ADVERTISEMENT

ಕೆಂಪೇಗೌಡರ ಪ್ರತಿಮೆ ತೆರವು ವಿರೋಧಿಸಿ ಜೆಡಿಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 3:01 IST
Last Updated 15 ಅಕ್ಟೋಬರ್ 2025, 3:01 IST
ಮಾಗಡಿಯ ಕೆಂಪೇಗೌಡ ಪ್ರತಿಮೆ ಸ್ಥಳಾಂತರಕ್ಕೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಗಡಿಯ ಕೆಂಪೇಗೌಡ ಪ್ರತಿಮೆ ಸ್ಥಳಾಂತರಕ್ಕೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಮಾಗಡಿ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ವಿರೋಧಿಸಿ ಜೆಡಿಎಸ್ ಮಂಗಳವಾರ ಪಟ್ಟಣದ ಕೆಂಪೇಗೌಡರ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಳಾಂತರ ಮಾಡಲು ಬಿಡುವುದಿಲ್ಲ. ಒಂದು ವೇಳೆ ಸ್ಥಳಾಂತರಕ್ಕೆ ಮುಂದಾದರೆ ಜೆಡಿಎಸ್‌ ಉಗ್ರ ಹೋರಾಟ ನಡೆಸಲಿದೆ ಎಂದು ಕಾರ್ಯಕರ್ತರು, ಮುಖಂಡರು ಎಚ್ಚರಿಕೆ ನೀಡಿದರು.

ದ್ವೇಷ ರಾಜಕಾರಣ ಮಾಡುತ್ತಿರುವ ಶಾಸಕ ಎಚ್‌.ಸಿ. ಬಾಲಕೃಷ್ಣ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಮುಖಂಡರು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಬಡವರಿಗೆ ಅನುಕೂಲವಾಗುವ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ನಾವು ಅಭಿವೃದ್ಧಿಗೆ ವಿರೋಧ ಮಾಡುವುದಿಲ್ಲ. ಆದರೆ, ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡದೆ ಅಭಿವೃದ್ಧಿ ಮಾಡಲಿ’ ಎಂದು ಪುರಸಭಾ ಸದಸ್ಯ ಎಂ.ಎನ್. ಮಂಜುನಾಥ್ ಒತ್ತಾಯಿಸಿದರು.

ಕೆಂಪೇಗೌಡರ ಪ್ರತಿಮೆ ತೆರವು ಮಾಡಿ ಯಾವ ಜಾಗದಲ್ಲಿ ಸ್ಥಾಪಿಸುತ್ತಾರೆ ಎಂದು ಶಾಸಕರು ತಿಳಿಸಿಲ್ಲ. ಏಕಾಏಕಿ ಪ್ರತಿಮೆ ಸ್ಥಳಾಂತರ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಲೂ ಕಾಲ ಮಿಂಚಿಲ್ಲ. ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿ ಕಾರ್ಯ ಮಾಡಲಿ. ಯಾವುದೇ ಕಾರಣಕ್ಕೂ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಬೇಡ ಎಂದರು.  

ಶಾಸಕ ಬಾಲಕೃಷ್ಣ  ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ಯಾರಿಗೂ ತೊಂದರೆ ಕೊಡುತ್ತಿಲ್ಲ. ಈ ಹಿಂದೆ ಕೂಡ ಎನ್ಇಎಸ್ ವೃತದಲ್ಲಿದ್ದ ಗಾಂಧಿ‌ ಪುತ್ಥಳಿಯನ್ನು ವಿರೋಧದ ನಡುವೆಯೂ ತೆರವು ಮಾಡಲಾಗಿತ್ತು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ನೆನಪಿಸಿಕೊಂಡರು.

ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಬೇರೆ ಕಡೆ ಸಾಕಷ್ಟು ಜಾಗ ಇರುವುದರಿಂದ ಈ ಜಾಗವನ್ನು ಕೆಂಪೇಗೌಡರ ಪ್ರತಿಮೆಗೆ ಮೀಸಲಾಗಿ ಇಡಬೇಕು. ಇಲ್ಲವಾದರೆ ಜೆಡಿಎಸ್ ಉಗ್ರ ಹೋರಾಟ ನಡೆಸಲಿದೆ ಎಂದು ಗ್ರಾ.ಪಂ.ಸದಸ್ಯ ಮರೂರು ಸಾಗರ್ ಎಚ್ಚರಿಕೆ ನೀಡಿದರು.

ಶಿವಕುಮಾರ್, ಕೆಂಪೇಗೌಡ, ಬಾಲಕೃಷ್ಣ, ಮಹೇಶ್, ಕೆ.ವಿ.ಬಾಲು, ಹೊಸಹಳ್ಳಿ ರಂಗಣಿ, ಬುಡನ್ ಸಾಬ್, ಸ್ವಾಮಿ, ಆನಂದ್, ರಾಮಣ್ಣ, ಜಯರಾಂ, ಪಂಚೆ ರಾಮಣ್ಣ, ಬೆಳಗುಂಬ ಕೋಟಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.