ADVERTISEMENT

ರಾಜ್ಯ, ದೇಶದ ಸದೃಢತೆಗೆ ಶ್ರಮಿಸೋಣ: ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗಣರಾಜ್ಯೋತ್ಸವದ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:12 IST
Last Updated 26 ಜನವರಿ 2020, 14:12 IST
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿದರು.
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿದರು.   

ರಾಮನಗರ: ‘ಸ್ನೇಹ ಪ್ರೀತಿ, ಸೋದರ ಭಾವದ ಸೆಲೆ ನಮ್ಮೆಲ್ಲರ ಆಶಯವಾಗಬೇಕು. ನಾವು ನೀವೆಲ್ಲರೂ ಒಗ್ಗೂಡಿ ರಾಜ್ಯದ ಅಭಿವೃದ್ಧಿಯೊಂದಿಗೆ ಭಾರತವನ್ನು ಸಶಕ್ತ ಸದೃಢವಾಗಿ ರೂಪಿಸಲು ಶ್ರಮಿಸಬೇಕು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಭಾನುವಾರ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನದ ಆಶಯದಂತೆ ನಾವು ನೀವೆಲ್ಲರೂ ಒಗ್ಗೂಡಿ ಸುಂದರ ಸಮಾಜವನ್ನು ಕಟ್ಟುವುದರ ಜತೆಗೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕಾಗಿದೆ. ಅಂಬೇಡ್ಕರ್ ಅವರ ನಿರಂತರ ಪ್ರಯತ್ನ ಅವರ ದೇಶ ಪ್ರೇಮ ಮತ್ತು ಅದ್ಭುತ ಅನುಭವಿ ಪಾಂಡಿತ್ಯದಿಂದಾಗಿ ನಮಗೆ ಅತ್ಯುತ್ತಮವಾದ ಸಂವಿಧಾನ ದೊರೆತಿದೆ ಎಂದು ತಿಳಿಸಿದರು.

ADVERTISEMENT

ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದ ಬಳಿ ನಿರ್ಮಾಣಗೊಳ್ಳಲಿರುವ ಸಂಸ್ಕೃತ ವಿಶ್ವ ವಿದ್ಯಾನಿಲಯಕ್ಕೆ 100 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, 330 ಕೋಟಿ ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದ ಬಳಿ 10 ಕೋಟಿ ವೆಚ್ಚದಲ್ಲಿ ಕಣ್ವ ಚಿಲ್ಡ್ರನ್ಸ್ ವಲ್ರ್ಡ್ ಸ್ಥಾಪಿಸಲಾಗುತ್ತಿದೆ. ಇಗ್ಗಲೂರು ಡ್ಯಾಂನ ಬಳಿ 2 ಕೋಟಿ ವೆಚ್ಚದಲ್ಲಿ ದೋಣಿ ವಿಹಾರ ಹಾಗೂ ಪ್ರವಾಸಿ ತಾಣದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಡಾ. ಶಿವಕುಮಾರ ಸ್ವಾಮೀಜಿ ರವರ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು ತಲಾ ₹25 ಕೋಟಿಗಳಂತೆ ಎರಡು ಗ್ರಾಮಗಳಿಗೆ ಒಟ್ಟು ₹50 ಕೋಟಿಗಳ ಅನುದಾನವನ್ನು ನಿಗದಿ ಪಡಿಸಿದೆ. ಈ ಸಂಬಂಧ ಬಾನಂದೂರು ಗ್ರಾಮಕ್ಕೆ ಹಾಗೂ ವೀರಾಪುರ ಗ್ರಾಮಕ್ಕೆ ಮೊದಲನೇ ಕಂತಾಗಿ ತಲಾ ₹14.50 ಕೋಟಿಗಳಂತೆ ಒಟ್ಟು ₹29 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯ ವ್ಯಾಪ್ತಿಗೆ ಬರುವ 10 ಕೆರೆಗಳನ್ನು ಜಲಾಮೃತ ಯೋಜನೆಯಡಿ ಪುನಃಶ್ಚೇತನಗೊಳಿಸಲು ಆಯ್ಕೆ ಮಾಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ 222.73 ಲಕ್ಷ ಹಂಚಿಕೆಯಾಗಿದ್ದು, ಈ ವರೆಗೆ 111.37 ಲಕ್ಷ ಬಿಡುಗಡೆಯಾಗಿದೆ ಜಿಲ್ಲೆಯಲ್ಲಿ 2,156 ಬಹುಕಮಾನು ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. 2019-20ನೇ ಸಾಲಿನಲ್ಲಿ 3054 ಗ್ರಾಮೀಣ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 330 ಲಕ್ಷ ಅನುದಾನ ನಿಗದಿಯಾಗಿದೆ. ಇದರಲ್ಲಿ ಒಟ್ಟಾರೆ 100 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರಸ್ತೆ ನಿರ್ವಹಣೆಗಾಗಿ ಒಟ್ಟಾರೆ 204 ಲಕ್ಷ ಅನುದಾನ ನಿಗದಿಯಾಗಿದ್ದು, 41 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆಶಿಪ್ ಯೋಜನೆಯಡಿ ಮಾಗಡಿ - ಸೋಮವಾರಪೇಟೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಬೆಂಗಳೂರು ನೈಸ್ ರಸ್ತೆಯಿಂದ ಮಾಗಡಿ ಕುಣಿಗಲ್ ಎನ್.ಎಚ್. 75 ರಸ್ತೆಯ ಕಾಮಗಾರಿ ಕೆಲಸವು ಪ್ರಗತಿಯಲ್ಲಿದೆ. ಕನಕಪುರ ತಾಲ್ಲೂಕಿನ ಸಾತನೂರು, ರಾಮನಗರ ತಾಲ್ಲೂಕಿನ ಕೈಲಾಂಚ ಹಾಗೂ ಮಾಗಡಿ ತಾಲ್ಲೂಕಿನ ಕುದೂರುಗಳಲ್ಲಿ ತಲಾ 20 ಲಕ್ಷ ವೆಚ್ಚದಲ್ಲಿ ನಾಡ ಕಚೇರಿ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ದಗೊಂಡಿವೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್. ಬಸಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಉಪವಿಭಾಗಾಧಿಕಾರಿ ಡಾ. ದಾಕ್ಷಾಯಿಣಿ, ನಗರಸಭೆ ಆಯುಕ್ತೆ ಬಿ. ಶುಭಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಇದ್ದರು.

ಗಾಯಕ ಬೇವೂರು ರಾಮಯ್ಯ ಮತ್ತು ತಂಡ ನಾಡಗೀತೆ, ರೈತ ಗೀತೆ ಹಾಡಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.