ADVERTISEMENT

ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ‘ಕರ್ನಾಟಕ ಪಬ್ಲಿಕ್ ಶಾಲೆ’

1ರಿಂದ 12ನೇ ತರಗತಿವರೆಗೆ ಇನ್ನು ಒಂದೇ ಶಾಲೆ!

ಎಸ್.ರುದ್ರೇಶ್ವರ
Published 27 ಆಗಸ್ಟ್ 2018, 13:34 IST
Last Updated 27 ಆಗಸ್ಟ್ 2018, 13:34 IST
ಕರ್ನಾಟಕ ಪಬ್ಲಿಕ್ ಶಾಲೆಗೆ ಆಯ್ಕೆಯಾಗಿರುವ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ಪದವಿ ಪೂರ್ವ ಕಾಲೇಜು
ಕರ್ನಾಟಕ ಪಬ್ಲಿಕ್ ಶಾಲೆಗೆ ಆಯ್ಕೆಯಾಗಿರುವ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ಪದವಿ ಪೂರ್ವ ಕಾಲೇಜು   

ರಾಮನಗರ: ಸರ್ಕಾರಿ ಶಾಲಾ ಮಕ್ಕಳಿಗೆ ಏಕೀಕೃತ ವ್ಯವಸ್ಥೆಯಡಿ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು 176 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಆಗಿ ಅಭಿವೃದ್ಧಿಪಡಿಸುತ್ತಿದೆ.

ಇದರಲ್ಲಿ 1ರಿಂದ 12ನೇ ತರಗತಿಯವರೆಗೆ ಒಂದೇ ಆಡಳಿತ ವ್ಯವಸ್ಥೆಯಡಿ ವಿದ್ಯಾರ್ಜನೆ ಸಾಧ್ಯವಾಗಲಿದೆ. ಜಿಲ್ಲೆಯ ಅವ್ವೇರಹಳ್ಳಿ ಸೇರಿದಂತೆ ಹಲವು ಶಾಲೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ 2017ರಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಯಿತು. ಈ ಸಂಬಂಧ ಸರ್ವೆ ನಡೆದು ಜಿಲ್ಲೆಯ ನಾಲ್ಕು ಶಾಲೆಗಳು ಕೆಪಿಎಸ್‌ಗೆ ಆಯ್ಕೆಯಾಗಿವೆ.

ADVERTISEMENT

ಮೂಲ ಸೌಕರ್ಯಕ್ಕೆ ಒತ್ತು: ಈ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್‌, ಶೌಚಾಲಯ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಪೀಠೊಪಕರಣಗಳು, ಆಟದ ಮೈದಾನ ಇರಲಿವೆ.

ಸರಾಸರಿ 500 ಮೀ. ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿ ಕರ್ನಾಟಕ ಪಬ್ಲಿಕ್‌ ಶಾಲೆ ಆಗಿ ಅಭಿವೃದ್ಧಿಗೊಳಿಸುವುದು ಯೋಜನೆಯಾಗಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಚ್. ಗಂಗಮಾರೇಗೌಡ.

ಮೂರೂ ಶಿಕ್ಷಣ ಸಂಸ್ಥೆಗಳ ಆಡಳಿತ ಉಸ್ತುವಾರಿಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ವಹಿಸಿ ಒಂದೇ ವ್ಯವಸ್ಥೆಯಡಿ ತರಲಾಗುತ್ತದೆ. 1ರಿಂದ 5ನೇ ತರಗತಿ ವರೆಗೆ ಕನ್ನಡ ಮಾಧ್ಯಮ, ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಇರುತ್ತದೆ ಎಂದು ತಿಳಿಸಿದರು.

