
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಸ್ವಾಧೀನವಾಗಲಿರುವ ಭೂಮಿಗೆ ಒಂದು ವಾರದೊಳಗೆ ಪರಿಹಾರ ದರ ನಿಗದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.
ಜಿಬಿಐಟಿಗೆ ಸಂಬಂಧಿಸಿದಂತೆ ಯೋಜನಾ ಪ್ರದೇಶದ ಜಮೀನುಗಳ ಮಾಲೀಕರ ಜೊತೆ ಭೂ ಪರಿಹಾರದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಅವರು, ಯೋಜನಾ ಪ್ರದೇಶದ 9 ಗ್ರಾಮಗಳಲ್ಲಿ ಜೆಎಂಸಿ (ಜಂಟಿ ಅಳತೆ ಪ್ರಮಾಣೀಕರಣ) ಪ್ರಕ್ರಿಯೆಯನ್ನು 2026ರ ಮಾರ್ಚ್ ಮೊದಲ ವಾರದೊಳಗೆ ಮುಗಿಸಿ, ತಿಂಗಳಾಂತ್ಯದೊಳಗೆ ಎಲ್ಲರಿಗೂ ಪರಿಹಾರ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.
ಸಿವಿಲ್ ಕಾಮಗಾರಿ ಸೇರದಂತೆ ಯೋಜನೆಯು 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಆ್ಯಪ್ ಆಧರಿಸಿ ನಿತ್ಯ 90 ಎಕರೆ ಜೆಎಂಸಿ ಜೊತೆಗೆ ಸಂಗ್ರಹಿಸಿದ ಅಂಕಿಅಂಶಗಳ ಮೌಲ್ಯಮಾಪನವೂ ನಡೆಯುತ್ತಿದೆ. ಇಷ್ಟೊಂದು ತ್ವರಿತವಾಗಿ ಬೇರೆಲ್ಲೂ ಜೆಎಂಸಿ ನಡೆದಿಲ್ಲ ಎಂದರು.
ಸ್ವಾಧೀನವಾಗಲಿರುವ ಜಮೀನಿಗೆ ಪ್ರತಿ ಎಕರೆಗೆ ಕನಿಷ್ಠ ಮತ್ತು ಗರಿಷ್ಠ ಪರಿಹಾರ ಎಷ್ಟು ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಅವರು ಈಗಾಗಲೇ ತಿಳಿಸಿದ್ದಾರೆ. ಆದರೂ, ಭೂಮಿ ನೋಂದಣಿ ಮತ್ತು ಮುದ್ರಾಂಕ (ಎಸ್.ಆರ್) ಮೌಲ್ಯ ಆಧರಿಸಿ ಕಡಿಮೆ ಪರಿಹಾರ ಸಿಗಲಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಮಾಲೀಕರು ಇಂತಹ ಸುಳ್ಳು ವಿಷಯಗಳನ್ನು ನಂಬಬಾರದು ಎಂದು ಮನವಿ ಮಾಡಿದರು.
ವಹಿವಾಟು ದರ: ‘ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದಿರುವ ‘ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ–2013’ ಪ್ರಕಾರವೇ ಪರಿಹಾರ ನೀಡಲಾಗುತ್ತದೆ. ಇದು ಜಗತ್ತಿನಲ್ಲಿರುವ ಅತ್ಯಂತ ಉದಾರ ಕಾಯ್ದೆ. ನಾವು ಎಸ್.ಆರ್ ಮೌಲ್ಯಕ್ಕೆ ಬದಲಾಗಿ ಭೂಮಿಯ ವಹಿವಾಟು ದರ ಆಧರಿಸಿ 3 ಪಟ್ಟು ಪರಿಹಾರ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಆತಂಕ ಬಿಡಿ: ಯೋಜನೆಯ ಪಾಲುದಾರರಾಗುವ ಜಮೀನು ಮಾಲೀಕರಿಗೆ ಎಲ್ಲೋ ಮೂಲೆಯಲ್ಲಿ ನಿವೇಶನ ಕೊಡುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದು ಸತ್ಯವಲ್ಲ. ಮಾಸ್ಟರ್ ಪ್ಲಾನ್ ಆದ ಬಳಿಕ, ಯೋಜನಾ ಪ್ರದೇಶವನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗುತ್ತದೆ. ಆ ವಲಯದಲ್ಲಿ ಮಾಲೀಕರಿಗೆ ವಸತಿ ಮತ್ತು ವಾಣಿಜ್ಯ ನಿವೇಶನಗಳನ್ನು ಹಂಚಲಾಗುವುದು ಎಂದರು.
