ADVERTISEMENT

‘ಕೌರವೇಂದ್ರನ ಕೊಂದೆ ನೀನು’ ಗಮಕ ವಾಚನ

ಬೈರಾಪಟ್ಟಣ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 4:22 IST
Last Updated 18 ಜನವರಿ 2023, 4:22 IST
ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಬಿಇಒ ಮರಿಗೌಡ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಕೌಶಲ್ಯ, ಇತರರು ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಬಿಇಒ ಮರಿಗೌಡ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಕೌಶಲ್ಯ, ಇತರರು ಇದ್ದರು   

ಚನ್ನಪಟ್ಟಣ: ತಾಲ್ಲೂಕಿನ ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಕನ್ನಡ ಪಠ್ಯಪುಸ್ತಕ ಕುಮಾರವ್ಯಾಸ ಭಾರತದ ‘ಕೌರವೇಂದ್ರನ ಕೊಂದೆ ನೀನು’ ಪದ್ಯ ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ, ‘ನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಗಮಕ ಮಹತ್ತರವಾದ ಪಾತ್ರ ವಹಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು. ಬೊಂಬೆನಾಡು ಗಮಕ ಪರಂಪರಾ ಸಂಸ್ಕೃತಿ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.

ತಾಲ್ಲೂಕಿನ ಎಲ್ಲ ಪ್ರೌಢಶಾಲೆಗಳ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ ವಿಷಯದ ಹಳೆಗನ್ನಡದ ಪದ್ಯಗಳನ್ನು ರಾಗಬದ್ಧವಾಗಿ ವಾಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು
ಉತ್ತಮ ಅಂಕ ಗಳಿಸಲು ಉತ್ತೇಜಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೌಶಲ್ಯ ಮಾತನಾಡಿ, ‘ಮಕ್ಕಳಿಗೆ ಶಾಲಾ ಹಂತದಲ್ಲೇ ಗಮಕ ಕಲೆ ಕುರಿತು ಅಭ್ಯಾಸ ಮಾಡಿಸಬೇಕು. ಇದರಿಂದ ಭಾಷಾ ಪಾಂಡಿತ್ಯ, ಕಲೆಯ ಹೆಜ್ಜೆ ಗುರುತು ಸರಳವಾಗಿ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದೆ’ ಎಂದರು.

ಟ್ರಸ್ಟ್ ಕಾರ್ಯದರ್ಶಿ ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಮಕಿ ಮಳೂರು ಪಟ್ಟಣ ಪುಟ್ಟಸ್ವಾಮಿ ಕುಮಾರವ್ಯಾಸ ಭಾರತದ ಕೌರವೇಂದ್ರನ ಕೊಂದೆ ನೀನು ಪದ್ಯ ಭಾಗವನ್ನು ವಾಚಿಸಿದರು. ನಿವೃತ್ತ ಕನ್ನಡ ಪಂಡಿತ ಬೈ.ಪು. ಪ್ರಭುಸ್ವಾಮಿ ವ್ಯಾಖ್ಯಾನ ಮಾಡಿದರು.

ಸಂಸ್ಕೃತಿ ಚಿಂತಕಿ ವಿನೋಧಾ, ಟ್ರಸ್ಟ್ ಸಂಚಾಲಕರಾದ ಸಿ.ಕೆ. ಯೋಗಾನಂದ, ಸಿ.ಕೆ. ಸಾವಿತ್ರಿ, ಶಿಕ್ಷಕ ಕರಿಯಪ್ಪ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಗುರುಮಾದಯ್ಯ, ಬಿಇಒ ಕಚೇರಿ ಅಧೀಕ್ಷಕ ಪ್ರಶಾಂತ್ ಶರ್ಮ, ಶಿಕ್ಷಕರಾದ ರಾಘವೇಂದ್ರ ಮಯ್ಯ, ರಾಜಶೇಖರ ಇಟಗಿ, ಆನಂದ್, ದೀಪಾ, ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.