ADVERTISEMENT

ಬೊಮ್ಮಚ್ಚನಹಳ್ಳಿ: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:32 IST
Last Updated 8 ಜುಲೈ 2025, 2:32 IST
<div class="paragraphs"><p>ರಾಮನಗರ ತಾಲ್ಲೂಕಿನ ಬೊಮ್ಮಚ್ಚನಹಳ್ಳಿಯಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿರುವ ಚಿರತೆ</p></div>

ರಾಮನಗರ ತಾಲ್ಲೂಕಿನ ಬೊಮ್ಮಚ್ಚನಹಳ್ಳಿಯಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿರುವ ಚಿರತೆ

   

ರಾಮನಗರ: ತಾಲ್ಲೂಕಿನ ಬೊಮ್ಮಚ್ಚನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದ್ದ ಮೂರು ವರ್ಷದ ಹೆಣ್ಣ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆ ಮನೆಗಳ ಬಳಿಯ ಇದ್ದ ಕುರಿ, ಕೋಳಿ ಹಾಗೂ ನಾಯಿಗಳನ್ನು ಹೊತ್ತೊಯ್ದಿತ್ತು.

ಬೆಳಿಗ್ಗೆ ಕೆಲವರ ಕಣ್ಣಿಗೆ ಬಿದ್ದಿದ್ದ ಚಿರತೆ, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಇದರಿಂದಾಗಿ, ಬೆಳಿಗ್ಗೆ ಮತ್ತು ರಾತ್ರಿ ಒಂಟಿಯಾಗಿ ಓಡಾಡಲು ಭಯಪಡುತ್ತಿದ್ದರು. ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಇಲಾಖೆಯವರು ಗ್ರಾಮದ ಬಳಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು.

ADVERTISEMENT

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು, ಬೋನು ಸಮೇತ ಚಿರತೆಯನ್ನು ಕೊಂಡೊಯ್ದು ದೂರದ ಅರಣ್ಯಕ್ಕೆ ಬಿಟ್ಟರು. ಆರ್‌ಎಫ್‌ಒ ಮನ್ಸೂರ್ ಅಹ್ಮದ್, ಡಿಆರ್‌ಎಫ್‌ಒಗಳಾದ ಭೈರವ್, ವಾಸು, ಅರಣ್ಯ ರಕ್ಷಕರಾದ ಧರ್ಮೇಶ್, ಕುಮಾರ್ ಆನೆ ಕಾರ್ಯಪಡೆ ಸಿಬ್ಬಂದಿಗಳು ಇದ್ದರು.

ಕರು ಬಲಿ

ತಾಲ್ಲೂಕಿನ ಲಕ್ಕೋಜನಹಳ್ಳಿಯ ನಂದೀಶ್ ಅವರ ಮನೆಯ ಕೊಟ್ಟಿಗೆಯಲ್ಲಿದ್ದ ಕರು ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಭಾನುವಾರ ನಡೆದಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ನಂದೇಶ ಅವರ ಮನೆಯ ಕೊಟ್ಟಿಗೆಗೆ ನಸುಕಿನಲ್ಲಿ ಬಂದಿರುವ ಚಿರತೆ ಕರುವನ್ನು ಕೊಂದು ಅರ್ಧಂಬರ್ಧ ತಿಂದು ಹಾಕಿ ಹೋಗಿದೆ.

ಮೂರು ವರ್ಷದಿಂದ ಹಸು ಸಾಕಣೆ ಮಾಡಿಕೊಂಡು ಬಂದಿದ್ದೆ. ಚಿರತೆ ದಾಳಿಗೆ ಕರು ಬಲಿಯಾಗಿರುವುದರಿಂದ ನಮಗೆ ಆರ್ಥಿಕ ನಷ್ಟವಾಗಿದೆ. ಅರಣ್ಯ ಇಲಾಖೆಯವರು ಪರಿಹಾರದ ಜೊತೆಗೆ ಚಿರತೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಂದೀಶ್ ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.