ADVERTISEMENT

ಲೋಕ ಅದಾಲತ್; 1.53 ಲಕ್ಷ ಪ್ರಕರಣ ಇತ್ಯರ್ಥ: ನ್ಯಾಯಮೂರ್ತಿ ಅಣ್ಣಯ್ಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:15 IST
Last Updated 14 ಡಿಸೆಂಬರ್ 2025, 6:15 IST
ರಾಮನಗರದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಎಂ.ಎಚ್. ಅಣ್ಣಯ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತ ಹಾಗೂ ಇತರರು ಹೂಮಾಲೆ ಹಾಕಿ ಶುಭ ಕೋರಿದರು.
ರಾಮನಗರದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಎಂ.ಎಚ್. ಅಣ್ಣಯ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತ ಹಾಗೂ ಇತರರು ಹೂಮಾಲೆ ಹಾಕಿ ಶುಭ ಕೋರಿದರು.   

ರಾಮನಗರ: ಜಿಲ್ಲೆಯಾದ್ಯಂತ ಲೋಕ ಅದಾಲತ್ ಮೂಲಕ 1.53 ಲಕ್ಷ ಪ್ರಕರಣ ಇತ್ಯರ್ಥಗೊಂಡಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಎಂ.ಎಚ್. ಅಣ್ಣಯ್ಯ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಕ್ಷಿದಾರರು ತಮ್ಮ ವಿವಾದಗಳನ್ನು ಸೌಹಾರ್ದ ಮತ್ತು ತ್ವರಿತವಾಗಿ ಪರಿಹರಿಸಿಕೊಳ್ಳಲು ಲೋಕ ಅದಾಲತ್ ಸಹಾಯವಾಗಿದೆ ಎಂದರು.

ರಾಷ್ಟ್ರೀಯ ಲೋಕ ಅದಾಲತ್ ಗಾಗಿ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನ್ಯಾಯಾಲಯಗಳು ಸೇರಿದಂತೆ ಜಿಲ್ಲೆಯಾದ್ಯಂತ 21 ನ್ಯಾಯ ಪೀಠ ರಚಿಸಲಾಗಿದೆ. ನ್ಯಾಯಾಲಯದಲ್ಲಿ ಒಟ್ಟು 60,130 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ 9647 ಪ್ರಕರಣ ಹಾಗೂ 1,50,856 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಅದರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ 3084 ಪ್ರಕರಣ ಹಾಗೂ 1,50,643 ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟಾರೆ 1,537,27 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಿ ಸಂಧಾನದ ಮೂಲಕ ವಿವಾದವನ್ನು ಇತ್ಯರ್ಥಪಡಿಸುವ ಮೂಲಕ ಪ್ರಕರಣಗಳು ಸುಖಾಂತ್ಯಗೊಳ್ಳುವ ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಲೋಕ ಅದಾಲಾತ್ ಸಹಕಾರಿಯಾಗಿದೆ. ಆ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದ್ದೇ ಆದಲ್ಲಿ ಕಕ್ಷಿದಾರರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪಲಿದೆ. ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದರು.

ಇಂದಿನ ದಿನಗಳಲ್ಲಿ ವ್ಯಾಜ್ಯಗಳು ಸರ್ವೇ ಸಾಮಾನ್ಯ, ಆದರೆ ಕಕ್ಷಿದಾರರು ಆದಷ್ಟು ನ್ಯಾಯಾಲಯಕ್ಕೆ ಬರುವುದನ್ನು ಕಡಿಮೆ ಮಾಡಬೇಕು. ರಾಜಿ ಮಾಡುವ ಮೂಲಕ ಅನೇಕ ಸಮಸ್ಯೆಗಳು, ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಬಹುದು. ಈ ಉದ್ದೇಶದಿಂದಲೇ ಲೋಕ ಅದಾಲತ್ ಅನ್ನು ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ ಅದಾಲತ್ ನಲ್ಲಿ ರಾಜಿಸೂತ್ರದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತ, ವಕೀಲರಾದ ತಿಮ್ಮೇಗೌಡ, ಹನುಮಂತಯ್ಯ, ದೇವರಾಜು, ಹರೀಶ್, ಇತರರು ಹಾಜರಿದ್ದರು.

ನ್ಯಾಯಾಧೀಶರ ಬುದ್ಧಿಮಾತಿಗೆ ಮಣಿದು ಒಂದಾದ ಜೋಡಿ

ADVERTISEMENT

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಂಪತ್ಯ ಜೀವನ ಅಂತ್ಯಗೊಳಿಸಲು ಮುಂದಾಗಿದ್ದ ಎರಡು ಜೋಡಿಗಳು ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ ಮಾಡಿಕೊಂಡು ತಮ್ಮ ದಾಂಪತ್ಯ ಜೀವನ ಮುಂದುವರೆಸುವ ನಿರ್ಧಾರ ಕೈಗೊಂಡರು.

ನ್ಯಾಯಾಧೀಶರ ಬುದ್ಧಿಮಾತಿಗೆ ಸಹಮತ ವ್ಯಕ್ತಪಡಿಸಿದ ಜೋಡಿ ಪರಸ್ಪರ ಒಪ್ಪಿ ಮತ್ತೆ ಜೀವನ ಮುಂದುವರೆಸುವ ನಿರ್ಧಾರ ಕೈಗೊಂಡರು. ಮಗಳ ಮುಖ ನೋಡಿ ಒಂದಾಗಿ ಜೀವನ ನಡೆಸಿ ಎಂದು ನ್ಯಾಯಾಧೀಶರು ನೀಡಿದ ಸಲಹೆಗೆ ಒಂದು ಜೋಡಿ ಒಂದಾಯಿತು. ಪೊಲೀಸ್ ನೌಕರಿಯಲ್ಲಿದ್ದ ತಮ್ಮ ಪತಿಯ ಜೊತೆಗೆ ಸಂಘರ್ಷ ಮರೆತು ಮತ್ತೆ ದಾಂಪತ್ಯ ಜೀವನ ಮುಂದುವರೆಸಲು ಮತ್ತೊಂದು ಜೋಡಿ ನಿರ್ಧರಿಸಿತು.

ಎರಡು ಜೋಡಿಗಳು ಮತ್ತೆ ಒಂದಾದ ಕಾರಣ ನ್ಯಾಯಾಧೀಶರು ಹಾಗೂ ವಕೀಲರು ಎರಡು ಜೋಡಿಗೂ ಹೂವಿನ ಮಾಲೆ ಹಾಕಿ ಶುಭ ಕೋರಿತು. ಇದರೊಂದಿಗೆ ಕೌಟುಂಬಿಕ ಕಲಹದಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಿದ್ದ ಕೆಲವು ಜೋಡಿಗಳು ಯಾವುದೇ ಮನವೊಲಿಕೆಗೆ ಸ್ಪಂದಿಸದೆ ವಿಚ್ಛೇದನ ಪಡೆದುಕೊಂಡ ಪ್ರಸಂಗವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.