ADVERTISEMENT

ಕಾರ್ಮಿಕ ಕಾರ್ಡ್ ಇದ್ದರೆ ಸೌಲಭ್ಯ ಖಾತ್ರಿ: ಎಚ್.ಆರ್. ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:57 IST
Last Updated 31 ಅಕ್ಟೋಬರ್ 2025, 2:57 IST
<div class="paragraphs"><p>‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜನರ ಪ್ರಶ್ನೆಗಳಿಗೆ ಜಿಲ್ಲಾ ಕಾರ್ಮಿಕರ ಅಧಿಕಾರಿ ನಾಗೇಂದ್ರ ಎಚ್.ಆರ್ ಉತ್ತರಿಸಿದರು   </p></div>

‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜನರ ಪ್ರಶ್ನೆಗಳಿಗೆ ಜಿಲ್ಲಾ ಕಾರ್ಮಿಕರ ಅಧಿಕಾರಿ ನಾಗೇಂದ್ರ ಎಚ್.ಆರ್ ಉತ್ತರಿಸಿದರು

   

ಪ್ರಜಾವಾಣಿ ಚಿತ್ರ

ರಾಮನಗರ: ‘ಕಾರ್ಮಿಕ ಇಲಾಖೆಯ ಯಾವುದೇ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ಕಾರ್ಡ್‌ ಮಾಡಿಸಿಕೊಳ್ಳಬೇಕು. ಆಗ ಮಾತ್ರ ಅರ್ಹರಿಗೆ ಸೌಲಭ್ಯ ಸಿಗುತ್ತವೆ. ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಿ, ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸುವ ಪಾರದರ್ಶಕತೆಯನ್ನು ಇಲಾಖೆ ಅಳವಡಿಸಿಕೊಂಡಿದೆ. ಕಾರ್ಮಿಕರು ಕಾರ್ಡ್ ಮಾಡಿಸಿಕೊಂಡು ಸೌಲಭ್ಯ ಪಡೆಯಬೇಕು...’

ADVERTISEMENT

ನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ‘ಪ್ರಜಾವಾಣಿ’ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ಕರೆಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಎಚ್.ಆರ್ ಅವರು ನೀಡಿದ ಸಲಹೆ ಇದು.

ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿದ್ದ ಕಾರ್ಮಿಕರು ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಸಮಸ್ಯೆ, ದೂರು ಹೇಳಿಕೊಳ್ಳುವ ಜೊತೆಗೆ ಕೆಲವು ಸಲಹೆ ಕೂಡ ನೀಡಿದರು.

ಎಲ್ಲರಿಗೂ ಸಾವಧಾನವಾಗಿ ಪ್ರತಿಕ್ರಿಯಿಸಿದ ನಾಗೇಂದ್ರ ಅವರು, ಕಾರ್ಮಿಕರ ಗೊಂದಲ ಪರಿಹರಿಸುವ ಜೊತೆಗೆ ಸಮಸ್ಯೆಗಳಿಗೆ ಪರಿಹಾರೋಪಾಯ ನೀಡಿದರು. ಕಾರ್ಯಕ್ರಮದ ಆಯ್ದ ಪ್ರಮುಖ ಪ್ರಶ್ನೋತ್ತರ ಇಲ್ಲಿವೆ.

* ಲತಾ, ರಾಮನಗರ ತಾ.: ದುಡಿಯುವ ಮಹಿಳೆಯರಿಗೆ ಮುಟ್ಟಿನ ರಜೆ ಅನುಷ್ಠಾನ ಇನ್ನೂ ಯಾಕಾಗಿಲ್ಲ?
– ಮಹಿಳೆಯರಿಗೆ ಮುಟ್ಟಿನ ರಜೆ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅದು ಗೆಜೆಟ್ ಅಧಿಸೂಚನೆಯಾದ ಬಳಿಕ ಜಾರಿಗೆ ಬರುತ್ತದೆ.

* ಕುಮಾರ್, ಹಾರೋಹಳ್ಳಿ ತಾ.: ನಮ್ಮ ತಾಲ್ಲೂಕಿನಲ್ಲಿ ಕಾರ್ಮಿಕ ಇಲಾಖೆ ಕಚೇರಿ ಎಲ್ಲಿದೆ? ನಾವು ಯಾರನ್ನ ಸಂಪರ್ಕಿಸಬೇಕು?
ನಿಮ್ಮದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕು ಆಗಿರುವುದರಿಂದ ಇಲಾಖೆ ಇನ್ನೂ ಕಾರ್ಮಿಕ ನಿರೀಕ್ಷಕರ ಕಚೇರಿ ತೆರೆದಿಲ್ಲ. ಸದ್ಯ ಕನಕಪುರ ತಾಲ್ಲೂಕು ವ್ಯಾಪ್ತಿಗೆ ಹಾರೋಹಳ್ಳಿ ಬರುತ್ತದೆ. ಕನಕಪುರದ ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿ ಕಚೇರಿ ಇದೆ. ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಅಲ್ಲಿಗೆ ಭೇಟಿ ನೀಡಿ.

