ADVERTISEMENT

ಪ್ರಚಾರಕ್ಕೆ ಮಾತನಾಡದೆ ಬದ್ಧತೆ ತೋರಿಸಲಿ: ದೇವೇಗೌಡ ವಿರುದ್ಧ ಡಿಕೆಶಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 9:27 IST
Last Updated 7 ಫೆಬ್ರುವರಿ 2025, 9:27 IST
<div class="paragraphs"><p>ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್</p></div>

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

   

ಕನಕಪುರ (ರಾಮನಗರ): ‘ಪ್ರಧಾನಿ ಮೋದಿ ಅವರ ಕೈ ಹಿಡಿದು ಮೇಕೆದಾಟು ಅಣೆಕಟ್ಟೆ ಯೋಜನೆಗೆ ಸಹಿ ಹಾಕಿಸುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಹೇಳಿದ್ದರು. ಇನ್ನೂ ಯಾಕೆ ಸಹಿ ಹಾಕಿಸಿಲ್ಲ? ಕೇವಲ ಪ್ರಚಾರಕ್ಕೆ ಮಾತನಾಡದೆ, ರಾಜಕೀಯ ಬದ್ಧತೆ ಪ್ರದರ್ಶಿಸಬೇಕು. ಅವರ ಹಿರಿತನಕ್ಕಿರುವ ಗೌರವವನ್ನು ಉಳಿಸಿಕೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆಯ ಆಸೆ’ ಎಂಬ ದೇವೇಗೌಡರ ಹೇಳಿಕೆ ಕುರಿತು ತಾಲ್ಲೂಕಿನ ಶಿವನಹಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ನಾವು ಮೇಕೆದಾಟು ಪಾದಯಾತ್ರೆ ಮಾಡಿದಾಗ ಇವರೇ ಟೀಕಿಸಿದ್ದರು. ಈಗ ಅವರ ಮೈತ್ರಿಕೂಟವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಯಾಕೆ ಅನುಮತಿ ಕೊಡಿಸಿಲ್ಲ?’ ಎಂದು ಪ್ರಶ್ನಿಸಿದರು.

ADVERTISEMENT

‘ಈ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಚರಿತ್ರೆಗೆ ಸೇರುವಂತಹ ಕೆಲಸ ಮಾಡಿದ್ದಾನೆ. ನಾನು ಡಿಸಿಎಂ ಆದ ತಕ್ಷಣ ಎಲ್ಲಾ ಕಡೆ ಕುಡಿಯುವ ನೀರನ್ನು ಮೀಸಲಿಟ್ಟಿದ್ದು, ಹಳ್ಳಿಗಳಿಗೂ ನೀರು ಕೊಡಲಾಗುತ್ತಿದೆ. ತೊರೆಕಾಡನಹಳ್ಳಿ ಮತ್ತು ಎತ್ತಿನಹೊಳೆಯಿಂದ ನೀರು ತಂದಿದ್ದೇವೆ. ತುಮಕೂರಿನವರೆಗೂ ನೀರು ಕೊಡಲಿದ್ದೇವೆ. ಹಿಂದಿನ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರ ಈ ಕೆಲಸ ಮಾಡಲಿಲ್ಲ. ಇದು ಕಾಂಗ್ರೆಸ್‌ ಸಂಕಲ್ಪ’ ಎಂದರು.

ಎಚ್‌ಡಿಕೆಗಿಲ್ಲ ಜವಾಬ್ದಾರಿ: ‘ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರುವ ಕುರಿತು, ರಾಜ್ಯದ ಯಾವ ಸಚಿವರೂ ನನ್ನೊಂದಿಗೆ ಚರ್ಚಿಸಿಲ್ಲ ಎಂದಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದ. ಅವರ ಜೊತೆ ಯಾಕೆ ಚರ್ಚಿಸಬೇಕು? ರಾಜ್ಯಕ್ಕೇನು ಕೊಡಿಸಬೇಕು ಎಂಬ ಜವಾಬ್ದಾರಿ ಅವರಿಗಿಲ್ಲವೇ?’ ಎಂದು ತಿರುಗೇಟು ನೀಡಿದರು.

‘ಬಜೆಟ್‌ಗೆ ಮುಂಚೆ ನಮ್ಮ ಸಚಿವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ಇಷ್ಟಕ್ಕೂ ಕುಮಾರಸ್ವಾಮಿ ಅವರೇನು ಹಣಕಾಸು ಸಚಿವರಾ? ಅವರಿಗೆ ರಾಜ್ಯದ ಕುರಿತು ಕಾಳಜಿ ಇದ್ದರೆ ಕೆಲಸ ಮಾಡಬೇಕು. ಆದರೆ, ಅವರಿಗೆ ರಾಜ್ಯ ಮತ್ತು ದೇಶದ ಕುರಿತ ಕಾಳಜಿಗಿಂತ ವೈಯಕ್ತಿಕ ಹಿತಾಸಕ್ತಿಯೇ ಹೆಚ್ಚು’ ಎಂದು ವಾಗ್ದಾಳಿ ನಡೆಸಿದರು.

