ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಗರಂ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 7:55 IST
Last Updated 10 ಜನವರಿ 2024, 7:55 IST
ಕುದೂರು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಭಾಗವಹಿಸಿದ್ದರು
ಕುದೂರು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಭಾಗವಹಿಸಿದ್ದರು   

ಕುದೂರು: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಸಕರ ಜನಸ್ಪಂದನ ಕಾರ್ಯಕ್ರಮ ಜರುಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಜಿಲ್ಲಾಧಿಕಾರಿಗೆ ವರದಿ ಮಾಡಲಾಗುತ್ತದೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ, ಇಲ್ಲಿರುವವರೆಗೂ ಸರಿಯಾಗಿ ಕಾರ್ಯನಿರ್ವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.

‘ಯಾವುದೇ ಮಾಹಿತಿ ತೆಗೆದುಕೊಂಡು ಬರದೇ, ನೆಂಟರ ಮನೆಗೆ ಬಂದಂತೆ ಬರುತ್ತೀರಾ. ಶಾಸಕರ ಜನಸ್ಪಂದನ ಕಾರ್ಯಕ್ರಮದ ದಿನ ಖುದ್ದು ಮುಖ್ಯಮಂತ್ರಿಗಳೇ ಸಭೆ ಕರೆದರೂ ಹೋಗುವಂತಿಲ್ಲ, ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಕಡೆ ಗಮನವಿರಬೇಕು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

ಕಳೆದ ತಿಂಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಪರಿಹಾರ ಸಿಕ್ಕಿದೆಯಾ ಎಂದು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದರು. ಆಗ ಸಂಬಂಧಿಸಿದ ಅರ್ಜಿದಾರರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ಮಾಡುತ್ತಿರುವಾಗ ಅಧಿಕಾರಿಗಳ ಬೇಜವಾಬ್ದಾರಿತನ ಶಾಸಕರ ಗಮನಕ್ಕೆ ಬಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಜವಾಬ್ದಾರಿಗಳನ್ನ ಅರಿತು ಕೆಲಸ ನಿರ್ವಹಿಸಿದರೆ ಜನಸ್ಪಂದನ ಕಾರ್ಯಕ್ರಮದ ಅವಶ್ಯಕತೆಯೇ ಬರುವುದಿಲ್ಲ. ಇಂತಹ ನಡವಳಿಕೆಯಿಂದಲೇ ಜನರು ಆಡಳಿತದ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮನೆಗೆ ಕಳುಹಿಸುವುದು ಶತಃಸಿದ್ಧ ಎಂದು ಗುಡುಗಿದರು.

ತಾಲ್ಲೂಕಿನಲ್ಲಿಯೇ ಸಾಕಷ್ಟು ಸಮಸ್ಯೆಗಳಿರುವಾಗ ಇಲ್ಲಿನ ಎಡಿಎಲ್ಆರ್ ಅಧಿಕಾರಿಯನ್ನು ಬೇರೆ ತಾಲ್ಲೂಕಿಗೆ ನಿಯೋಜನೆ ಮಾಡಿರುವ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ನಿಯೋಜನೆ ಮಾಡುವಾಗ ಗಮನಕ್ಕೆ ತರಬೇಕೆಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಚಂದ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷೆ ರಮ್ಯಾ ಜ್ಯೋತಿ, ಸದಸ್ಯರಾದ ನಿರ್ಮಲಾ, ಸಂಧ್ಯಾ, ಬಾಲರಾಜು, ಹನುಮಂತರಾಯಪ್ಪ, ಜಯರಾಮ್, ಪಿಡಿಒ ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್, ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಕುದೂರು ಗ್ರಾಮ ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ಸೋಮವಾರ ಶಾಸಕರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.