ಬಿಡದಿ (ರಾಮನಗರ): ‘ದೇಶಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಗಿಲ್ ಹುತಾತ್ಮರ ಯಶೋಗಾಥೆಯನ್ನು ಪಠ್ಯದಲ್ಲಿ ಅಳವಡಿಸಬೇಕು. ಕಾರ್ಗಿಲ್ ವಿಜಯೋತ್ಸವವನ್ನು ಸರ್ಕಾರ ಕಡ್ಡಾಯವಾಗಿ ಶಾಲಾ–ಕಾಲೇಜುಗಳಲ್ಲಿ ಆಚರಿಸಲು ಆದೇಶ ಹೊರಡಿಸಬೇಕು ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಹೇಳಿದರು.
ಇಲ್ಲಿನ ಬನ್ನಿಕುಪ್ಪೆ ‘ಬಿ’ ಕ್ಲಸ್ಟರ್ ಕೇಂದ್ರ ಶಾಲೆಯ ಕಾರ್ಗಿಲ್ ವೀರಯೋಧ ವನದಲ್ಲಿ 26ನೇ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ದೀಪ ನಮನ ಮತ್ತು ಗೀತನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳುವ ಜೊತೆಗೆ, ದೇಶಕ್ಕಾಗಿ ಬಲಿದಾನ ಮಾಡಿರುವ ಸೈನಿಕರ ಬಗ್ಗೆಯೂ ಅರಿಯಬೇಕು’ ಎಂದು ಸಲಹೆ ನೀಡಿದರು.
ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಮಾತನಾಡಿ, ‘ದೇಶ ನನ್ನದು ಎನ್ನದವನ ಎದೆ ಸುಡುಗಾಡು ಎಂದು ಕುವೆಂಪು ಅವರು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಎಳೆಯ ವಯಸ್ಸಿನಲ್ಲೇ ದೇಶಭಕ್ತಿ, ಸೈನಿಕರ ತ್ಯಾಗ ಮತ್ತು ಬಲಿದಾನ ತಿಳಿಸಬೇಕು. ಅದಕ್ಕಾಗಿ ಐದು ವರ್ಷಗಳ ಹಿಂದೆ ಕಾರ್ಗಿಲ್ ನಲ್ಲಿ ಹುತಾತ್ಮರಾದ ಸೈನಿಕರ ಹೆಸರಿನಲ್ಲಿ ಗಿಡ ನೆಟ್ಟು ವೀರಯೋಧ ವನ ನಿರ್ಮಿಸಲಾಯಿತು’ ಎಂದರು.
‘ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಸಮಯ ಕಳೆಯುತ್ತಿದ್ದಾರೆ. ಅವರಿಗೆ ದೇಶಭಕ್ತಿಯ ವಿಚಾರಗಳನ್ನು, ಸೈನಿಕರ ಸಾಹಸ ಹಾಗೂ ತ್ಯಾಗದ ವಿಚಾರಗಳನ್ನು ನಾವು ತಿಳಿಸದಿದ್ದರೆ ನಾಡಿಗೆ ಮಾಡುವ ದ್ರೋಹವಾಗುತ್ತದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸುವ ಕೆಲಸ ಶಾಲಾವರಣದಿಂದಲೇ ಶುರುವಾಗಬೇಕು’ ಎಂದು ತಿಳಿಸಿದರು.
ದೂರದರ್ಶನ ಕಲಾವಿದ ಕುಣಿಗಲ್ ರಾಮಚಂದ್ರ ಅವರು ದೇಶಭಕ್ತಿ ಗೀತೆಗಳನ್ನು ಹಾಡಿ ಕಾರ್ಗಿಲ್ ಹುತಾತ್ಮರಿಗೆ ಗೀತ ನಮನ ಸಲ್ಲಿಸಿದರು. ವೀರಯೋಧ ವನದಲ್ಲಿ ಗಣ್ಯರು ದೀಪ ಹಚ್ಚಿ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶಾಲಾ ವಿದ್ಯಾರ್ಥಿಗಳು ಸೈನಿಕರ ವೇಷದಲ್ಲಿ ಬಂದು ಎಲ್ಲರಿಗೂ ಪ್ರೇರಣೆಯಾದರು.
ಸಾಹಿತಿ ತೋಟದಮನೆ ಗಿರೀಶ್, ಬನ್ನಿಕುಪ್ಪೆ ಕುಮಾರ್, ಗೋವಿಂದರಾಜು, ಗಂಗನರಸಯ್ಯ, ಗಿರೀಶ್, ವೆಂಕಟೇಶ್, ಮುರುಳಿ, ಕಾಂತರಾಜು, ಶಿಕ್ಷಕರಾದ ರಂಗಸ್ವಾಮಯ್ಯ, ವೆಂಕಟೇಶಯ್ಯ, ರಮೇಶ್, ಬಸವರಾಜು, ಪ್ರಭಾವತಿ, ಮಂಜುಳಾ ಎಚ್.ಡಿ, ಮಂಗಳ ಗೌರಮ್ಮ, ಮಂಜುಳಾ, ಕಮಲ, ವಿಜಯಲಕ್ಷ್ಮಿ, ಮರಿಯಮ್ಮ, ಶೋಭಾ ಹಾಗೂ ಇತರರು ಇದ್ದರು.
‘ಯೋಧರನ್ನು ಸದಾ ನೆನೆಯಬೇಕು’
ರಾಮನಗರ: ‘ಹಗಲು ರಾತ್ರಿ ತಮ್ಮ ಜೀವವನ್ನು ಒತ್ತೆ ಇಟ್ಟು ದೇಶ ಕಾಯುವ ಯೋಧರನ್ನು ಪ್ರತಿಯೊಬ್ಬ ಪ್ರಜೆಯೂ ನೆನೆಯಬೇಕು. ನಾವಿಂದು ಸುರಕ್ಷಿತವಾಗಿ ಬದುಕುತ್ತಿದ್ದರೆ ಅದಕ್ಕೆ ಗಡಿಯಲ್ಲಿರುವ ಯೋಧರು ಕಾರಣ’ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ಸಿ. ರಾಜು ಹೇಳಿದರು.
ನಗರದ ಮಾಗಡಿ ರಸ್ತೆಯಲ್ಲಿರುವ ಪಟೇಲ್ ಆಂಗ್ಲ ಶಾಲೆಯಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ದೇಶಕ್ಕಾಗಿ ಮಡಿದ ಹುತಾತ್ಮ ಯೋಧರ ಜೀವನಗಾಥೆಯನ್ನು ಪಠ್ಯದ ಮೂಲಕ ತಿಳಿಸಿ ದೇಶಪ್ರೇಮ ಬೆಳೆಸುವ ಕೆಲಸವಾಗಬೇಕ’ ಎಂದರು.
ನಿವೃತ್ತ ಯೋಧ ಕಲ್ಲುಗೋಪನಹಳ್ಳಿಯ ಕೆ.ಎಚ್. ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ಕನಕಪುರ ಅಧ್ಯಕ್ಷ ಗಬ್ಬಾಡಿ ಕಾಡೇಗೌಡ ಕಸಾಪ ಜಿಲ್ಲಾಧ್ಯಕ್ಷ ನಾಗೇಶ್ ಬಿ.ಟಿ ವನವಾಸಿ ಕಲ್ಯಾಣ ಕಾರ್ಯವಾಹಕ ಸತೀಶ್ ರವಿ ಅರುಣ್ ಕುಮಾರ್ ಗೋಪಿ ಶಿವಕುಮಾರ್ ರಾಜೇಂದ್ರ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.