ADVERTISEMENT

ಕನಕಪುರ: ಎಲ್ಲಾ ಇದ್ದೂ, ಇಲ್ಲದಂತಾದ ವಸತಿ ನಿಲಯ

ಕನಕಪುರದ ಕಸ್ತೂರಬಾ ಗಾಂಧಿ ವಸತಿ ನಿಲಯ ಖಾಲಿ ಖಾಲಿ

ಬರಡನಹಳ್ಳಿ ಕೃಷ್ಣಮೂರ್ತಿ
Published 13 ಅಕ್ಟೋಬರ್ 2025, 2:18 IST
Last Updated 13 ಅಕ್ಟೋಬರ್ 2025, 2:18 IST
<div class="paragraphs"><p><strong>ಕನಕಪುರ ಹಳೆ ಬಿಇಓ ಕಚೇರಿ ಹಿಂಭಾಗದಲ್ಲಿರುವ ಕಸ್ತೂರಿ ಬಾ ಗಾಂಧಿ ವಸತಿ ನಿಲಯದ ಕಟ್ಟಡ</strong></p></div>

ಕನಕಪುರ ಹಳೆ ಬಿಇಓ ಕಚೇರಿ ಹಿಂಭಾಗದಲ್ಲಿರುವ ಕಸ್ತೂರಿ ಬಾ ಗಾಂಧಿ ವಸತಿ ನಿಲಯದ ಕಟ್ಟಡ

   

ಕನಕಪುರ: ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗಾಗಿ 2011ರಲ್ಲಿ ಆರಂಭವಾಗಿದ್ದ ಕರ್ನಾಟಕ ಕಸ್ತೂರಬಾ ಗಾಂಧಿ ವಸತಿ ನಿಲಯಕ್ಕೆ ಕೆಲವೇ ವರ್ಷಗಳಲ್ಲಿ ಬೀಗ ಬಿದ್ದಿದೆ. ಪಾಳು ಬಿದ್ದಿರುವ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. 

2011ರಲ್ಲಿ ಶಿಕ್ಷಣ ಇಲಾಖೆ ಕಸ್ತೂರಿ ಬಾ ಗಾಂಧಿ ವಸತಿ ನಿಲಯ ಆರಂಭಿಸಲು ಹಳೆ ಬಿಇಒ ಕಚೇರಿ ಹಿಂಭಾಗದಲ್ಲಿ ಜಾಗ ಗುರುತಿಸಿತ್ತು. ₹1.50 ಕೋಟಿ ವೆಚ್ಚದಲ್ಲಿ 2010ರಲ್ಲಿ ಕಟ್ಟಡ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಗುತ್ತಿಗೆದಾರರು 2011ರಲ್ಲಿ ಶಿಕ್ಷಣ ಇಲಾಖೆಗೆ ವಸತಿ ನಿಲಯ ಹಸ್ತಾಂತರಿಸಿದ್ದರು. 

ADVERTISEMENT

15 ಕೊಠಡಿ, 10 ಶೌಚಾಲಯ, 10 ಸ್ನಾನದ ಗೃಹಗಳ ಮೂರು ಅಂತಸ್ತಿನ ಕಟ್ಟಡದ ವಸತಿ ನಿಲಯದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅನ್ನ, ಆಶ್ರಯ ನೀಡಿತ್ತು.  

ನೂತನ ತಾಲ್ಲೂಕು ಕಚೇರಿ ನಿರ್ಮಾಣಕ್ಕಾಗಿ ಜಿ.ಕೆ.ಬಿ.ಎಂ.ಎಸ್ ಶಾಲೆ ಒಡೆದು ಹಾಕಲಾಯಿತು. ಶಾಲೆಗೆ ಎಲ್ಲಿಯೂ ಸೂಕ್ತ ಜಾಗ ದೊರಕದ ಕಾರಣ ಕಸ್ತೂರ ಬಾ ಗಾಂಧಿ ವಸತಿ ನಿಲಯದ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿತ್ತು.

