ರಾಮನಗರದಲ್ಲಿ ಬುಧವಾರ ನಡೆದ ಕರಗ ಮಹೋತ್ಸವ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಟ ರವಿಚಂದ್ರನ್ ಅವರನ್ನು ಸನ್ಮಾನಿಸಿ ಕೈ ಎತ್ತಿ ಹಿಡಿದರು. ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ. ಬಾಲಕೃಷ್ಣ, ಮಂಥರ್ ಗೌಡ, ಡಿ.ಕೆ. ಸುರೇಶ್, ಕೆ. ರಾಜು ಇದ್ದಾರೆ
ರಾಮನಗರ: ಚಾಮುಂಡೇಶ್ವರಿ ಸೇರಿದಂತೆ ನಗರದ ನವಶಕ್ತಿ ದೇವಿಯರ ಕರಗ ಮಹೋತ್ಸವದ ಅಗ್ನಿ ಕೊಂಡೋತ್ಸವ ಬುಧವಾರ ಭಕ್ತಿಭಾವದಿಂದ ಜರುಗಿತು. ಇದರೊಂದಿಗೆ ಕರಗ ಮಹೋತ್ಸವಕ್ಕೆ ತೆರೆ ಬಿದ್ದಿತು. ಮಂಗಳವಾರ ಸಂಜೆಯಿಂದ ಶುರುವಾಗಿ ಮರುದಿನ ಬೆಳಗ್ಗಿನವರೆಗೆ ನಡೆದ ಕರಗಗಳ ಮೆರವಣಿಗೆಯು ನಗರದಾದ್ಯಂತ ಜರುಗಿತು.
ಭಕ್ತರು ತಮ್ಮ ಬೀದಿಗೆ ಹೂವು ಹಾಕುವ ಮೂಲಕ ಕರಗಧಾರಕರಿಗೆ ಭಕ್ತಿಪೂರ್ವಕವಾದ ನೀಡಿದರು. ಕರಗಕ್ಕೆ ಪೂಜೆ ಮಾಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ತಮಟೆ ಮತ್ತು ಡೊಳ್ಳಿನ ವಾದನವು ಕಗರದ ಮೆರವಣಿಗೆಗೆ ಕಳೆ ತಂದಿತು. ತಮಟೆ ವಾದನಕ್ಕೆ ಕರಗಧಾರಕರು ಹಾಕುತ್ತಿದ್ದ ಹೆಜ್ಜೆಯು ಸುತ್ತಲಿದ್ದವರನ್ನು ಭಕ್ತಿ ಪರಶವಗೊಳಿಸಿತು.
ಒಂದೆಡೆ ಕರಗೋತ್ಸವ ಸಂಭ್ರಮವಾದರೆ ಮತ್ತೊಂದೆಡೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗೀತ ಸಂಜೆಯು ಮುದನೀಡಿತು. ಖ್ಯಾತ ಗಾಯಕರಾದ ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಅನುರಾಧ ಭಟ್ ಅವರು ಹಾಡಿದ ಜನಪ್ರಿಯ ಹಾಡುಗಳು ಪ್ರೇಕ್ಷರಿಗೆ ಮುದ ನೀಡಿದವು. ಸಿನಿಮಾ ನಟರಾದ ರವಿಚಂದ್ರನ್, ಯುವ ರಾಜಕುಮಾರ್, ನಟಿ ಸಂಪದ ಹುಲಿವಾನ ಅವರು ವೇದಿಕೆಗೆ ವಿಶೇಷ ಮೆರಗು ತಂದಿತು.
ಇದೇ ಸಂದರ್ಭದಲ್ಲಿ ಯುವ ರಾಜಕುಮಾರ್ ಅಭಿಯನದ ‘ಎಕ್ಕ’ ಸಿನಿಮಾದ ಟ್ರೇಲರ್ ಪ್ರದರ್ಶಿಸಲಾಯಿತು. ನಟ ಯುವ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಯುವ ಮತ್ತು ಸಂಪದ ಅವರು ಹೆಜ್ಜೆ ಹಾಕುವ ಮೂಲಕ ಪ್ರೇಕ್ಷರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಕೇಳಿ ಬಂದ ‘ಅಪ್ಪು... ಅಪ್ಪು...’ ಎಂಬ ಕೂಗಿಗೆ ಸ್ಪಂದಿಸಿದ ಯುವ, ನಟ ಪುನೀತ್ ರಾಜಕುಮಾರ್ ಅವರ ಸಿನಿಮಾದ ಒಂದು ಡೈಲಾಗ್ ಹೇಳಿ ಅಭಿಮಾನಿಗಳನ್ನು ತಣಿಸಿದರು.
