ಬಿಡದಿ (ರಾಮನಗರ): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಹಾಗೂ ಸಂಬಂಧಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಸೇರಿದ ಜಮೀನುಗಳ ಜಂಟಿ ಸರ್ವೆ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ.
ಕೇತಗಾನಹಳ್ಳಿಯಲ್ಲಿ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹಾಗೂ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸೋಮವಾರ ಜಮೀನು ಸರ್ವೆ ಕಾರ್ಯ ಆರಂಭಿಸಿದ್ದರು.
ಜಿಲ್ಲೆಯ ವಿವಿಧ ಭಾಗಗಳ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳು ಅತ್ಯಾಧುನಿಕ ಉಪಕರಣಗಳೊಂದಿಗೆ ಕುಮಾರಸ್ವಾಮಿ ಹಾಗೂ ತಮ್ಮಣ್ಣ ಅವರ ಜಮೀನು ಇರುವ ಸರ್ವೆ ನಂಬರ್ 7 ಮತ್ತು 8 ಹಾಗೂ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸೇರಿದ ಸರ್ವೆ ನಂ. 16ರ ಜಮೀನಿನ ಸರ್ವೆ ನಡೆಸಿದವು. ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಈ ತಂಡಕ್ಕೆ ಸಹಾಯ ನೀಡಿದರು.
‘ಹೈಕೋರ್ಟ್ ಸೂಚನೆಯಂತೆ ಜಮೀನಿನ ಸರ್ವೆ ಕಾರ್ಯ ನಡೆಸಲಾಗಿದೆ. ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಜಂಟಿ ಸರ್ವೆ ವರದಿ ಸಲ್ಲಿಸಲಾಗುವುದು. ಎಸ್‌ಐಟಿ ಈ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಿದೆ. ಈ ಹಂತದಲ್ಲಿ ನಾವು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮಾಹಿತಿ ಬೇಕಾದವರು ಮೇಲಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ತಿಳಿಸಿದರು.
ಸರ್ವೆ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಜಮೀನಿನ ಮೂಲ ಮಾಲೀಕರು ಸರ್ವೆ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಸರ್ವೆ ನಡೆಯುವ ಫೆ. 17ರಂದು ಜಮೀನಿನಲ್ಲಿ ಹಾಜರಿದ್ದು ತಮ್ಮ ಸರ್ವೆ ನಂಬರ್ ಹಾಗೂ ಹಿಸ್ಸೆಗಳನ್ನು ತೋರಿಸಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ಭೂ ಮಾಪನ ಇಲಾಖೆ ಅಧಿಕಾರಿಗಳು ನಮಗೆ ಫೆ. 12ರಂದು ನೋಟಿಸ್ ಕೊಟ್ಟಿದ್ದರು’ ಎಂದು ತಿಳಿಸಿದರು.
‘ಅದರಂತೆ ಜಮೀನಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸೋಮವಾರ ಮತ್ತು ಮಂಗಳವಾರ ಎರಡೂ ದಿನ ಸ್ಥಳದಲ್ಲಿದ್ದೆವು. ಆದರೆ ಅಧಿಕಾರಿಗಳು ನಮ್ಮ ದಾಖಲೆಗಳನ್ನು ಪರಿಶೀಲಿಸಲಿಲ್ಲ. ನಮ್ಮ ಸಮ್ಮುಖದಲ್ಲಿ ಸರ್ವೆ ನಡೆಸಲಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದಾಗ ‘ನಮಗೇನೂ ಗೊತ್ತಿಲ್ಲ. ಮೇಲಧಿಕಾರಿಗಳನ್ನು ಕೇಳಿ’ ಎಂದು ನುಣುಚಿಕೊಂಡರು’ ಎಂದು ಬೇಸರ ತೋಡಿಕೊಂಡರು. ‘ಸರ್ವೆ ಸಂದರ್ಭದಲ್ಲಿ ಎಲ್ಲರು ಹಾಜರಿರಬೇಕು ಎಂದು ಹೇಳಿದ್ದ ಅಧಿಕಾರಿಗಳು ನಮಗೆ ಗೊತ್ತಾಗದಂತೆ ಒಳಗೊಳಗೆ ತಮಗೆ ಬೇಕಾದಂತೆ ಸರ್ವೆ ಮಾಡಿಕೊಂಡು ಹೋಗಿದ್ದಾರೆ. ಈ ಸರ್ವೆ ನಾಮಕಾವಸ್ಥೆಗೆ ನಡೆದಿದ್ದು ಸ್ಥಳೀಯರ ಸಮ್ಮುಖದಲ್ಲಿ ಮರು ಸರ್ವೆ ಆಗಬೇಕು’ ಎಂದು ಆಗ್ರಹಿಸಿದರು.
‘ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇಂತಹ ಆರೋಪದ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘1996ರಲ್ಲಿ ನಮ್ಮ ತಂದೆ ಕೇತಗಾನಹಳ್ಳಿಯಲ್ಲಿ ಖರೀದಿಸಿದ್ದ 3 ಎಕರೆ 25 ಗುಂಟೆ ಜಮೀನು ಅವರು ನಿಧನರಾದ ಬಳಿಕ ನನ್ನ ಹೆಸರಿಗೆ ವರ್ಗಾವಣೆಯಾಗಿದೆ. ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರದ ಅಫಿಡೆವಿಟ್‌ನಲ್ಲೂ ಈ ಮಾಹಿತಿ ನಮೂದಿಸಿದ್ದೇನೆ. ರೈತ ಕುಟುಂಬದವರಾದ ನಮಗೆ ಜಮೀನು ಒತ್ತುವರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕಾನೂನು ಪ್ರಕಾರ ಈಗ ನಡೆಯುತ್ತಿರುವ ಸರ್ವೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.