ಮಧ್ಯಾಹ್ನ 12.15ಕ್ಕೆ ಶುರುವಾದ ಸಭೆಯಲ್ಲಿದ್ದ ಎಲ್ಲರೂ ಯೋಜನೆಗೆ ತಮ್ಮ ಬೆಂಬಲ ಸೂಚಿಸಿದರು. ಜೊತೆಗೆ ಪರಿಹಾರ ಹೆಚ್ಚಳ ಸೇರಿದಂತೆ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಕೆಲ ಸಲಹೆ ನೀಡಿದರು. ಪರಿಹಾರ ಮತ್ತು ವಾರ್ಷಿಕ ಭತ್ಯೆ ಹೆಚ್ಚಳ ಮಾಡಬೇಕೆಂಬ ಒತ್ತಾಯಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಜೆಎಂಸಿ ನಡೆಸುವ ಅಧಿಕಾರಿಗಳ ತಂಡದ ಮೇಲೆ ಕೆಲವೆಡೆ ಹಲ್ಲೆ ಮತ್ತು ಕೆಲಸಕ್ಕೆ ಅಡ್ಡಿಪಡಿಸುವ ಘಟನೆಗಳು ನಡೆದಿದೆ. ಹಾಗಾಗಿ, ಜೆಎಂಸಿ ತಂಡಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ರೈತರು ಸಲಹೆ ನೀಡಿದರು. ಅದಕ್ಕೆ ಡಿ.ಸಿ, ಪ್ರತಿ ತಂಡದ ಜೊತೆ ಇಬ್ಬರು ಪೊಲೀಸರನ್ನು ನಿಯೋಜಿಸಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರಿಗೆ ಸೂಚಿಸಿದರು.
ಮಾತಿನ ಚಕಮಕಿ
ಎ. ಮಂಜುನಾಥ್ ನೇತೃತ್ವದಲ್ಲಿ ಡಿ.ಸಿ ಸಭೆಗೆ ಬಂದ ರೈತರು ಮಾತುಕತೆ ಮುಗಿಸಿದ ಬಳಿಕ, ಅದಾಗಲೇ ಸಭೆಯಲ್ಲಿದ್ದ ಜಮೀನು ಮಾಲೀಕರೊಬ್ಬರು ಇವರೆಲ್ಲರನ್ನು ಹೊರಕ್ಕೆ ಕಳಿಸಿ ಎಂದು ಮನವಿ ಮಾಡಿದರು. ಅದಕ್ಕೆ ಕೆರಳಿದ ರೈತರು, ಮಾಲೀಕನ ವಿರುದ್ಧ ಮುಗಿಬಿದ್ದರು. ಆಗ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾನಿರತ ರೈತ ಮುಖಂಡರು ಯೋಜನೆ ಕೈ ಬಿಡುವಂತೆ ಹಾಗೂ ಸಭೆಯಲ್ಲಿದ್ದವರು ಯೋಜನೆ ಪರವಾಗಿ ಕೆಲ ಒತ್ತಾಯದ ಮನವಿ ಪತ್ರವ ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನ, ಉಪ ವಿಭಾಗಾಧಿಕಾರಿ ಬಿನೋಯ್, ರಾಮನಗರ ತಹಶೀಲ್ದಾರ್ ತೇಜಸ್ವಿನಿ, ಜಿಬಿಡಿಎ ಹಾಗೂ ಜಿಲ್ಲಾಡಳಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಸಾಮಾಜಿಕ ಪರಿಣಾಮದ ಸಮೀಕ್ಷೆ ಯಾಕೆ ಆಗಿಲ್ಲ. ರೈತರ ಜೊತೆ ಇದುವರೆಗೆ ಸಭೆ ನಡೆಸದೆ ಈಗ ಭೂ ಪರಿಹಾರ ಚರ್ಚೆಗೆ ಏಕಾಏಕಿ ಸಭೆ ಮಾಡಿರುವುದು ಸರಿಯಲ್ಲ. ಮತ್ತೊಮ್ಮೆ ಸಭೆ ಹಮ್ಮಿಕೊಳ್ಳಿ– ಎ. ಮಂಜುನಾಥ್ ಮಾಜಿ ಶಾಸಕ
