
ಮಾಗಡಿ: ಕೆಂಪೇಗೌಡರ ಕಾಲದ ಕೆಂಪಸಾಗರ ಕೆರೆ ತೆಪ್ಪೋತ್ಸವಕ್ಕೆ ಶಾಸಕ ಎಚ್.ಸಿ. ಬಾಲಕೃಷ್ಣ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಗ್ರಾಮಸ್ಥರು ಹಿಂದಿನಿಂದಲೂ ಕೆರೆ ಕೋಡಿಯಾದ ನಂತರ ತೆಪ್ಪೋತ್ಸವ ಮಾಡುವುದು ವಾಡಿಕೆ. ಅದರಂತೆ ಈ ಬಾರಿಯೂ ಕೆರೆಯ ಕೋಡಿ ಭಾಗದಲ್ಲಿ ತೆಪ್ಪಕ್ಕೆ ಪೂಜೆ ಸಲ್ಲಿಸಿ ತೆಪ್ಪದಲ್ಲಿ ಒಂದು ಕಳಸ ಮತ್ತು ಮೇಕೆಯನ್ನು ಕಟ್ಟಿ ಕೋಡಿಯ ವಿರುದ್ಧದ ದಡಕ್ಕೆ ಬಿಡಲಾಗುತ್ತದೆ. ತೆಪ್ಪ ನೇರವಾಗಿ ಕೋಡಿಯ ಬಳಿಗೆ ತಾನಾಗಿಯೇ ಬಂದು ಸೇರುತ್ತದೆ ಎಂಬ ವಾಡಿಕೆ ಇದೆ.
ಗ್ರಾಮಸ್ಥರ ಬೇಡಿಕೆಯಂತೆ ಕೆರೆ ಏರಿಯನ್ನು ಅಗಲ ಮಾಡಿ ಹುಲಿಯೂರು ದುರ್ಗಾ ಮುಖ್ಯರಸ್ತೆಯಿಂದ ಹಾಲಸಿಂಗನಹಳ್ಳಿವರೆಗೆ ಡಾಂಬರು ರಸ್ತೆ ಮಾಡುವಂತೆ ಒತ್ತಾಯ ಮಾಡಿದ್ದರು. ಅದರಂತೆ ರಸ್ತೆ ಮತ್ತು ಕೆರೆ ಏರಿ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾ.ಪಂ.ಮಾಜಿ ಸದಸ್ಯ ಸುಮಾ ರಮೇಶ್ ಮಾತನಾಡಿ, ಕೆರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದು ಬಂದು ಗಂಗೆ ಪೂಜೆ ಸಲ್ಲಿಸುತ್ತಾರೆ. ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು ಎಲ್ಲ ಭಕ್ತರಿಗೂ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ಅನ್ನ ಸಂತರ್ಪಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ. ಚಂದ್ರೇಗೌಡ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಕಲ್ಕೆರೆ ಶಿವಣ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.