ADVERTISEMENT

ಎಚ್ಎಸ್‌ವಿ ನಿಧನಕ್ಕೆ ಕಸಾಪ ಸಂತಾಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:07 IST
Last Updated 2 ಜೂನ್ 2025, 16:07 IST
ಚನ್ನಪಟ್ಟಣದ ಗಾಂಧಿಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು
ಚನ್ನಪಟ್ಟಣದ ಗಾಂಧಿಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು   

ಚನ್ನಪಟ್ಟಣ: ಮನಸ್ಸಿಗೆ ಮುದ ನೀಡುವ ಭಾವಗೀತೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್ ಹೇಳಿದರು.

ನಗರದ ಗಾಂಧಿಭವನದ ಬಳಿ ಜಿಲ್ಲಾ ಕಸಾಪ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸಿ, ಸುಗಮ ಸಂಗೀತ, ಕಿರುತೆರೆ, ಬೆಳ್ಳಿತೆರೆ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ್ದ ಎಚ್ಎಸ್‌ವಿ ಅವರು ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಶಿಕ್ಷಣ ಸಂಯೋಜಕ ಯೋಗೀಶ್ ಚಕ್ಕೆರೆ ಮಾತನಾಡಿ, ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಮುಂತಾದ ಚಲನಚಿತ್ರಗಳಿಗೆ ಗೀತ ಸಾಹಿತ್ಯ ರಚಿಸಿ ಗಮನ ಸೆಳೆದಿದ್ದರು. ಅವರ ನಿಧನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.

ADVERTISEMENT

ಲೇಖಕ ಶ್ರೀನಿವಾಸ ರಾಂಪುರ ಮಾತನಾಡಿ, ಎಚ್ಎಸ್‌ವಿ ಅವರು ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ಪಡೆದಿದೆ ಎಂದರು.

ಹೋರಾಟಗಾರ ನಾಗವಾರ ಶಂಭೂಗೌಡ, ಸಾಹಿತಿ ಮತ್ತೀಕೆರೆ ಬಿ.ಚಲುವರಾಜು, ನಿವೃತ್ತ ಅಧ್ಯಾಪಕರಾದ ಚೌಡೇಗೌಡ, ಟಿ.ಎನ್. ನಾಮದೇವ್, ಸಾಹಿತಿಗಳಾದ ಮಂಜೇಶ್ ಬಾಬು, ಕೂರಣಗೆರೆ ಕೃಷ್ಣಪ್ಪ, ಬಿ.ಎನ್.ಕಾಡಯ್ಯ, ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಚೌ.ಪು.ಸ್ವಾಮಿ, ಪ್ರಸನ್ನಕುಮಾರ್, ಚಕ್ಕೆರೆ ಲೋಕೇಶ್, ಶಿವಪ್ಪ, ಕಸಾಪ ಪದಾಧಿಕಾರಿಗಳಾದ ಮಂಜುನಾಥ್, ರಾಜೇಶ್ ವಂದಾರಗುಪ್ಪೆ, ಎಲ್ಲೇಗೌಡ ಬೈರಾಪಟ್ಟಣ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.