ಜಿಲ್ಲಾಧಿಕಾರಿ ಅವರು ಉಪನಗರ ಯೋಜನಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ರೈತರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿ. ಆಗ ಯೋಜನೆ ಪರ ಮತ್ತು ವಿರುದ್ಧ ಎಷ್ಟು ಜನ ಇದ್ದಾರೆ ಎಂಬ ಸತ್ಯ ಗೊತ್ತಾಗಲಿದೆ– ರಾಮಯ್ಯ ಅಧ್ಯಕ್ಷ ಭೈರಮಂಗಲ– ಕಂಚುಗಾರನಹಳ್ಳಿ ಗ್ರಾ.ಪಂ ರೈತರ ಭೂ ಹಿತರಕ್ಷಣಾ ಸಂಘ
ಜಿಲ್ಲಾಧಿಕಾರಿ ಸಭಾ ಸೂಚನಾಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ ಜಮೀನು ಮಾಲೀಕರ ಜೊತೆ ಸಭೆ ನಡೆಸದೆ ಕರ್ತವ್ಯಲೋಪ ಎಸಗಿದ್ದಾರೆ. ಯೋಜನೆ ವಿರೋಧಿಸಿ ಲಿಖಿತವಾಗಿ ಆಕ್ಷೇಪಣೆ ಕೊಟ್ಟಿರುವ ರೈತರು ಕೋರ್ಟ್ ಮೊರೆ ಹೋಗುತ್ತೇವೆ– ಪ್ರಕಾಶ್ ಎಚ್.ಜಿ ಭೈರಮಂಗಲ– ಕಂಚುಗಾರನಹಳ್ಳಿ ಗ್ರಾ.ಪಂ ರೈತರ ಭೂ ಹಿತರಕ್ಷಣಾ ಸಂಘ
ಶೇ 80ರಷ್ಟು ಮಂದಿ ಒಪ್ಪಿಗೆ: ಡಿ.ಸಿ
‘ಯೋಜನಾ ಪ್ರದೇಶದಲ್ಲಿ ಒಟ್ಟು 10452 ಹಿಸ್ಸಾಗಳಿವೆ (ಪ್ಲಾಟ್‌ಗಳು). ಆ ಪೈಕಿ ಇಂದು 1466 ಹಿಸ್ಸಾಗಳ ಮಾಲೀಕರು ಮಾತ್ರ ಗುರುವಾರ ಲಿಖಿತವಾಗಿ ತಮ್ಮ ಆಕ್ಷೇಪಣೆ ಸಲ್ಲಿಸಿದ್ದಾರೆ. ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ ಒಟ್ಟು 6200 ಜಮೀನು ಮಾಲೀಕರ ಪೈಕಿ 1190 ಮಂದಿ ಯೋಜನೆ ಕೈ ಬಿಡುವಂತೆ ಆಕ್ಷೇಪಣೆ ಸಲ್ಲಿಸಿದ್ದರು.
ಆಕ್ಷೇಪಣೆಗಳ ವಿಚಾರಣೆ ನಡೆಸಿದಾಗ ಅದರಲ್ಲಿ 240 ಜನ ಆಕ್ಷೇಪಣೆ ಹಿಂಪಡೆದು ಪರಿಹಾರ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಯೋಜನೆಗೆ ಶೇ 80ರಷ್ಟು ಜನ ಒಪ್ಪಿದ್ದು ಮುಂದಿನ ಪ್ರಕ್ರಿಯೆಯನ್ನು ನಾವು ಮುಂದುವರಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.
