
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಜಿಬಿಡಿಎ) ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸ್ವಾಧೀನಕ್ಕೆ ಗರಿಷ್ಠ ಪರಿಹಾರ ದರ ನಿಗದಿ ಮಾಡಲಾಗಿದೆ. ಜೊತೆಗೆ ಜಮೀನು ಮಾಲೀಕರಿಗೆ ಯೋಜನೆಯಲ್ಲಿ ಪಾಲುದಾರಿಕೆ ಸಹ ನೀಡಲಾಗುತ್ತಿದೆ. ರೈತರು ಪರಿಹಾರದ ಪಾಲುದಾರಿಕೆ ಪಡೆದುಕೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸಲಹೆ ನೀಡಿದರು.
ನಗರದಲ್ಲಿರುವ ಜಿಬಿಡಿಎ ಕಚೇರಿಯಲ್ಲಿ ಸೋಮವಾರ ಯೋಜನೆ ಕುರಿತು ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಯೋಜನಾ ಪ್ರದೇಶದ ರೈತರಿಗೆ ಅನ್ಯಾಯವಾಗದಂತೆ ಗರಿಷ್ಠ ಪರಿಹಾರ ನೀಡಬೇಕು ಎಂದು ಸರ್ಕಾರದ ಮೇಲೆ ಸತತ ಒತ್ತಡ ತರಲಾಗಿತ್ತು. ಇದರ ಪರಿಣಾಮ ಪ್ರತಿ ಎಕರೆಗೆ ಕನಿಷ್ಠ ₹2.07 ಕೋಟಿ ಪರಿಹಾರ ದರ ನಿಗದಿಯಾಗಿದೆ. ರಸ್ತೆ ಪಕ್ಕದ ಜಮೀನಿಗೆ ಕನಿಷ್ಠ ₹2.50 ಕೋಟಿ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿ ಅವರು ಕಾನೂನಿನ ಚೌಕಟ್ಟಿನಲ್ಲಿ ರೈತರ ಪರವಾಗಿ ಗರಿಷ್ಠ ಪರಿಹಾರ ದರ ನಿಗದಿಪಡಿಸಿದ್ದಾರೆ ಎಂದರು.
‘ಯೋಜನಾ ಪ್ರದೇಶದ ಶೇ 80ರಷ್ಟು ರೈತರು ಪರಿಹಾರ ದರ ನಿಗದಿಗೆ ಸಂತಸಗೊಂಡಿದ್ದಾರೆ. ಉಳಿದವರು ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನನೆಗುದಿಗೆ ಬಿದ್ದಿದ್ದ ಯೋಜನೆಗೆ ನಮ್ಮ ಸರ್ಕಾರ ಚಾಲನೆ ನೀಡಲು ಮುಂದಾದಾಗಿನಿಂದಲೂ ವ್ಯಾಪಕ ಅಪಪ್ರಚಾರ ನಡೆಸಲಾಗಿದೆ. ಎಕರೆಗೆ ಕೇವಲ ₹80 ಲಕ್ಷ ಪರಿಹಾರ ಕೊಡುತ್ತಾರೆ. ಪರಿಹಾರ ಕೊಡಲು ಇವರ ಬಳಿ ಹಣವಿಲ್ಲ, ಉಪನಗರದ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದೆಲ್ಲಾ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ಪರಿಹಾರ ದರ ನಿಗದಿ ಮಾಡಿದ ಬಳಿಕ ಅಂತಹವರು ಇನ್ನು ಮುಂದೆ ತಮ್ಮ ಬೇಳೆ ಬೇಯುವುದಿಲ್ಲ ಎಂದು ಭ್ರಮನಿರಸನಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದರು.