ವೇದಿಕೆಯಲ್ಲಿ ಹಾಡಿಗೆ ನೃತ್ಯಗಾರರು ಹೆಜ್ಜೆ ಹಾಕಿ ರಂಜಿಸಿದರು. ರಘು ದೀಕ್ಷಿತ್, ಚಂದನ್ ಶೆಟ್ಟಿ, ರಾಜೇಶ್ ಕೃಷ್ಣನ್ ಹಾಡಿಗೆ ಯುವಜನರು ಕುಣಿದು ಕುಪ್ಪಳಿಸಿದರು. ವೇದಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರವೇಶಿಸುತ್ತಿದ್ದಂತೆ ಸತತವಾಗಿ 18 ನಿಮಿಷ ವೇದಿಕೆಯ ಎರಡೂ ದಿಕ್ಕುಗಳಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಪಟಾಕಿಗಳು ಆಗಸದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸಿದವು.
ವಿದ್ಯುತ್ ದೀಪಾಲಂಕಾರ: ಕರಗದ ಪ್ರಯುಕ್ತ ಇಡೀ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯಗಳು ಸಹ ವಿಶೇಷಾಲಂಕಾರಗಳಿಂದ ಕಂಗೊಳಿಸಿದವು. ಚಾಮುಂಡೇಶ್ವರಿ, ಕೊಂಕಾಣಿದೊಡ್ಡಿ, ಚಾಮುಂಡಿಪುರ, ಗಾಂಧೀನಗರ ಆದಿಶಕ್ತಿ, ಬಿಸಿಲು ಮಾರಮ್ಮ, ಮುತ್ತುಮಾರಮ್ಮ ಮಗ್ಗದ ಕೆರೆ ಮಾರಮ್ಮ, ಭಂಡಾರಮ್ಮ ದೇವಿಯ ಕರಗ ಅದ್ಧೂರಿಯಾಗಿ ನೆರವೇರಿತು.
ರಾತ್ರಿ ನಗರವನ್ನು ಪ್ರದಕ್ಷಿಣೆ ಹಾಕಿದ ಕರಗಗಳು ದೇವಾಲಯ ಹಾಗೂ ಭಕ್ತರಿಂದ ಪೂಜೆ ಸ್ವೀಕರಿಸಿದವು. ಬೆಳಿಗ್ಗೆ ಆಯಾ ದೇವತೆಗಳ ಕರಗಗಳು ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಅಗ್ನಿಕೊಂಡ ಪ್ರವೇಶಿಸಿದವು. ಆ ಮೂಲಕ ಕರಗ ಮಹೋತ್ಸವವಕ್ಕೆ ತೆರೆ ಬಿತ್ತು. ಕರಗ ಪ್ರಯುಕ್ತ ಜನರು ಮನೆಗಳಲ್ಲಿ ವಿಶೇಷ ಭೋಜನ ಸವಿದರು. ಸಂಬಂಧಿಕರು, ನೆಂಟರು, ಸ್ನೇಹಿತರನ್ನು ಆಹ್ವಾನಿಸಿ ಕರಗ ಸಂಭ್ರಮಿಸಿದರು.
ಡಿ.ಕೆ. ಶಿವಕುಮಾರ್ ಅವರು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಕೆಲ ದೇಗುಲಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಸಾಥ್ ನೀಡಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.