ಐದು ವರ್ಷ ಒಂದೇ ಕಟ್ಟಡದಲ್ಲಿ ವಸತಿ ನಿಲಯ ಮತ್ತು ಜಿಕೆಬಿಎಂಎ‌ಸ್ ಶಾಲೆ ಕಾರ್ಯನಿರ್ವಹಿಸಿದ್ದವು. ನಂತರ ಟಿಟಿಸಿ ಕ್ಲಬ್ ಪಕ್ಕದ ಜಿಜಿಎಚ್ಎಸ್ ಶಾಲಾ ಆವರಣಕ್ಕೆ ಜಿಕೆಬಿಎಂಎಸ್ ಮತ್ತು ಎನ್ಎಲ್‌ಪಿಎಸ್ ಶಾಲೆಯನ್ನು ಸ್ಥಳಾಂತರಿಸಲಾಯಿತು.

ಜಿಕೆಬಿಎಂಎಸ್ ಸ್ಥಳಾಂತರದ ನಂತರ ವಸತಿ ನಿಲಯಕ್ಕೆ ಮೂಲಸೌಕರ್ಯ ಹಾಗೂ ನಿರ್ವಹಣೆ ಕೊರತೆ ಎದುರಾಯಿತು. ಕ್ರಮೇಣ ವಸತಿ ನಿಲಯಕ್ಕೆ ಮಕ್ಕಳ ದಾಖಲಾತಿ ಕುಸಿಯ ತೊಡಗಿತು. ನಂತರದ ದಿನಗಳಲ್ಲಿ ಮಕ್ಕಳ ದಾಖಲಾತಿ ಕೊರತೆ ಕಾರಣ ನೀಡಿ ವಸತಿ ನಿಲಯವನ್ನು ಸ್ಥಗಿತಗೊಳಿಸಲಾಯಿತು.

ಕನಕಪುರದ ಜೊತೆಗೆ ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ ಕಸ್ತೂರಬಾ ಗಾಂಧಿ ವಸತಿ ನಿಲಯ ಆರಂಭಿಸಲಾಗಿತ್ತು. ಆ ಎರಡೂ ತಾಲ್ಲೂಕಿನಲ್ಲಿ ಉತ್ತಮ ನಿರ್ವಹಣೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನಕಪುರದಲ್ಲಿ ವಿಶಾಲವಾದ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡ ಇದ್ದರೂ ವಸತಿ ನಿಲಯ ಬಾಗಿಲು ಮುಚ್ಚಿದೆ. 

ಕಟ್ಟಡ ಬಳಕೆಯಾಗದೆ ಖಾಲಿ ಬಿಟ್ಟಿದ್ದರಿಂದ ಕಿಡಿಗೇಡಿಗಳು ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಬಾಗಿಲುಗಳನ್ನು ಕಿತ್ತು ಓಯ್ದಿದ್ದಾರೆ. ಬಡ ಮಕ್ಕಳ ಭವಿಷ್ಯದ ಕನಸುಗಳಿಗೆ ನೀರೆರೆದು ಪೋಷಿಸಬೇಕಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ಕಟ್ಟಡವೀಗ ಕುಡುಕರು ಅಡ್ಡೆಯಾಗಿದೆ. ಖಾಲಿ ಕಟ್ಟಡ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.    

ವಸತಿ ನಿಲಯದ ಕಟ್ಟಡದಲ್ಲಿ ತ್ಯಾಜ್ಯಗಳು ತುಂಬಿರುವುದು

ಕಿಟಕಿ ಗಾಜುಗಳನ್ನು ಒಡೆದು ಹಾಕಿರುವುದು

ಕಟ್ಟಡದಲ್ಲಿ ಇದ್ದಂತಹ ವಸತಿ ನಿಲಯವನ್ನು ಸ್ಥಗಿತ ಗೊಳಿಸದ ಮೇಲೆ ಬೆಡ್‌ಗಳನ್ನು ಅಲ್ಲಿಯೇ ಬಿಟ್ಟು ಹಾಳಾಗಿರುವುದು

ವಸತಿ ನಿಲಯದ ಕಟ್ಟಡಗಳು ಹಾಳಾಗಿ ಕಸ, ಬಾಟಲ್ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.