ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಕೆಆರ್‌ಎಸ್‌ ಪಕ್ಷದಿಂದ ಮುಸಾದಿಕ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 5:20 IST
Last Updated 30 ಮಾರ್ಚ್ 2024, 5:20 IST
ರಾಮನಗರದಲ್ಲಿ ನಡೆದ ಕೆಆರ್‌ಎಸ್ ಪಕ್ಷದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮೊಹಮ್ಮದ್ ಮುಸಾದಿಕ್ ಪಾಷಾ ಅವರಿಗೆ ಪದಾಧಿಕಾರಿಗಳು ಪಕ್ಷದ ಬಾವುಟ ನೀಡಿ ಅಭಿನಂದಿಸಿದರು
ರಾಮನಗರದಲ್ಲಿ ನಡೆದ ಕೆಆರ್‌ಎಸ್ ಪಕ್ಷದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮೊಹಮ್ಮದ್ ಮುಸಾದಿಕ್ ಪಾಷಾ ಅವರಿಗೆ ಪದಾಧಿಕಾರಿಗಳು ಪಕ್ಷದ ಬಾವುಟ ನೀಡಿ ಅಭಿನಂದಿಸಿದರು   

ರಾಮನಗರ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಮೊಹಮ್ಮದ್ ಮುಸಾದಿಕ್ ಪಾಷಾ ಸ್ಪರ್ಧಿಸಲಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಪಾಷಾ ಅವರಿಗೆ ‘ಬಿ’ ಫಾರಂ ನೀಡಿದ್ದು, ಮಾರ್ಚ್ 30ರಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಜೀವನ್ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಹೆಸರು ಘೋಷಿಸಿ ಮಾತನಾಡಿದ ಅವರು, ‘ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿವೆ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಸಲ ಜೆಡಿಎಸ್ ಪಕ್ಷವು ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕಣದಲ್ಲಿರುವ ಕಾಂಗ್ರೆಸ್ ಮತ್ತು ಮೈತ್ರಿ ಅಭ್ಯರ್ಥಿ ಎದುರು ಕೆಆರ್‌ಎಸ್ ಪಕ್ಷವು ಸಾಮಾನ್ಯ ಕಾರ್ಯಕರ್ತ ಮುಸಾದಿಕ್ ಅವರನ್ನು ಕಣಕ್ಕಿಳಿಸಿದೆ’ ಎಂದರು.

‘ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ನಮ್ಮ ಋಣ ನಿಮ್ಮ ಮೇಲಿರುವುದರಿಂದ ನಮಗೆ ಮತ ಹಾಕಿ ಎಂದು ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಜನರ ತೆರಿಗೆ ಹಣದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆಯೇ ವಿನಾ ಪಕ್ಷದಿಂದಲ್ಲ. ಹಾಗಾಗಿ, ಜನರ ವಿವೇಚನೆ ಬಳಸಿ ಮತ ಹಾಕಬೇಕು’ ಎಂದು ಹೇಳಿದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುಧಾಕರ್, ಅಭ್ಯರ್ಥಿ ಮೊಹಮ್ಮದ್ ಮುಸಾದಿಕ್ ಪಾಷಾ, ತಾಲ್ಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ರಹಮತ್ ಪಾಷಾ, ಕಾರ್ಯದರ್ಶಿ ಪ್ರಶಾಂತ್ ಹೊಸದುರ್ಗ, ತಾಲ್ಲೂಕು ಕಾರ್ಯದರ್ಶಿ ಕುಮಾರ್, ಮುಖಂಡರಾದ ಆನಂದ್, ಮುಜಾಹಿದ್ ಪಾಷ, ಲಿಯಾಖತ್ ಅಲಿ, ಜಬೀವುಲ್ಲಾ ಹಾಗೂ ಸೈಯದ್ ಇಮ್ರಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.