
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು.
ಬಿಡದಿ (ರಾಮನಗರ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಶ್ರಮಿಕ ವರ್ಗವನ್ನು ಶೋಷಣೆ ಮಾಡುತ್ತವೆ. ಇವುಗಳ ವಿರುದ್ಧ ಫೆ. 12ರಂದು ಹಮ್ಮಿಕೊಂಡಿರುವ ಸಾರ್ವತ್ರಿಕ ಮುಷ್ಕರನ್ನು ಎಲ್ಲಾ ಕಾರ್ಮಿಕರು ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಹೇಳಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕವು ಇಲ್ಲಿನ ಕೈಗಾರಿಕಾ ಪ್ರದೇಶದ ಕಾಡುಮನೆ ಬಳಿಯ ಶ್ರೀವಾರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಕ್ರೋಢಿಕರಿಸಿ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳು ನವ ಉದಾರವಾದ ನೀತಿಗಳನ್ನು ಪೋಷಿಸುವ ಭಾಗವಾಗಿವೆ. ಕಾರ್ಮಿಕರ ಪಾಲಿಗೆ ಮಾರಕವಾಗಿರುವ ಇವು ದೇಶದ ಸಮಸ್ತ ಕಾರ್ಮಿಕರನ್ನು ಪ್ರತಿನಿಧಿಸುತ್ತವೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳನ್ನು ಹೊರತುಪಡಿಸಿ, ಉಳಿದ ಕಾರ್ಖಾನೆಗಳ ಕಾರ್ಮಿಕರ ಭವಿಷ್ಯವನ್ನು ಹೊಸ ಸಂಹಿತೆಗಳು ಅನಿಶ್ಚಿತತೆಗೆ ದೂಡುತ್ತವೆ. ಹಾಗಾಗಿ, ಕಾರ್ಮಿಕರು ಇವುಗಳ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.
ಹೂಡಿಕೆ ಆಕರ್ಷಣೆಗಾಗಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗಿದೆಯೇ ಹೊರತು ಬೇರಾವುದೇ ಅಭಿವೃದ್ದಿ ಉದ್ದೇಶ ಇದರಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕೆಐಇಇಎಫ್ ಅಧ್ಯಕ್ಷ ಗಂಗಣ್ಣ ಕೆ.ಎ ಮಾತನಾಡಿ, ಕಾರ್ಮಿಕರು ತ್ಯಾಗ ಮತ್ತು ಬಲಿದಾನಗಳಿಂದಾಗಿ ಜಾರಿಗೆ ಬಂದಿರುವ ಕಾನೂನುಗಳನ್ನು ಕಸಿದುಕೊಳ್ಳುವ ಅಧಿಕಾರ ನಮ್ಮನ್ನಾಳುವ ಸರ್ಕಾರಿಗಳಿಗೆ ಇಲ್ಲ. ಹೊಸ ಸಂಹಿತೆಗಳ ವಿರುದ್ಧ ಹಮ್ಮಿಕೊಂಡಿರುವ ಮುಷ್ಕರದ ವಿರುದ್ಧಎಲ್ಲಾ ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಕೋರಿದರು.
ಮುಷ್ಕರದ ದಿನ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ತಮ್ಮ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಬೇಕು ಎಂಬ ನಿರ್ಣಯವನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.
ಸಮಾವೇಶದ ಆದ್ಯಕ್ಷತೆಯನ್ನು ಟೊಯೋಟಾ ಕಾರ್ಮಿಕರಕ ಸಂಘದ ಅಧ್ಯಕ್ಷ ದೀಪಕ್ ಎಸ್.ಆರ್ ವಹಿಸಿದ್ದರು. ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಯೋಗೇಶ್ ಎಂ., ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಿ.ಬಿ, ಕೆಐಇಇಎಫ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಟೊಯೋಟಾ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ, ಜೆಬಿಎಂ ಒಗಿಹಾರ ಕಾರ್ಮಿಕ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಟ್ರಾನ್ಸಿಸ್ಟಮ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ, ಆರ್ ಟಿಬಿಐ ಕಾರ್ಮಿಕ ಸಂಘದ ಅಧ್ಯಕ್ಷ ನಾಗೇಂದ್ರ, ರಾಘವೇಂದ್ರ ಕೆ., ರೈತ ಮುಖಂಡರಾದ ಭೈರಮಂಗಲ ನಾಗರಾಜು, ಮಾರುತೇಶ್, ಶಿವಕುಮಾರ್, ರಜನಿಕಾಂತ್ ಎಚ್.ಎನ್, ರಾಜಶೇಖರ, ಪವನ್ ಹಾಗೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.