ADVERTISEMENT

ಕೆರೆ ನೀರು ಹರಿಸಲು ರೈತರ ಆಗ್ರಹ

ನೆಲ್ಲಿಗುಡ್ಡೆ ಕೆರೆ ಕಾಲುವೆ ದುರಸ್ತಿಗೆ ಅಚ್ಚುಕಟ್ಟುದಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 4:29 IST
Last Updated 1 ಅಕ್ಟೋಬರ್ 2022, 4:29 IST
ನೆಲ್ಲಿಗುಡ್ಡೆ ಕೆರೆಯ ಒಂದು ನೋಟ
ನೆಲ್ಲಿಗುಡ್ಡೆ ಕೆರೆಯ ಒಂದು ನೋಟ   

ಬಿಡದಿ: ಈ ಭಾಗದ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ನೆಲ್ಲಿಗುಡ್ಡೆ ಕೆರೆಯಿಂದ ಕೃಷಿ ಚಟುವಟಿಕೆ ನೀರು ಹರಿಸುವಂತೆ ಹಾಗೂ ಕಾಲುವೆಗಳ ದುರಸ್ತಿಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಬಿದ್ದ ಮಳೆಗೆ ಕೆರೆ ತುಂಬಿ ಕೋಡಿ ಬಿದ್ದಿತು. ಕೋಡಿ ನೀರು ಹರಿದು ವ್ಯರ್ಥವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ನೀರು ಹರಿಸಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ಕೆರೆಯ ನೀರು ಹತ್ತಾರು ಗ್ರಾಮಗಳಿಗೆ ಹರಿದು ಹೋಗಲು ಇರುವ ಕಾಲುವೆಗಳು ಹೂಳು ತುಂಬಿಕೊಂಡು, ನಾಲೆಯುದ್ದಕ್ಕೂ ಜೊಂಡು ಬೆಳೆದುಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.

ADVERTISEMENT

ತಟ್ಟಿಗೌಡನದೊಡ್ಡಿ, ತಮ್ಮಣ್ಣದೊಡ್ಡಿ, ಕೆಂಚನಕುಪ್ಪೆ, ಅಲಸಿನಮರದೊಡ್ಡಿ, ಕರಿಯಪ್ಪನದೊಡ್ಡಿ, ಬಾನಂದೂರು ಹಾಗೂ ಗೊಲ್ಲಹಳ್ಳಿ ಗ್ರಾಮಗಳಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಇದೇ ಕೆರೆ ನಂಬಿ ವ್ಯವಸಾಯ ಮಾಡಲಾಗುತ್ತಿದೆ. ಇಲ್ಲಿ ಹೆಚ್ಚಾಗಿ ಕಬ್ಬು, ಭತ್ತ, ರಾಗಿ ಬೆಳೆಯಲಾಗುತ್ತದೆ. ಈ ಹಿಂದೆ ಕೆರೆಯಲ್ಲಿ ನೀರು ತುಂಬಿದ್ದರೂ ನೀರು ಹರಿಸಿರಲಿಲ್ಲ. ಕಲುಷಿತ ನೀರಿನಿಂದಲೇ ಕೆಲವು ವ್ಯವಸಾಯ ಮಾಡಲಾಗುತ್ತಿದೆ.

ಸರ್ಕಾರ ಈಗಾಗಲೇ ನೆಲ್ಲಿಗುಡ್ಡೆ ಕೆರೆಯಿಂದ ಕಟ್ಟಿಗೌಡನದೊಡ್ಡಿ ಕೆರೆಯವರೆಗೆ ದುರಸ್ತಿ ಮಾಡಿದ್ದು, ಉಳಿದ ಕಾಲುವೆ ದುರಸ್ತಿಗೆ ಮಳೆಯ ಅತಿವೃಷ್ಟಿಯಿಂದ ಕೆಲಸ ಸ್ಥಗಿತ ಗೊಳಿಸಲಾಗಿತ್ತು. ಈ ಕೂಡಲೇ ಕಾಮಗಾರಿಯನ್ನು ಪುನರಾರಂಭಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಕೊಟ್ರೇಶ್ ಅವರು ತಿಳಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ಅದಷ್ಟು ಬೇಗ ಕಾಲುವೆ ದುರಸ್ತಿಗೊಳಿಸಿ ಕೆರೆಯಿಂದ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಸಣ್ಣ ನೀರಾವರಿ ಇಲಾಖೆಯ ಕಚೇರಿ ಮುಂಭಾಗ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಪಣದ ಉಪಾಧ್ಯಕ್ಷ ಪಿ.ಎಂ.ರವಿ ಒತ್ತಾಯಿಸಿದ್ದಾರೆ.

ಕಾಲುವೆ ಮೂಲಕ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಮುಖಂಡ ರಾಮಣ್ಣರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.