ರೈತರ ಒತ್ತಾಯಕ್ಕೆ ಡಿ.ಸಿ ಪ್ರತಿಕ್ರಿಯೆ
* ರೈತರು: ತೆಂಗು ಮಾವು ಅಡಿಕೆ ರೇಷ್ಮೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರ ಮೊತ್ತ ಹೆಚ್ಚಿಸಬೇಕು.
ಡಿ.ಸಿ: ಈಗಾಗಲೇ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಲಾಗಿದೆ. ಪರಿಷ್ಕರಿಸಲು ಅವಕಾಶವಿದ್ದರೆ ಪರಿಶೀಲಿಸಲಾಗುವುದು.
* ರೈತರು: ಜಮೀನಿನಲ್ಲಿರುವ ಬಾವಿ ಕೆರೆ ಕೊಳವೆಬಾವಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದನ್ನೂ ಪರಿಹಾರಕ್ಕೆ ಪರಿಗಣಿಸಬೇಕು.
ಡಿ.ಸಿ: ಜಮೀನಿನಲ್ಲಿ ರೈತರು ನಿರ್ಮಿಸಿಕೊಂಡಿರುವ ಜಲಮೂಲಗಳು ಸುಸ್ಥಿತಿಯಲ್ಲಿದ್ದರೆ ಪರಿಗಣಿಸಲಾಗುವುದು. ಹನಿ ನೀರಾವರಿ ವ್ಯವಸ್ಥೆಗೂ ಪರಿಹಾರವಿದೆ.
* ರೈತರು: ಜಮೀನು ಮಾಲೀಕರಿಗೆ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳ ಕುರಿತು ಅಧಿಕೃತವಾಗಿ ಪ್ರಕಟಣೆ ನೀಡಿ.
ಡಿ.ಸಿ: 2013ರ ಕಾಯ್ದೆ ಪ್ರಕಾರ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳ ಕುರಿತು ಜನರಿಗೆ ಅಧಿಕೃತ ಪ್ರಕಟಣೆ ಮೂಲಕ ತಿಳಿಸಲು ಅವಕಾಶವಿದೆ. ದರ ನಿಗದಿಯಾದ ಬಳಿಕ ಪ್ರಕಟಣೆ ನೀಡಲಾಗುವುದು.
* ರೈತರು: ಭೂ ಸ್ವಾಧೀನ ಮತ್ತು ಪರಿಹಾರ ವಿಷಯದಲ್ಲಿ ಪರಿಶಿಷ್ಟ ಸಮುದಾಯದವರಿಗೆ ವಿಶೇಷ ಆದ್ಯತೆ ಏನಾದರೂ ಇದೆಯೇ?
ಡಿ.ಸಿ: ಸಮುದಾಯ ಆಧಾರಿತ ವಿಶೇಷ ಆದ್ಯತೆ ಏನಿಲ್ಲ.
ಬೇಡ ಎನ್ನುವವರ ಮಾತನ್ನೂ ಆಲಿಸಿ: ಎ. ಮಂಜು
‘ಯೋಜನೆ ಪರ ಇರುವವರಿಗಿಂತ ವಿರೋಧಿಸುವವರೇ ಹೆಚ್ಚಾಗಿದ್ದಾರೆ. ಆದರೆ ನೀವು ಕೆಲವರ ಜೊತೆ ಸಭೆ ನಡೆಸಿ ಉಳಿದವರನ್ನು ರಸ್ತೆಯಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಹಾಗಾಗಿ ಬೇರೆ ದಿನ ಗ್ರಾಮವಾರು ಸಭೆ ನಡೆಸಿ. ಯೋಜನೆ ವಿರುದ್ದ ಇರುವವರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತನ್ನಿ’ ಎಂದು ಮಾಜಿ ಶಾಸಕ ಎ. ಮಂಜುನಾಥ್ ಆಗ್ರಹಿಸಿದರು.
