ADVERTISEMENT

ಕೊರಳ ಬದಲಿಗೆ ತಲೆಗೆ ವೇಲ್‌ ಸುತ್ತಿದ್ದಕ್ಕೆ ವಿವಾದ: ಎಸ್‌ಡಿಪಿಐ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 9:20 IST
Last Updated 12 ಫೆಬ್ರುವರಿ 2022, 9:20 IST
   

ರಾಮನಗರ: ‘ವಿದ್ಯಾರ್ಥಿನಿಯರು ಶಾಲೆಯಲ್ಲಿನ ಸಮವಸ್ತ್ರದ ವೇಲ್‌ ಅನ್ನು ಕೊರಳಿಗೆ ಸುತ್ತುವ ಬದಲು ತಲೆಗೆ ಸುತ್ತಿದ್ದನ್ನೇ ತಪ್ಪು ಎಂಬಂತೆ ಬಿಂಬಿಸಲಾಗಿದೆ. ಕೋಮು ವಿಷಬೀಜ ಬಿತ್ತುವ ವಿದ್ಯಾರ್ಥಿ ಸಂಘಟನೆಗಳಿಗೆ ಇದೇ ಪುಷ್ಟಿ ನೀಡಿದಂತಾಗಿದೆ’ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಅಸಮಾಧಾನ ವ್ಯಕ್ತಪಡಿಸಿದರು.

‘ಬಸವಣ್ಣನಂತಹವರು ಹುಟ್ಟಿದ ನಾಡಿನಲ್ಲಿ ಸ್ವಾತಂತ್ರ್ಯ ಬಂದ 70 ವರ್ಷದ ನಂತರವೂ ಹಿಜಾಬ್‌ ಧರಿಸುವ ವಿಚಾರ ಎಲ್ಲಿಯೂ ಚರ್ಚೆ ಆಗಿರಲಿಲ್ಲ. ಇದೀಗ ಇದೇ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದೆ. ಮುಂದಿನ ವಿಚಾರಣೆವರೆಗೂ ಯಾವುದೇ ಧಾರ್ಮಿಕ ಆಚರಣೆಗಳನ್ನು ಶಾಲೆಗೆ ತರಬೇಡಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಧಾರ್ಮಿಕ ಆಚರಣೆ ವ್ಯಾಪ್ತಿಯಲ್ಲಿ ಕುಂಕುಮ, ತಾಳಿ, ಬಳೆ, ಹಿಜಾಬ್‌ ಎಲ್ಲವೂ ಬರುತ್ತದೆಯೇ ಎಂಬುದನ್ನು ಕಾದು ನೋಡೋಣ. ಹೈಕೋರ್ಟ್‌ ಪೀಠವು ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿದ್ದು, ನ್ಯಾಯಾಧೀಶರೇ ಸ್ಪಷ್ಟಪಡಿಸುವವರೆಗೂ ಕಾಯೋಣ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕೇಸರಿ ಶಾಲನ್ನು ಛೂ ಬಿಟ್ಟು ಹಿಜಾಬ್‌ ವಿಚಾರವನ್ನು ಉದ್ದೇಶಪೂರ್ವಕವಾಗಿ ಬಿಂಬಿಸಲಾಗುತ್ತಿದೆ. ರಾಜ್ಯ ಸರ್ಕಾರ ಎಲ್ಲ ವಿಚಾರದಲ್ಲೂ ವಿಫಲ ಆಗಿದೆ. ತನ್ನ ವೈಫಲ್ಯ ಮುಚ್ಚುಹಾಕಲು ಈ ವಿಚಾರವನ್ನು ಮುಂದೆ ತರಲಾಗಿದೆ’ ಎಂದು ಅವರು ದೂರಿದರು.

ADVERTISEMENT

‘ಸಮವಸ್ತ್ರ ಎಂಬುದು ವಿದ್ಯಾರ್ಥಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಬಿತ್ತುವ ವಿಚಾರ. ಹಿಜಾಬ್‌ ಧರಿಸುವುದರಿಂದ ಸಮವಸ್ತ್ರ ವಿಚಾರದಲ್ಲಿ ಯಾವುದೇ ಕುಂದು ಉಂಟಾಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.