ಮಾಗಡಿ: ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ನ್ಯಾಯಾಲಯವು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಮಾಗಡಿ ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 22ರಂದು ಮುಂದೂಡಿತು.
ಪ್ರತಿಮೆ ಇರುವ ಜಾಗದಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ಉತ್ತರ ಭಾಗಕ್ಕೆ ಸ್ಥಳಾಂತರಿಸಲು ಯೋಜಿಸಲಾಗಿದೆ. ಇದರ ವಿರುದ್ಧ ಕೃಷ್ಣಮೂರ್ತಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರ ಪರ ವಕೀಲರು, ಯಾವುದೇ ಮುನ್ಸೂಚನೆ ಅಥವಾ ಚರ್ಚೆ ಇಲ್ಲದೆ ಸ್ಥಳಾಂತರಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ರೀತಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಲು ಯತ್ನಿಸಿದಾಗ ಉಂಟಾದ ಗಲಭೆ ಉಲ್ಲೇಖಿಸಿದರು. ಪ್ರತಿಮೆ ಸ್ಥಳಾಂತರ ತಡೆಯಲು ನಿರ್ದೇಶನ ನೀಡಬೇಕು ಮತ್ತು ಅರ್ಜಿ ನಿರ್ಧಾರವಾಗುವವರೆಗೆ ಯಥಾಸ್ಥಿತಿ ಉಳಿಸಿಕೊಳ್ಳಬೇಕು ಎಂದು ಕೋರಿದರು.
ಇದಕ್ಕೆ ನ್ಯಾಯಪೀಠವು, ಪ್ರತಿಮೆ ಸ್ಥಳವನ್ನು ನಿರ್ಧರಿಸುವುದು ಪುರಸಭೆ ಆಡಳಿತಾತ್ಮಕ ನಿರ್ಣಯವಾಗಿದೆ ಎಂದು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.