ADVERTISEMENT

ರಾಮನಗರ | ಸಮಾಜ ಕಲ್ಯಾಣ ಇಲಾಖೆ: ಹಿರಿಯ ಬೆರಳಚ್ಚುಗಾರರ ಮುಂಬಡ್ತಿಗೆ ಗ್ರಹಣ

ನಿಯಮಾವಳಿಯಲ್ಲಿ ಅವಕಾಶವಿಲ್ಲವೆಂದು ಕೈ ಚೆಲ್ಲಿದ ಅಧಿಕಾರಿಗಳು

ಓದೇಶ ಸಕಲೇಶಪುರ
Published 8 ಡಿಸೆಂಬರ್ 2023, 6:17 IST
Last Updated 8 ಡಿಸೆಂಬರ್ 2023, 6:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ಹಲವಾರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ರಾಜ್ಯದ ವಿವಿಧೆಡೆ ಹಿರಿಯ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿರುವ 40ಕ್ಕೂ ಹೆಚ್ಚು ಜನರು ಮುಂಬಡ್ತಿ ಇಲ್ಲದೆ ನಿವೃತ್ತಿಯಂಚಿಗೆ ಬಂದು ನಿಂತಿದ್ದಾರೆ. 

ವಿದ್ಯಾರ್ಹತೆ ಜೊತೆಗೆ ಅರ್ಹತೆ ಇದ್ದರೂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬಡ್ತಿಯಿಂದ ವಂಚಿತರಾಗಿದ್ದಾರೆ. ಜೊತೆಗೆ, 200ಕ್ಕೂ ಹೆಚ್ಚು ಬೆರಳಚ್ಚುಗಾರರು ಸಹ ಇದೇ ಬಡ್ತಿ ಸಿಗದೆ ನಿವೃತ್ತರಾಗುವ ಆತಂಕದಲ್ಲಿದ್ದಾರೆ!

ADVERTISEMENT

ವೇತನ ಶ್ರೇಣಿ ಇದ್ದರೂ ಅವಕಾಶವಿಲ್ಲ: ‘ನಮ್ಮೊಂದಿಗೆ ಬೇರೆ ಇಲಾಖೆಗಳಿಗೆ ಬೆರಳಚ್ಚುಗಾರರಾಗಿ ನೇಮಕವಾದವರು ಈಗಾಗಲೇ ಬಡ್ತಿ ಪಡೆದಿದ್ದಾರೆ. ಎಸ್‌ಡಿಎ, ಗ್ರೇಡ್–1, ಗ್ರೇಡ್–2, ವಾರ್ಡನ್, ಅಧೀಕ್ಷಕ ಹುದ್ದೆ ಸೇರಿದಂತೆ ವಿವಿಧ ಹುದ್ದೆ ಪಡೆದಿದ್ದಾರೆ. ಅವರಷ್ಟೇ ವೇತನ ಶ್ರೇಣಿ ಇದ್ದರೂ ನಮಗೆ ಮುಂಬಡ್ತಿ ಸಿಕ್ಕಿಲ್ಲ’ ಎಂದು ಮದ್ದೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯ ಹಿರಿಯ ಬೆರಳಚ್ಚುಗಾರ ಎಸ್.ಎಚ್. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ 2005ರಲ್ಲಿ ಎಲ್ಲಾ ಇಲಾಖೆಗಳ ಕಂಪ್ಯೂಟರೀಕರಣಗೊಳಿಸುವುದಕ್ಕೆ ಚಾಲನೆ ನೀಡಿ, ಖಾಲಿ ಹುದ್ದೆ ರದ್ದುಪಡಿಸುವುದಕ್ಕೆ ಮುಂದಾಯಿತು. ಕ್ಲರ್ಕ್ ಕಂ ಬೆರಳಚ್ಚುಗಾರ ಎಂಬ ಹುದ್ದೆ ಸೃಜಿಸುವ ಬದಲು ರದ್ದುಪಡಿಸಲಾಯಿತು. ಈ ಆದೇಶ ನಮ್ಮ ಮುಂಬಡ್ತಿ ಕನಸನ್ನು ನುಚ್ಚುನೂರು ಮಾಡಿತು. ಬಡ್ತಿ ಕಾಣದ ನಮಗೆ ಇಲಾಖೆ 2014ರಲ್ಲಿ ಹಿರಿಯ ಬೆರಳಚ್ಚುಗಾರ ಹುದ್ದೆ ಸೃಷ್ಟಿಸಿ ಬಡ್ತಿ ನೀಡಿತು. 17 ವರ್ಷಗಳ ಬಳಿಕ ಸಿಕ್ಕ ಬಡ್ತಿ ಅದಾಗಿತ್ತು’ ಎಂದರು.

‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ, 5ರಿಂದ 7 ವರ್ಷ ಸೇವಾವಧಿ ಪೂರ್ಣಗೊಳಿಸಿದವರಿಗೆ ಜ್ಯೇಷ್ಠತೆ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಈ ಕುರಿತು ಇಲಾಖೆ ಗಮನಕ್ಕೆ ತಂದಾಗ, ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ (ಸಿ ಆ್ಯಂಡ್ ಆರ್) ಅವಕಾಶವಿಲ್ಲ. ಮುಂಬಡ್ತಿ ನೀಡಬೇಕಾದರೆ ನಿಯಮಾವಳಿಗೆ ತಿದ್ದುಪಡಿ ತರಬೇಕು ಎಂದು ಕೈ ತೊಳೆದುಕೊಂಡರು’ ಎಂದು ಅಳಲು ತೋಡಿಕೊಂಡರು.

ಸಾಮಾಜಿಕ ನ್ಯಾಯಕ್ಕೆ ವಿರುದ್ದ: ‘ಸತತ ಭೇಟಿ ಮತ್ತು ಮನವಿ ಬಳಿಕ ಪ್ರತಿಕ್ರಿಯಿಸಿರುವ ಇಲಾಖೆಯು, ನಿಯಮಾವಳಿ ತಿದ್ದುಪಡಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ಸಿಕ್ಕರೆ ಬಡ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಲೇ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಷಗಳಿಂದ ನಾವೂ ಮನವಿ ಕೊಡುತ್ತಾ ಬಂದರೂ ಪ್ರಯೋಜನವಾಗಿಲ್ಲ’ ಎಂದು ಸಕಲೇಶಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಡಿ. ನಾರಾಯಣ್ ಬೇಸರ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿದ್ದರೂ ಮುಂಬಡ್ತಿ ವಿಷಯದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಈ ವಿಳಂಬ ಧೋರಣೆಯಿಂದ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿ‌ರುವರಿಗೂ ಮುಂದೆ ಅನ್ಯಾಯವಾಗಲಿದೆ. ಹಾಗಾಗಿ, ನಿಯಮಾವಳಿಗೆ ಆದಷ್ಟು ಬೇಗ ತಿದ್ದುಪಡಿ ತಂದು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.