
ಚನ್ನಪಟ್ಟಣ (ರಾಮನಗರ): ‘ಬ್ಯಾಂಕಿನ ಗ್ರಾಹಕರು ತಮ್ಮ ಖಾತೆಗಳಿಗೆ ಕೆವೈಸಿ ಮರು ಜೋಡಣೆ ಮಾಡಬೇಕು. 14 ಅಂಕಿಯ ಸಿಕೆವೈಸಿ ಐ.ಡಿ.ಯನ್ನು ಬ್ಯಾಂಕುಗಳ ಮೂಲಕ ಪಡೆದುಕೊಳ್ಳಬೇಕು. ಇತ್ತೀಚೆಗೆ ನಡೆಯುತ್ತಿರುವ ಡಿಜಿಟಲ್ ವಂಚನೆಗಳ ಬಗ್ಗೆ ಜಾಗರೂಕರಾಗಬೇಕು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಬಬುಲ್ ಬೋರ್ಡೋಲೈ ಹೇಳಿದರು.
ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಣಕಾಸು ಸಾಕ್ಷರತಾ ಸಪ್ತಾಹ: 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ವರ್ಷವು ಫೆಬ್ರುವರಿ ತಿಂಗಳ ಎರಡನೇ ವಾರವನ್ನು ಹಣಕಾಸು ಸಾಕ್ಷರತಾ ಸಪ್ತಾಹ ಎಂದು ಆಚರಿಸುತ್ತಾ ಬಂದಿದೆ. 2026ರಲ್ಲಿ ಕೆವೈಸಿ ಸುರಕ್ಷಿತ ಬ್ಯಾಂಕಿಂಗ್‌ಗೆ ನಿಮ್ಮ ಮೊದಲ ಹೆಜ್ಜೆ ಎಂಬ ಧ್ಯೇಯ ವಾಕ್ಯದಡಿ ಹಣಕಾಸು ಸಾಕ್ಷರತಾ ಸಪ್ತಾಹವನ್ನು ಆಚರಿಸಲಾಗುತ್ತಿದೆ’ ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಮೋಹನ್ ಕುಮಾರ್ ವೈ.ಎನ್ ಮಾತನಾಡಿ, ‘ಪ್ರತಿಯೊಬ್ಬ ಬ್ಯಾಂಕಿನ ಗ್ರಾಹಕರು ನಿಮ್ಮ ನಿಮ್ಮ ಖಾತೆಗಳಿಗೆ ಕೆವೈಸಿ ಮರುಜೋಡಣೆ ಮಾಡಿಕೊಳ್ಳುವುದರ ಜೊತೆಗೆ, ನಿಮ್ಮ ಖಾತೆ ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮೊಬೈಲ್ ಫೋನ್‌ಗೆ ಅನಾಮಿಕ ಕರೆಗಳು ಬಂದಲ್ಲಿ, ಆ ಕರೆಗಳಿಗೆ ನಿಮ್ಮ ಬ್ಯಾಂಕಿನ ಯಾವುದೇ ವಿವರವನ್ನು ನೀಡಬಾರದು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಬ್ಯಾಂಕಿನಲ್ಲಿ ಸಿಗುವಂತಹ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಜಯಮ್ಮ, ತಾಲ್ಲೂಕು ಪಂಚಾಯಿತಿಯ ಆನಂದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ್, ಎಫ್‌ಎಲ್‌ಸಿಗಳಾದ ರೂಪಲಕ್ಷ್ಮೀ, ಸುಮಲತಾ, ಸಿಎಫ್‌ಎಲ್ ಮುನಿ ರಾಮಕ್ಕ ಹಾಗೂ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ರೈತರು ಭಾಗವಹಿಸಿದ್ದರು.