ಮಾಗಡಿ: ತಾಲ್ಲೂಕಿನ ಸಾವನದುರ್ಗದ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬ್ರಹ್ಮ ರಥೋತ್ಸವಕ್ಕೆ ತಹಶೀಲ್ದಾರ್ ಶರತ್ ಕುಮಾರ್ ವಿಧಿವಿಧಾನಗಳ ಮೂಲಕ ಚಾಲನೆ ನೀಡಿದರು. ಭಕ್ತರು ಬಾಳೆಹಣ್ಣು, ದವನ ಅರ್ಪಿಸಿ ಹರಕೆ ತೀರಿಸಿದರು.
ಜಾತ್ರೆಯಲ್ಲಿ ವಿವಿಧ ಸಮುದಾಯಗಳ ಅರವಟ್ಟಿಗೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಹಾಗು ಅನ್ನ ಸಂತರ್ಪಣೆ ನೆರವೇರಿತು.
ಪಟದ ಕುಣಿತ ಎಲ್ಲರನ್ನು ರಂಜಿಸಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ರಥೋತ್ಸವದ ಹಿನ್ನಲೆ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು. ಜೊತೆಗೆ ದೇವಾಲಯ ಹಾಗೂ ಸ್ವಾಮಿಗೆ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ನಾಯಕನ ಪಾಳ್ಯ, ವೀರೇಗೌಡನ ದೊಡ್ಡಿ, ಕಲರಮಂಗಲ, ಗುಡ್ಡಹಳ್ಳಿ, ಮತ್ತ, ಅತ್ತಿಂಗೆರೆ, ಮಾಗಡಿ ಸೇರಿದಂತೆ ಅನೇಕ ಹಳ್ಳಿಗಳಿಂದ ರಥೋತ್ಸವಕ್ಕೆ ಭಕ್ತರು ಆಗಮಿಸಿದ್ದರು.
ಸಾವನದುರ್ಗ ಲಕ್ಷ್ಮಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಪ್ರ ಸಮುದಾಯದ ವತಿಯಿಂದ ನರಸಿಂಹ ಜಯಂತಿ ಆಚರಿಸಲಾಯಿತು. ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.