‘ನಾವು ಜನರನ್ನು ಒಕ್ಕಲೆಬ್ಬಿಸದೆ ಅವರ ಊರುಗಳನ್ನು ಅಭಿವೃದ್ಧಿ ಮಾಡುತ್ತೇವೆ. ಸುಸಜ್ಜಿತ ಶಾಲಾ-ಕಾಲೇಜು, ಆಟದ ಮೈದಾನ, ಸಮುದಾಯ ಭವನ, ಪ್ರಮುಖ ರಸ್ತೆಗಳ ಸಂಪರ್ಕಕ್ಕೆ ವರ್ತುಲ ರಸ್ತೆ ಸಹ ನಿರ್ಮಾಣ ಮಾಡಲಾಗುವುದು. ಉಪನಗರ ನಿರ್ಮಾಣದಿಂದ ಯೋಜನಾ ಪ್ರದೇಶದ ಸ್ವರೂಪವೇ ಬದಲಾಗಲಿದೆ. ತಲೆ ಎತ್ತಲಿರುವ ಎ.ಐ ಸಿಟಿ ಸೇರಿದಂತೆ ವಿವಿಧ ಕೈಗಾರಿಕೆ- ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.
ತ್ವರಿತ ಪರಿಹಾರ: ಭೂ ಸ್ವಾಧೀನಕ್ಕೆ ಒಪ್ಪಿಗೆ ಕೊಟ್ಟವರಿಗೆ ಮಾತ್ರ ನಿಗದಿಗಿಂತ ಶೇ 12ರಷ್ಟು ಹೆಚ್ಚುವರಿ ಪರಿಹಾರ ಸಿಗಲಿದೆ. ಜೊತೆಗೆ ಜಮೀನಿನಲ್ಲಿರುವ ಮರಮಾಲ್ಕಿ ಸೇರಿದಂತೆ ಇತರ ಅಭಿವೃದ್ಧಿ ಚಟುವಟಿಕೆಗಳಿಗೂ ಪ್ರತ್ಯೇಕ ಪರಿಹಾರ ಸಿಗಲಿದೆ. ಪರಿಹಾರ ದರ ಒಪ್ಪದವರಿಗೆ ಶೇ 10ರಷ್ಟು ಕಡಿಮೆ ಪರಿಹಾರ ಸಿಗಲಿದೆ. ಅಂತಹವರು ನ್ಯಾಯಾಲಯದ ಮೆಟ್ಟಿಲೇರಿದರೆ ಅವರ ಪರಿಹಾರವನ್ನು ಕೋರ್ಟ್‌ನಲ್ಲಿ ಠೇವಣಿ ಇಡಲಾಗುವುದು. ಪ್ರಕರಣ ಇತ್ಯರ್ಥವಾದ ಬಳಿಕ ಅವರಿಗೆ ಪರಿಹಾರ ಪಾವತಿಯಾಗಲಿದೆ. ಭೂ ದಾಖಲೆಗಳ ಪರಿಶೀಲನೆ ಈಗಾಗಲೇ ಮುಗಿದಿದೆ. ಮೂರು ತಿಂಗಳೊಳಗೆ ಜೆಎಂಸಿ ಮುಗಿಸಿ ಪರಿಹಾರ ಪಾವತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಯೋಜನಾ ಪ್ರದೇಶದಲ್ಲಿ ಮನೆ ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ಮತ್ತು ಮನೆ ಕೊಡಲಾಗುವುದು. ಜಮೀನು ಅಭಿವೃದ್ಧಿ ಆಗುವವರೆಗೆ ಜಮೀನು ಮಾಲೀಕರಿಗೆ ಜಮೀನಿನ ಬಗೆ ಆಧರಿಸಿ ವಾರ್ಷಿಕವಾಗಿ ಭತ್ಯೆ ನೀಡಲಾಗುವುದು. ಜಮೀನು ರಹಿತರಿಗೂ ಜೀವನೋಪಾಯಕ್ಕೆ ಭತ್ಯೆ ಸಿಗಲಿದೆ. ಯೋಜನೆಗೆ ಸಂಬಂಧಿಸಿದ ಏನೇ ಸಣ್ಣಪುಟ್ಟ ದೋಷಗಳಿದ್ದರೂ ರೈತರ ಸಹಕಾರದೊಂದಿಗೆ ಸರಿಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ನಿರ್ದೇಶಕರು ಹಾಗೂ ಅಧಿಕಾರಿಗಳು ಇದ್ದರು.