* ಕಾಂತರಾಜು, ಚನ್ನಪಟ್ಟಣ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಇಲಾಖೆಯಲ್ಲಿರುವ ಸೌಲಭ್ಯಗಳೇನು?
ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಣಿಯಾಗಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ನರ್ಸರಿಯಿಂದ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡಲಾಗುವುದು. ಇಲಾಖೆ ಈ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಆಗ ಎಸ್‌ಎಸ್‌ಪಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು.

* ಮಹಾಂತೇಶ ಗೌಡ, ಮಾಗಡಿ ತಾ.: ಕೂಲಿ ಮಾಡುವವರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳೇನು?
– ಇಲಾಖೆಯು ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೂ ಹಲವು ಸೌಲಭ್ಯಗಳನ್ನು ಹೊಂದಿದೆ. ಆದರೆ, ಕಾರ್ಮಿಕರು ತಪ್ಪದೆ ತಾವು ಮಾಡುವ ಕೆಲಸಕ್ಕೆ ಸಂಬಂಧಿಸಿದ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಸಿಗುವ ಸೌಲಭ್ಯ ಪಡೆಯಬೇಕು.

* ಮೇಘನಾ, ರಾಮನಗರ ತಾ.: ಕಟ್ಟಡ ಕಾರ್ಮಿಕರಲ್ಲದವರು ಸಹ ಕಾರ್ಮಿಕ ಕಾರ್ಡ್ ಪಡೆಯುತ್ತಿದ್ದಾರೆ. ಇದರ ವಿರುದ್ಧ ಇಲಾಖೆ ಯಾವ ಕ್ರಮ ಕೈಗೊಂಡಿದೆ?
ಕಾರ್ಡ್‌ಗಳ ದುರುಪಯೋಗದ ವಿರುದ್ಧ ಇಲಾಖೆ ನಿರಂತರವಾಗಿ ನಿಗಾ ಇಟ್ಟಿದೆ. ಜಿಲ್ಲೆಯಲ್ಲಿ 2023ರಿಂದ ಇಲ್ಲಿಯವರೆಗೆ 4,239 ಅನರ್ಹ ಕಾರ್ಮಿಕರನ್ನು ಪತ್ತೆ ಹಚ್ಚಿ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾರ್ಮಿಕರಲ್ಲದವರು ಕಾರ್ಡ್ ಪಡೆದಿರುವುದು ಕಂಡುಬಂದರೆ ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ದೂರುದಾರರ ಹೆಸರನ್ನು ರಹಸ್ಯವಾಗಿ ಇಡಲಾಗುವುದು.

* ಧರಣೀಶ್, ಅಧ್ಯಕ್ಷ, ಜಿಲ್ಲಾ ಮಾವು ಬೆಳೆಗಾರರ ಸಂಘ: ಮಾವು ಕಟಾವಿಗೆ ಬರುವ ವಲಸೆ ಕಾರ್ಮಿಕರು ಇಲಾಖೆ ಸೌಲಭ್ಯಕ್ಕೆ ಅರ್ಹರೇ?
ಎಲ್ಲಾ ಬಗೆಯ ಕಾರ್ಮಿಕರು ಸಹ ಸೌಲಭ್ಯಕ್ಕೆ ಅರ್ಹರು. ಆದರೆ, ಅವರು ಕಾರ್ಮಿಕ ಕಾರ್ಡ್ ಹೊಂದಿರಬೇಕು. ಅದಕ್ಕಾಗಿಯೇ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇದೆ. ಕಾರ್ಮಿಕರು ಕೇಂದ್ರ ಸರ್ಕಾರದ ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡರೆ ಒಂದು ವರ್ಷದ ಅವಧಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಅಪಘಾತದ ಮರಣ ಅಥವಾ ಶಾಶ್ವತ ಅಂಗವಿಕಲತೆಗೆ ₹2 ಲಕ್ಷ ಹಾಗೂ ಭಾಗಶಃ ಅಂಗವಿಕಲತೆಗೆ ₹1 ಲಕ್ಷ ಪರಿಹಾರ) ಪ್ರಯೋಜನ ಸಿಗಲಿದೆ. ನೋಂದಣಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಮತ್ತು ಖಾತೆಗೆ ಜೋಡಿಸಿದ ಮೊಬೈಲ್ ಸಂಖ್ಯೆ ಸಾಕು.

