೆಯೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ತನ್ನ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ್ದ ಸಮಾರಂಭವನ್ನು ಮುಗಿಸಿ ಕಣ್ವ ಜಲಾಶಯದ ಬಳಿಗೆ ಯೋಗೇಶ್ವರ್ ಜತೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ, ರಂಗನಾಥ್, ಇಕ್ಬಾಲ್ ಹುಸೇನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಜಲಾಶಯದಲ್ಲಿ ರೈಡ್ ನಡೆಸಿದ್ದರು.

ಜಿಲ್ಲೆಯಲ್ಲಿ ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಇಗ್ಗಲೂರು ಎಚ್.ಡಿ ದೇವೇಗೌಡ ಬ್ಯಾರೇಜ್ ಸೇರಿದಂತೆ ಹಲವು ತಾಣಗಳಿದ್ದರೂ ಎಲ್ಲಿಯೂ ಜಲ ಸಾಹಸ ಕ್ರೀಡೆ ಆರಂಭವಾಗಿಲ್ಲ. ರಾಮನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ವಾಟರ್ ಬೋಟ್ ಹಾಕಲಾಗಿದೆ. ಆದರೆ ಕಣ್ವ ಜಲಾಶಯದಲ್ಲಿ ಮಾತ್ರ ಎಲ್ಲರ ಮನ ಸೂರೆಗೊಳ್ಳುವ ನಾನಾ ರೀತಿಯ ವಾಟರ್ ಬೋಟ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕಣ್ವ ಜಲಾಶಯ ಜಿಲ್ಲೆಯ ಪ್ರಥಮ ಜಲ ಸಾಹಸ ಕ್ರೀಡಾತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.

ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿರುವ ಬೋಟ್

ಕಣ್ವ ಜಲಾಶಯಕ್ಕೆ ಇಗ್ಗಲೂರಿನ ದೇವೇಗೌಡ ಬ್ಯಾರೇಜ್‌ನಿಂದ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ. ವರ್ಷಪೂರ್ತಿ ಜಲಾಶಯದಲ್ಲಿ ನೀರು ಸಂಗ್ರಹ ಇರುವ ಕಾರಣ ಜಲ ಸಾಹಸ ಕ್ರೀಡೆಗೆ ಹೇಳಿಮಾಡಿಸಿದಂತಿದೆ. ಜತೆಗೆ ಬೆಂಗಳೂರು ನಗರವು ಕಣ್ವ ಜಲಾಶಯಕ್ಕೆ ಹತ್ತಿರವಿರುವ ಕಾರಣ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಹತ್ತಿರವಿರುವ ಕಾರಣ ಹೆಚ್ಚು ಮಂದಿ ಪ್ರವಾಸಿಗರನ್ನು ಸೆಳೆಯುವ ಅವಕಾಶವಿದೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಶನಿವಾರ, ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸದ್ಯ ಪ್ರವಾಸಿಗರ ಬಳಿ ಬೋಟ್‌ಗೆ ಶುಲ್ಕ ತೆಗೆದುಕೊಳ್ಳುತ್ತಿಲ್ಲ. ಡೀಸೆಲ್ ಹಣ ₹100 ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶುಲ್ಕ ನಿಗದಿ ಮಾಡಲಾಗುವುದು. ಪ್ರವಾಸಿಗರನ್ನು ಸೆಳೆಯುವುದು ಸದ್ಯದ ಉದ್ದೇಶ. ಬೇಸಿಗೆ ರಜೆಯಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಜಲಾಶಯ ಬಳಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಕಣ್ವ ಜಲಾಶಯದಲ್ಲಿ ಜಲ ಸಾಹಸ ಕ್ರೀಡೆಗಳು ಆರಂಭಗೊಂಡಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಪ್ರವಾಸಿ ತಾಣಗಳ ಅಭಿವೃದ್ಧಿಯಾಗಲಿ ಎನ್ನುವುದು ತಾಲ್ಲೂಕಿನ ಜನರ ಆಶಯವಾಗಿದೆ.

ಕಾಂತರಾಜು
ಕೆ.ಎನ್. ರಾಜು

ಸಂತಸದ ವಿಚಾರ

ಕಣ್ವ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿರುವುದು ಸಂತೋಷಕರ ವಿಚಾರ. ಚನ್ನಪಟ್ಟಣ ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಜನರು ಮಕ್ಕಳು ರಜಾದಿನಗಳಲ್ಲಿ ಮೋಜು ಮಾಡಲು ಕಣ್ವ ಜಲಾಶಯ ಸೂಕ್ತ ಜಾಗ. ವರ್ಷವಿಡೀ ನೀರು ಇರುವ ಕಣ್ವದಲ್ಲಿ ಜಲಸಾಹಸ ಕ್ರೀಡೆಗಳನ್ನು ಪರಿಚಯಿಸಿರುವುದು ಸ್ವಾಗತಾರ್ಹ.
ಕಾಂತರಾಜು ನಿವೃತ್ತ ನೌಕರ ಚನ್ನಪಟ್ಟಣ

ಪ್ರವಾಸಿಗರಿಗೆ ಸೌಲಭ್ಯ ಒದಗಿಸಿ

ಕಣ್ವ ಜಲಾಶಯದಲ್ಲಿ ಜಲಸಾಹಸ ಕ್ರೀಡೆಗಳ ಪರಿಚಯ ಸೂಕ್ತ ನಿರ್ಧಾರ. ಇಲ್ಲಿಗೆ ಪ್ರವಾಸಿಗರನ್ನು ಸೆಳೆಯುವ ಜತೆಗೆ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಣ್ವ ಜಲಾಶಯ ಈ ಹಿಂದಿನಿಂದಲೂ ಪ್ರವಾಸಿತಾಣ. ಅಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪ್ರವಾಸಿಗರ ಆಕರ್ಷಣೆ ಕಳೆದುಕೊಂಡಿತ್ತು. ಈಗ ಜಲಸಾಹಸ ಕ್ರೀಡೆಗಳ ಮೂಲಕ ಕಣ್ವಕ್ಕೆ ಹೊಸ ಚೈತನ್ಯ ಬರುವಂತಾಗಲಿ.
ಕೆಲಗೆರೆ ಕೆ.ಎನ್.ರಾಜು ರೈತಸಂಘ ಚನ್ನಪಟ್ಟಣ

ಕಡಿಮೆ ದರದಲ್ಲಿ ಬೋಟಿಂಗ್ ವ್ಯವಸ್ಥೆ

ಅತಿ ಕಡಿಮೆ ದರದಲ್ಲಿ ಬೋಟಿಂಗ್ ವ್ಯವಸ್ಥೆ ಇಲ್ಲಿದೆ. ಗೋವಾ ಕಾರವಾರದಂತಹ ಜಾಗಗಳಲ್ಲಿ ಸಾವಿರಕ್ಕೂ ಹೆಚ್ಚು ದರ ನಿಗದಿ ಮಾಡಿದ್ದಾರೆ. ಇಲ್ಲಿ ಇನ್ನೂ ದರ ನಿಗದಿಯಾಗಿಲ್ಲ. ಆದರೆ ಅತಿ ಕಡಿಮೆ ದರದಲ್ಲಿ ಬೋಟಿಂಗ್ ವ್ಯವಸ್ಥೆ ದೊರೆಯಲಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಪರಿಸರವೂ ಸುಂದರವಾಗಿದೆ.  
ರವಿಕುಮಾರ್ ರಾಮನಗರ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.