ನಾನು ಮತ್ತು ಡಿ.ಕೆ. ಶಿವಕುಮಾರ್ ಶಾಲೆಯಿಂದಲೂ ಸ್ನೇಹಿತರು. ನಮ್ಮಿಬ್ಬರ ಸ್ನೇಹ ಬಹಳ ಗಟ್ಟಿಯಾದುದು. ಕರಗಕ್ಕೆ ಬರಬೇಕೆಂದು ಅವರ ಸಹೋದರ ಡಿ.ಕೆ. ಸುರೇಶ್ ಹೇಳಿದ ಒಂದೇ ಮಾತಿಗೆ ಮರು ಮಾತನಾಡದೆ ಇಲ್ಲಿಗೆ ಬಂದಿದ್ದೇನೆ
ರವಿಚಂದ್ರನ್ ಸಿನಿಮಾ ನಟ
‘ಹೆಸರು ಬದಲಾಯಿಸಿ ಋಣ ಸಂದಾಯ’
‘ನೀವು ಕೊಟ್ಟ ಅಧಿಕಾರದಿಂದಾಗಿ ಈ ವರ್ಷದ ಕೊಡುಗೆಯಾಗಿ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿ ಋಣ ತೀರಿಸಿದ್ದೇವೆ. ವಿಶ್ವವೇ ನಿಮ್ಮ ಕಡೆಗೆ ನೋಡುವಂತೆ ಮಾಡಿದ್ದೇವೆ. ನಿಮ್ಮ ಸಹಕಾರದಿಂದಾಗಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಲಾಗಿದೆ. ಅದರಲ್ಲೂ ರಾಮನಗರದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು 150 ಎಕರೆ ಜಮೀನು ಕಾದಿರಿಸಲಾಗಿದೆ. ನಿಮ್ಮ ಆಶೀರ್ವಾದದಿಂದ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಲಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
‘ನಂದಿನಿಗೆ ನಾನೇ ಅಂಬಾಸಿಡರ್’
‘ನಂದಿನಿ ಉತ್ಪನ್ನಗಳಿಗೆ ಬೇರೆ ಯಾರನ್ನೋ ಯಾಕೆ ಬ್ರಾಂಡ್ ಅಂಬಾಸಿಡರ್ ಮಾಡಬೇಕು. ಅದಕ್ಕೆ ನಾನೇ ಅಂಬಾಸಿಡರ್. ಎಲ್ಲರೂ ನಂದಿನಿ ಹಾಲಿನ ಉತ್ಪನ್ನಗಳನ್ನು ಬಳಸುವ ಮೂಲಕ ನಾಡಿನ ಹೆಮ್ಮೆಯ ನಂದಿನಿಯನ್ನು ಪ್ರೋತ್ಸಾಹಿ ರಕ್ಷಿಸಬೇಕು’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮನವಿ ಮಾಡಿದರು. ಸುರೇಶ್ ಮಾತಿನ ವೇಳೆ ಕೆಲವರು ‘ಡಿ ಬಾಸ್... ಡಿ ಬಾಸ್...’ ಎಂದು ಕೂಗಿದರು. ಅದಕ್ಕೆ ಸುರೇಶ್ ‘ಅವರನ್ನೂ ಕರೆಸುತ್ತಿದ್ದೆ. ಆದರೆ ನೀವು ಸರಿ ಇಲ್ಲ ಎಂದು ಕರಿಯಲಿಲ್ಲ. ಅವರು ಎಲ್ಲವನ್ನೂ ಮುಗಿಸಿಕೊಳ್ಳಲಿ. ಮುಂದಿನ ಸಲ ಕರೆಸೋಣ’ ಎಂದರು.
‘ನಮ್ಮ ನಾಯಕನಿಗೆ ಹೆಚ್ಚಿನ ಶಕ್ತಿ ಕರುಣಿಸಲಿ’
‘ನೀವು ಕೊಟ್ಟ ಶಕ್ತಿಯಿಂದಾಗಿ ಐತಿಹಾಸಿಕ ಚಾಮುಂಡೇಶ್ವರಿ ಕರಗವನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ. ನಾನು ಡಿ.ಕೆ. ಶಿವಕುಮಾರ್ ಡಿ.ಕೆ. ಸುರೇಶ್ ಎಚ್. ಬಾಲಕೃಷ್ಣ ಸಿ.ಪಿ. ಯೋಗೇಶ್ವರ್ ಸೇರಿದಂತೆ ಇಲ್ಲಿರುವ ನಾವೆಲ್ಲರೂ ಈ ಜಿಲ್ಲೆಯ ಮಣ್ಣಿನ ಮಕ್ಕಳು. ರಾಮನಗರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕಾದರೆ ನಮ್ಮ ನಾಯಕ ಶಿವಕುಮಾರ್ ಅವರಿಗೆ ಹೆಚ್ಚಿನ ಶಕ್ತಿ ಬೇಕು. ತಾಯಿ ಚಾಮುಂಡೇಶ್ವರಿ ಅವರಿಗೆ ಉನ್ನತ ಸ್ಥಾನ ಕರಣಿಸಲಿ. ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.