
ರಾಮನಗರ: ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಎರಡು ವರ್ಷದ ಗಂಡು ಚಿರತೆಯು ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿಸೆರಯಾಗಿದೆ. ರಾಮದೇವರ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ.
ಆಹಾರ ಅರಸಿ ಬರುವ ಚಿರತೆಗಳು ರಾತ್ರಿ ಮನೆಗಳ ಕೊಟ್ಟಿಗೆಯಲ್ಲಿರುವ ಕುರಿ, ಮೇಕೆ, ಕರು, ಮೇಕೆ, ಕೋಳಿ, ಸಾಕುನಾಯಿಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿದ್ದವು. ಈ ಕುರಿತು, ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು.
ಅದರಂತೆ ಗ್ರಾಮದಲ್ಲಿರುವ ತೆಂಗಿನ ನಾರಿನ ಖಾಸಗಿ ಕಾರ್ಖಾನೆ ಬಳಿ, ಬೋನು ಇರಿಸಿದ್ದರು. ಬುಧವಾರ ನಸುಕಿನಲ್ಲಿ ಆಹಾರ ಅರಸಿ ಬಂದಿದ್ದ ಚಿರತೆಯು, ಬೋನಿನೊಳಗೆ ಇದ್ದ ನಾಯಿಯನ್ನು ಬೇಟೆಯಾಡಲು ಮುಂದಾಗಿ ಸೆರೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ, ನಂತರ ಚಿರತೆಯನ್ನು ಆರ್‌ಎಫ್‌ಒ ಕಚೇರಿಗೆ ತಂದರು. ರಾತ್ರಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.