* ಪ್ರಮೋದ್, ಹಾರೋಹಳ್ಳಿ ತಾ.: ನಾನು ಕಟ್ಟಡ ಕಾರ್ಮಿಕನಾಗಿದ್ದರೂ ಕಾರ್ಡ್ ನವೀಕರಣಗೊಂಡಿಲ್ಲ. ಯಾಕೆ ಹೀಗಾಗುತ್ತಿದೆ?
ಕಾರ್ಡ್ ಮಾಡಿಸಿಕೊಂಡವರು ವರ್ಷದ 90 ದಿನ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿರಬೇಕು. ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಒದಗಿಸಬೇಕು. ಒಂದು ವೇಳೆ ಕೆಲಸ ಮಾಡದಿದ್ದರೆ ಅಂತಹವರ ಕಾರ್ಡ್ ನವೀಕರಣಗೊಳ್ಳುವುದಿಲ್ಲ. ಹೊಸ ಕಾರ್ಡ್ ಮಾಡುವಾಗ ಮತ್ತು ನವೀಕರಣಗೊಳಿಸುವಾಗ ಅಧಿಕಾರಿಗಳು ಪ್ರತಿಯೊಂದನ್ನು ಪರಿಶೀಲಿಸುತ್ತಾರೆ. ನಿಯಮಕ್ಕೆ ವಿರುದ್ಧವಾಗಿದ್ದರೆ ತಡೆ ಹಿಡಿಯಲಾಗುತ್ತದೆ.

* ಕಾವ್ಯ, ರಾಮನಗರ ತಾ.: ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯ ಕೊಡಿಸುತ್ತೇವೆ ಎಂದು ಕೆಲ ಸೈಬರ್ ಸೆಂಟರ್‌ನವರು ಮತ್ತು ಕಾರ್ಮಿಕ ಸಂಘಟನೆಯವರು ಎಂದು ಹೇಳಿಕೊಳ್ಳುವವರು ಜನರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಅಂತಹವರ ವಿರುದ್ಧ ಇಲಾಖೆಯ ಕ್ರಮವೇನು?
ನೋಂದಣಿಯಾಗಿರುವ ಕಾರ್ಮಿಕ ಸಂಘಟನೆಗಳು ತಮ್ಮ ವ್ಯಾಪ್ತಿಯಲ್ಲಿ ಕೆಲ ಕಾರ್ಯಚಟುವಟಿಕೆ ನಡೆಸಲು ಅನುಮತಿ ಇದೆ. ಅದಕ್ಕೆ ನಿಗದಿತ ಶುಲ್ಕ ಪಡೆಯಲು ಅವಕಾಶವಿದೆ. ಆದರೆ, ಅದನ್ನು ಮೀರಿ ಪಡೆಯುತ್ತಿದ್ದರೆ ಕಾರ್ಮಿಕರು ಕೂಡಲೇ ಇಲಾಖೆ ಗಮನಕ್ಕೆ ತರಬೇಕು. ಅದೇ ರೀತಿ ಸೈಬರ್ ಸೆಂಟರ್‌ನಲ್ಲೂ ವಸೂಲಿ ನಡೆಯುತ್ತಿದ್ದರೆ ದೂರು ನೀಡಬೇಕು. ಆಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

* ಶಿವಲಿಂಗ ಎನ್.ಎಂ., ಕನಕಪುರ ತಾ.: ಪದವಿ ವಿದ್ಯಾರ್ಥಿಯಾಗಿರುವ ನಾನು 2023ರಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿದ್ದರೂ ಇನ್ನೂ ಬಂದಿಲ್ಲವಲ್ಲ?
– 2023ರಿಂದ 24ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೂ ಹಿಂದಿನ ವರ್ಷ ಅರ್ಜಿ ಹಾಕಿದ್ದವರ ಬ್ಯಾಂಕ್ ಖಾತೆಗೆ ಈಗಾಗಲೇ ವಿದ್ಯಾರ್ಥಿವೇತನ ಪಾವತಿಸಲಾಗಿದೆ.

* ಪ್ರಶಾಂತ್ ಹೊಸದುರ್ಗ, ಕನಕಪುರ ತಾ.: ಸರ್ಕಾರಿ ಇಲಾಖೆಗಳಲ್ಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪದ್ಧತಿ ವಿರುದ್ದ ಇಲಾಖೆ ಏಕೆ ದನಿ ಎತ್ತುವುದಿಲ್ಲ?
ಸರ್ಕಾರವು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿ ನಮಗೆ ಆದೇಶ ಬರಬೇಕು. ಅದರಂತೆ ನಾವು ಕೆಲಸ ಮಾಡುತ್ತೇವೆ.