ಹೋರಾಟಗಾರರ ಜೊತೆ ಶೀಘ್ರ ಸಭೆ
‘ಯೋಜನೆ ವಿರುದ್ಧ ಹೋರಾಟ ಮಾಡುತ್ತಿರುವ ರೈತರ ಜೊತೆ ಮುಂದಿನ ವಾರ ಸಭೆ ನಡೆಸಲಾಗುವುದು. ಅವರ ಅಹವಾಲು ಆಲಿಸಿ ಸ್ಪಂದಿಸಲಾಗುವುದು. ಅವರು ಸಹ ಹೋರಾಟ ನಿಲ್ಲಿಸಿ ಯೋಜನೆ ಸಾಕಾರಕ್ಕೆ ಸಹಕಾರ ನೀಡಬೇಕು. ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಹಿಂಪಡೆಯಲಾಗುವುದು. ನನ್ನ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ ನಿಂದಿಸಿದ್ದಾರೆ. ನನಗೆ ಮತ ಹಾಕಿ ಗೆಲ್ಲಿಸಿರುವ ಜನರು ಹೊಗಳಿದರೂ ತೆಗಳಿದರೂ ಸಮಾನವಾಗಿ ಸ್ವೀಕರಿಸುವೆ. ಅವರ ವಿರುದ್ಧ ಪ್ರಕರಣ ದಾಖಲಿಸುವ ಮಟ್ಟಕ್ಕೆ ನಾನು ಹೋಗಲಾರೆ’ ಎಂದು ಪ್ರಶ್ನೆಯೊಂದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ರಾಜಕೀಯ ಕಾರಣಕ್ಕಾಗಿ ಎಚ್‌ಡಿಕೆ ವಿರೋಧ
‘ಉಪನಗರ ಯೋಜನೆಯು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸು. ನಾವೀಗ ಸಾಕಾರ ಮಾಡಿ ಅವರ ಕನಸು ಈಡೇರಿಸಿದ್ದೇವೆ. ಇದೀಗ ಅವರು ರಾಜಕೀಯ ಕಾರಣಕ್ಕೆ ಯೋಜನೆ ವಿರೋಧಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಿಜವಾಗಿಯೂ ಅವರು ಯೋಜನೆ ವಿರೋಧಿಸುವುದಾದರೆ ಹಿಂದೆ ನಾನು ಭೂ ಸ್ವಾಧೀನದ ವಿರುದ್ಧ ದನಿ ಎತ್ತಿದಾಗ ಯಾಕೆ ಬೆಂಬಲಿಸಲಿಲ್ಲ? ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ ಯಾಕೆ ಯೋಜನೆ ರದ್ದುಪಡಿಸಲಿಲ್ಲ? ಯೋಜನಾ ಪ್ರದೇಶದಲ್ಲಿ ಅವರ ಕುಟುಂಬದ ಜಮೀನಿದ್ದರೂ ಯಾಕೆ ಭೂ ಸ್ವಾಧೀನ ವಿರೋಧಿಸಿ ಆಕ್ಷೇಪ ಸಲ್ಲಿಸಲಿಲ್ಲ’ ಎಂದು ಬಾಲಕೃಷ್ಣ ಪ್ರಶ್ನಿಸಿದರು. ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ಧ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ ಎಚ್.ಡಿ. ದೇವಡೆಗೌಡರು ಮುಖ್ಯಮಂತ್ರಿಯಾದರು. ಸಮುದಾಯ ಹಾಗೂ ಸ್ವಾಮೀಜಿಗಳ ಬಗ್ಗೆ ಕುಮಾರಸ್ವಾಮಿ ಅವರು ಹಗುರವಾಗಿ ಮಾತಾಡುವುದನ್ನು ಬಿಡಲಿ. ಇವರಿಗೆ ಸಮುದಾಯ ಮತ್ತು ಸ್ವಾಮೀಜಿಗಳ ಆಶೀರ್ವಾದ ಬೇಡವೇ? ಇಲ್ಲದೆ ಅಧಿಕಾರ ಅನುಭವಿಸಿದ್ದಾರೆಯೇ? ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.