ಪ್ರತಿ ಬಾರಿ ಟಿಸಿ ಪಡೆಯಬೇಕಿಲ್ಲ. 7ನೇ ಬಳಿಕ ವಿದ್ಯಾರ್ಥಿಗಳು ಟಿ.ಸಿ ಪಡೆದು ಬೇರೆ ಶಾಲೆಗೆ ಹೋಗಬೇಕಾಗುತ್ತದೆ. ಮತ್ತೆ ಪಿಯುಸಿಗೆ ದಾಖಲಾತಿ ಪಡೆಯಬೇಕು. ಆದರೆ ಕೆಪಿಎಸ್‌ನಲ್ಲಿ 1ನೇ ತರಗತಿಗೆ ಸೇರ್ಪಡೆಯಾದರೆ ದ್ವಿತೀಯ ಪಿಯುಸಿ ತನಕ ಒಂದೆಡೆ ವಿದ್ಯಾಭ್ಯಾಸಕ್ಕೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಅಗತ್ಯವಿರುವಷ್ಟು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಂಪ್ಯೂಟರ್, ಗಣಿತ, ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಯೋಗಿಕ ಕಲಿಕೆಗೆ ಹೆಚ್ಚು ಆದ್ಯತೆ ಕೊಡಲಾಗುವುದು. ಹಾಗೆಯೇ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚಿನ ಪ್ರೋತ್ಸಾಹ ಕೊಟ್ಟು, ಸಮಗ್ರ ಕಲಿಕೆಗೆ ಒತ್ತು ನೀಡಬೇಕು ಎಂಬುದು ಶಿಕ್ಷಣ ಇಲಾಖೆಯ ಧ್ಯೇಯವಾಗಿದೆ ಎಂದು ಅವರು ಹೇಳಿದರು.

ಪ್ರತಿ ತಾಲ್ಲೂಕಿನ ಪ್ರಮುಖ ಹಳ್ಳಿಯೊಂದರಲ್ಲಿ ಈಗಾಗಲೇ ಇರುವ ಪದವಿ ಪೂರ್ವ ಕಾಲೇಜುಗಳನ್ನೇ ಪಬ್ಲಿಕ್ ಶಾಲೆಗಳನ್ನಾಗಿ ಮಾರ್ಪಡಿಸಲಾಗಿದೆ. ಈ ಪಬ್ಲಿಕ್ ಶಾಲೆ ಸುತ್ತಲಿನ ಶಾಲೆಗಳಿಗೂ ಹತ್ತಿರದಲ್ಲಿ ಇದೆಯೇ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಆ ಊರಿನಲ್ಲಿರುವ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನೆಲ್ಲಾ ಒಗ್ಗೂಡಿಸಿ ಪಬ್ಲಿಕ್ ಶಾಲೆಯ ವ್ಯಾಪ್ತಿಗೆ ತರಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು, ಪಬ್ಲಿಕ್‌ ಶಾಲೆಯ ಪ್ರಾಚಾರ್ಯರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಎಲ್ಲೆಲ್ಲಿ ಕರ್ನಾಟಕ ಶಾಲೆ

ತಾಲ್ಲೂಕು ಗ್ರಾಮ
ರಾಮನಗರ ಅವ್ವೇರಹಳ್ಳಿ
ಮಾಗಡಿ ಕುದೂರು
ಚನ್ನಪಟ್ಟಣ ಅರಳಾಳುಸಂದ್ರ
ಕನಕಪುರ ದೊಡ್ಡಾಲಹಳ್ಳಿ


ಪ್ರತಿ ಗ್ರಾ.ಪಂ.ಗೆ ಒಂದರಂತೆ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ. ಸದ್ಯ ಪ್ರತಿ ತಾಲ್ಲೂಕಿಗೆ ಒಂದರಂತೆ ಶಾಲೆಗಳನ್ನು ಆರಂಭಿಸಲಾಗಿದೆ.
–ಎಂ.ಎಚ್. ಗಂಗಮಾರೇಗೌಡ,ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಇದಾಗಿದೆ. ಆಯ್ಕೆಯಾದ ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ನೇಮಕ ನಡೆಯಲಿದೆ
ಬಿ.ಎನ್‌. ಮರಿಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಪಬ್ಲಿಕ್ ಶಾಲೆಗಳನ್ನು ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಮುಂದಾಗಿರುವುದು ಶ್ಲಾಘನೀಯ.
ಮಹದೇವಪ್ಪ,ನಿವೃತ್ತ ಮುಖ್ಯಶಿಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.