ಕಾರ್ಮಿಕರ ನೋಂದಣಿ

ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿಯನ್ನು ಹೊಂದಿದೆ. ಇವುಗಳಡಿ ವಿವಿಧ ಬಗೆಯ ಕಾರ್ಮಿಕರನ್ನು ನೋಂದಣಿ ಮಾಡಿಕೊಂಡು ಅವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುತ್ತಿದೆ. ಈ ಕುರಿತು ಇಲಾಖೆ ನಿರಂತರವಾಗಿ ಪ್ರಚಾರ ಮಾಡುತ್ತಿದ್ದು ಸಂಬಂಧಿಸಿದ ಕಾರ್ಮಿಕರು ಆಯಾ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡು ಸೌಲಭ್ಯ ಪಡೆಯಬೇಕು ಎಂದು ನಾಗೇಂದ್ರ ಹೇಳಿದರು. ಕಾರ್ಮಿಕ ಇಲಾಖೆಯ ಸಹಾಯವಾಣಿ: 155214

ಏನೇನು ಸೌಲಭ್ಯ?

* ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ: ವೈಯಕ್ತಿಕ ಪಿಂಚಣಿ ಕುಟುಂಬ ಪಿಂಚಣಿ ದುರ್ಬಲತೆ ಪಿಂಚಣಿ ಟೂಲ್‌ಕಿಟ್ ಹೆರಿಗೆ ಸೌಲಭ್ಯ ಅಂತ್ಯಕ್ರಿಯೆ ವೆಚ್ಚ ಶೈಕ್ಷಣಿಕ ಸಹಾಯಧನ ವೈದ್ಯಕೀಯ ಸಹಾಯಧನ ಅಪಘಾತ ಪರಿಹಾರ ಮದುವೆ ಸಹಾಯಧನ ತಾಯಿ–ಮಗು ಸಹಾಯಹಸ್ತ.

* ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ: ಇದರಡಿ 23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಗಾಯಗೊಂಡು ಅಂಗವಿಕಲರಾದರೆ ಪರಿಹಾರ ಸೌಲಭ್ಯ ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚದ ಸೌಲಭ್ಯ ನಿಡಲಾಗುತ್ತದೆ.

* ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ: ವಾಹನ ಚಾಲಕರು ಕ್ಲೀನರ್‌ಗಳು ಸೇರಿದಂತೆ 20 ಬಗೆಯ ಕೆಲಸಗಳನ್ನು ಮಾಡುವ ಕಾರ್ಮಿಕರು ಮಂಡಳಿ ವ್ಯಾಪ್ತಿಗೆ ಬರುತ್ತಾರೆ. ಅಪಘಾತದ ಸಾವು ಅಂಗವಿಕಲತೆ ಹಾಗೂ ಗಾಯಕ್ಕೆ ಪರಿಹಾರ. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಹಾಗೂ ಮಹಿಳೆಯರಿಗೆ ಹೆರಿಗೆ ಭತ್ಯೆ ಸಿಗಲಿದೆ.

ಜಿಲ್ಲೆಯ ಕಾರ್ಮಿಕ ಕಚೇರಿಗಳ ಮಾಹಿತಿ

* ಜಿಲ್ಲಾ ಕಾರ್ಮಿಕ ಅಧಿಕಾರಿ: ಕೊಠಡಿ ಸಂಖ್ಯೆ: 301 2ನೇ ಮಹಡಿ ಕಂದಾಯ ಭವನ ರಾಮನಗರ ಉಪ ವಿಭಾಗ ಬೆಂಗಳೂರು ದಕ್ಷಿಣ ಜಿಲ್ಲೆ

* ರಾಮನಗರ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ: ಕೊಠಡಿ ಸಂಖ್ಯೆ 301 2ನೇ ಮಹಡಿ ಕಂದಾಯ ಭವನ ರಾಮನಗರ

* ಚನ್ನಪಟ್ಟಣ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ: ನಂ. 2817 2ನೇ ಕ್ರಾಸ್ ಮಹಾಲಕ್ಷ್ಮಿ ಲೇಔಟ್ ಚರ್ಚ್ ರಸ್ತೆ ಚನ್ನಪಟ್ಟಣ

* ಮಾಗಡಿ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ: ಶ್ರೀ ಕಲ್ಲೇಶ್ವರ ಟವರ್ 1ನೇ ಮಹಡಿ ಡೂಮ್ ಲೈಟ್‌ ಸರ್ಕಲ್ ಹತ್ತಿರ ಅರಳೆಪೇಟೆ ಮಾಗಡಿ

* ಕನಕಪುರ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ: 2ನೇ ಮಹಡಿ ಮಿನಿ ವಿಧಾನಸೌಧ ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.