‘ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಸಿಕ್ಕಿಲ್ಲ. ರಾಜ್ಯದ ಪರವಾಗಿ ದೇವೇಗೌಡರು, ಕುಮಾರಸ್ವಾಮಿ, ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಆಡಳಿತ ಪಕ್ಷದ ಸಂಸದರು ದನಿ ಎತ್ತಿಲ್ಲ. ಯಾವ ಯೋಜನೆಗೂ ಅನುಮತಿ ಕೊಡಿಸದಿದ್ದರೂ ದೊಡ್ಡ ಮಾತುಗಳನ್ನಾಡುತ್ತಾರೆ. ನಮ್ಮನ್ನು ಟೀಕೆ ಮಾಡುವುದರಿಂದ ಅವರಿಗೆ ಸಂತೋಷವಾಗುತ್ತಿದೆ. ಆಗಲಿ, ಅವರ ಸಂತೋಷವೇ ನಮ್ಮ ಸಂತೋಷ’ ಎಂದು ವ್ಯಂಗ್ಯವಾಡಿದರು.

‘ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ಜೋತಿಷ್ಯ ಕಲಿಯುತ್ತಿದ್ದಾರೆಂದು ತಿಳಿದು ಸಂತೋಷವಾಯಿತು. ನನಗೂ ಈ ಜ್ಯೋತಿಷ್ಯದ ಚಟವಿದೆ. ಸಮಯ ಕೊಟ್ಟರೆ ನಾನೂ ಅವರ ಬಳಿಗೆ ಹೋಗಿ ಜ್ಯೋತಿಷ್ಯ ಕೇಳಿಕೊಂಡು ಬರುತ್ತೇನೆ’ ಎಂದು ‘ನವೆಂಬರ್‌ನಲ್ಲಿ ಸಿದ್ದರಾಮಯ್ಯ ಅವರು ಸಿ.ಎಂ ಕುರ್ಚಿಯಲ್ಲಿ ಇರಲ್ಲ’ ಎಂಬ ಆರ್. ಅಶೋಕ ಮಾತಿಗೆ ವ್ಯಂಗ್ಯವಾಡಿದರು.

‘ಇನ್ನೆರಡು ದಿನದಲ್ಲಿ ಬಜೆಟ್ ದಿನಾಂಕ ಘೋಷಣೆ’
‘ಇನ್ನೆರಡು ದಿನಗಳಲ್ಲಿ ಬಜೆಟ್ ದಿನಾಂಕ ಘೋಷಣೆಯಾಗಲಿದೆ. ಮುಖ್ಯಮಂತ್ರಿ ಕೂಡ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಜೆಟ್ ಮುಂಡಿಸಲು ತಯಾರಿ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ನಾವು ಕೊಟ್ಟಿರುವ ಆರ್ಥಿಕ ಶಕ್ತಿ. ವರ್ಷಕ್ಕೆ ₹56 ಸಾವಿರ ಕೋಟಿ ಮೊತ್ತವು ಜನರನ್ನು ತಲುಪುತ್ತಿದೆ. ಬದುಕಿನ ಸುಧಾರಣೆ ಹಾಗೂ ಸ್ವಾವಲಂಬನೆಗಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ’ ಎಂದು ಬಜೆಟ್ ತಯಾರಿ ಕುರಿತ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ‘ಭಾರತದ ವಲಸಿಗರನ್ನು ಅಮೆರಿಕ ಹೀನಾಯವಾಗಿ ನಡೆಸಿಕೊಂಡಿರುವುದು ಖಂಡನೀಯ. ರಾಜಕಾರಣಕ್ಕಿಂತ ಮಾನವೀಯತೆ ಮುಖ್ಯ. ಹಿಂದೆ ಜೀತದಾಳುಗಳ ಕಾಲಿಗೆ ಸರಪಳಿ ಹಾಕಿ ಕೆಲಸ ಮಾಡಿಸುತ್ತಿದ್ದರು. ಈಗ, ಹೆಚ್ಚಿನ ತಿಳಿವಳಿಕೆ ಇರುವ ಅಮೆರಿಕದಂತಹ ದೇಶದಲ್ಲೇ ಇಂತಹ ಘಟನೆ ನಡೆದರೆ ಹೇಗೆ? ವಲಸಿಗರನ್ನು ಕೈದಿಗಳ ರೀತಿ ನೋಡಬಾರದು. ಅಮೆರಿಕದ ನಡೆ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.