ADVERTISEMENT

ಚನ್ನಪಟ್ಟಣ ಕ್ಷೇತ್ರ: ಚಾಲ್ತಿಯಲ್ಲಿದೆ ಕಾಂಗ್ರೆಸ್‌ನಿಂದ ನಟಿ ರಮ್ಯಾ ಹೆಸರು

ಪ್ರಸನ್ನ ಗೌಡ ಕಾಂಗ್ರೆಸ್ ಅಭ್ಯರ್ಥಿ?

ಎಚ್.ಎಂ.ರಮೇಶ್
Published 13 ಫೆಬ್ರುವರಿ 2023, 6:38 IST
Last Updated 13 ಫೆಬ್ರುವರಿ 2023, 6:38 IST
   

ಚನ್ನಪಟ್ಟಣ: ಮುಂಬರುವ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಪ್ರಸನ್ನ ಪಿ. ಗೌಡ ಹೆಸರು ಅಂತಿಮವಾಗುವುದು ಬಹುತೇಕ ಖಚಿತವಾಗಿದೆ.

ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುವುದು ಖಚಿತವಾಗಿದೆ. ಇವರಿಬ್ಬರ ಎದುರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದ ಕಾಂಗ್ರೆಸ್ ವರಿಷ್ಠರು ಉದ್ಯಮಿ ಪ್ರಸನ್ನ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಬಯಸಿ ಎಂಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಇನ್ನುಳಿದ ಆಕಾಂಕ್ಷಿಗಳ ಮನವೊಲಿಸಲು ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ರಾಮನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ.

ADVERTISEMENT

ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಆರ್ಭಟದ ನಡುವೆ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಡಿ.ಕೆ. ಸಹೋದರರು ಚಿಂತನೆ ನಡೆಸಿ ಉದ್ಯಮಿ ಪ್ರಸನ್ನ ಅವರನ್ನು ಪಕ್ಷಕ್ಕೆ ಕರೆತಂದಿದ್ದರು. ಪಕ್ಷಕ್ಕೆ ಬಂದಾಗಿನಿಂದಲೂ ಪ್ರಸನ್ನ ತಾಲ್ಲೂಕಿನಲ್ಲಿ ಸಕ್ರಿಯವಾಗಿದ್ದರು. ಸ್ಥಳೀಯ ಕಾಂಗ್ರೆಸ್ಸಿಗರ ನಡುವೆ ವೈಮನಸ್ಸು ಸೃಷ್ಟಿಯಾಗಿ ಪ್ರಸನ್ನ ಅವರು ಪಕ್ಷ ಸಂಘಟನೆಯಿಂದ ಕೆಲವು ದಿನ ದೂರ ಉಳಿದಿದ್ದರು. ಆನಂತರ ಸಂಧಾನದ ಬಳಿಕ ಮತ್ತೆ ಸಕ್ರಿಯರಾಗಿದ್ದರು.

ಡಿ.ಕೆ. ಸಹೋದರರ ಭಾವ ಶರತ್ ಚಂದ್ರ ಟಿಕೆಟ್‌ ಕೋಟಿ ಅರ್ಜಿ ಸಲ್ಲಿಸಿದ್ದ ಕಾರಣ ತಾಲ್ಲೂಕು ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅಂತಿಮವಾಗಿ ಎಚ್.ಎಂ. ರೇವಣ್ಣ ಅವರಿಗೆ ಬಿ ಫಾರಂ ನೀಡಲಾಗಿತ್ತು. ಈ ಬಾರಿ ತನಗೆ ಟಿಕೆಟ್ ನೀಡಬೇಕು ಎಂದು ಶರತ್ ಚಂದ್ರ ಹಠಕ್ಕೆ ಬಿದ್ದಿದ್ದರು. ಆದರೆ ಕುಟುಂಬಸ್ಥರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಡಿ.ಕೆ. ಶಿವಕುಮಾರ್ ಕಠಿಣ ನಿಲುವಿನಿಂದಾಗಿ ಶರತ್ ಚಂದ್ರ ಕಾಂಗ್ರೆಸ್ ಬಿಟ್ಟು ಎಎಪಿ ಸೇರಿದ್ದಾರೆ. ಇದರಿಂದ ಪ್ರಸನ್ನ ಅವರ ದಾರಿ ಸುಗಮವಾಗಿದೆ.

ಪ್ರಸನ್ನ ಪಿ. ಗೌಡ

ಚನ್ನಪಟ್ಟಣದಲ್ಲಿ ಈಗಾಗಲೇ ಹಾಲಿ ಶಾಸಕ ಎಚ್.ಡಿ. ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಈ ಎರಡು ಮದಗಜಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿರುವ ಪ್ರಸನ್ನ ಯಾವ ತಂತ್ರ ರೂಪಿಸುತ್ತಾರೆ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

ಮಹಿಳೆಯರ ಸೆಳೆಯಲು ಪ್ಲಾನ್!
ಚನ್ನಪಟ್ಟಣದಿಂದ ಪ್ರಸನ್ನ ಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್ ಬಹುತೇಕ ಖಚಿತವಾಗಿದ್ದರೂ ಚಿತ್ರನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರ ಹೆಸರೂ ಚಾಲ್ತಿಗೆ ಬಂದಿದೆ.

ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಎದುರು ಪ್ರಬಲ ಅಭ್ಯರ್ಥಿಯೊಬ್ಬರ ಹುಡುಕಾಟದಲ್ಲಿರುವ ಕಾಂಗ್ರೆಸ್‌ ಚಿತ್ರನಟಿ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಮಹಿಳಾ ಮತದಾರರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದಿದೆ.

ಒಂದು ವೇಳೆ ರಮ್ಯಾ ಸೋತರೂ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.