ಪ್ರತಿಭಟನಾನಿರತ ರೈತ ಮುಖಂಡರೊಂದಿಗೆ ಸಭೆಗೆ ಬಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಮಾತನಾಡಿದ ಅವರು ‘ಯೋಜನೆ ಬೇಡ ಎನ್ನುವವರ ಲಿಖಿತ ಆಕ್ಷೇಪಣೆಗಳನ್ನು ಸ್ವೀಕರಿಸಿ ಸ್ವೀಕೃತಿ ಕೊಡಿ. ಅದರ ಆಧಾರದ ಮೇಲೆ ರೈತರು ಕೋರ್ಟ್‌ನಲ್ಲಿ ಹೋರಾಟ ಮಾಡಲು ಸಾಧ್ಯ’ ಎಂದರು. ಅದಕ್ಕೆ ಡಿ.ಸಿ ‘ಇಂದು ಸಂಜೆ 7 ಗಂಟೆವರೆಗೆ ನಮ್ಮ ಕಚೇರಿಗೆ ಯಾರೇ ಲಿಖಿತವಾಗಿ ಸರ್ವೇ ನಂಬರ್ ಹಾಕಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದು’ ಎಂದು ಹೇಳಿದರು. ಬಳಿಕ ಮಂಜು ಹಾಗೂ ಇತರ ಮುಖಂಡರು ಸಹ ಒಪ್ಪಿದರು.
ಒಳಗಡೆ ಸಭೆ; ಹೊರಗೆ ಪ್ರತಿಭಟನೆ
ಯೋಜನಾ ಪ್ರದೇಶದ ವ್ಯಾಪ್ತಿಯ ರೈತರ ಜೊತೆ ಜಿಲ್ಲಾಧಿಕಾರಿ ಒಳಗೆ ಸಭೆ ನಡೆಸುತ್ತಿದ್ದರೆ ಹೊರಗಡೆ ಯೋಜನೆ ವಿರುದ್ಧ ಇದ್ದ ರೈತರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಭೆ ವಿಷಯ ತಿಳಿದು ಬೆಳಿಗ್ಗೆಯೇ ರೈತರು ಖಾಸಗಿ ಬಸ್ಸುಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಗುಂಪಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು. ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದ ಸಭೆಗೆ ಅದಾಗಲೇ ಒಂದು ಗುಂಪು ಸಭಾಂಗಣದಲ್ಲಿ ಸೇರಿತ್ತು. ನಂತರ ಬಂದ ರೈತರು ಸಭೆ ಹೋಗಲು ಮುಂದಾದ ಪೊಲೀಸರು ತಡೆದರು. ಸಭೆ ಮುಗಿದ ಬಳಿಕ ನಿಮ್ಮನ್ನು ಬಿಡುತ್ತೇವೆ ಎಂಬ ಪೊಲೀಸರ ಪ್ರತಿಕ್ರಿಯೆಗೆ ಕೆರಳಿದ ರೈತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದರಿಂದಾಗಿ ರಸ್ತೆಯಲ್ಲಿ ಕೆಲ ಹೊತ್ತು ವಾಹನಗಳ ಸಂಚಾರ ಬಂದ್ ಆಯಿತು. ಗೇಟು ದಾಟಲು ಯತ್ನಿಸಿದ ರೈತರನ್ನು ಪೊಲೀಸರು ಹಿಂದಕ್ಕೆ ಕಳಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಪೊಲೀಸರು ರೈತರನ್ನು ವಶಕ್ಕೆ ಪಡೆದು ಬಸ್ಸುಗಳಿಗೆ ತುಂಬಿಸಿದರು. ಅದೇ ಸಮಯಕ್ಕೆ ಜೆಡಿಎಸ್‌ನ ಮಾಜಿ ಶಾಸಕ ಎ. ಮಂಜುನಾಥ್ ಸ್ಥಳಕ್ಕೆ ಬಂದಾಗ ಪೊಲೀಸರು ಸುಮ್ಮನಾದರು. ಪೊಲೀಸರ ನಡೆಗೆ ಕೆರಳಿದ ರೈತರು ಸ್ಥಳಕ್ಕೆ ಕರೆಯಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಪೊಲೀಸ್ ಬಸ್‌ಗಳ ಚಕ್ರಗಳ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರೈತನೊಬ್ಬ ರಸ್ತೆ ಮಧ್ಯೆ ಇರುವ ಸೋಲಾರ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಇತರ ರೈತರು ಮತ್ತು ಪೊಲೀಸರು ಆತನನ್ನು ಕೆಳಕ್ಕಿಳಿಸಿ ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.