ADVERTISEMENT

ರಾಮನಗರ | ಮದ್ದೂರು ಘಟನೆ ಖಂಡಿಸಿ ಪ್ರತಿಭಟನೆ

ಗಣೇಶೋತ್ಸವ ಮೆರವಣಿಗೆಗೆ ನಿರ್ಬಂಧಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಖಂಡನೆ; ಎಡಿಸಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 2:38 IST
Last Updated 13 ಸೆಪ್ಟೆಂಬರ್ 2025, 2:38 IST
ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ  ಗಣೇಶೋತ್ಸವ ಮೆರವಣಿಗೆಗೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು
ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ  ಗಣೇಶೋತ್ಸವ ಮೆರವಣಿಗೆಗೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು   

ರಾಮನಗರ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯ ಕೋಮಿನವರು ನಡೆಸಿದ ಕಲ್ಲು ತೂರಾಟ ಹಾಗೂ ಘಟನೆ ಬೆನ್ನಲ್ಲೇ ಗಣೇಶೋತ್ಸವ ಮೆರವಣಿಗೆಗೆ ನಿರ್ಬಂಧ ವಿಧಿಸಿರುವುದನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯದ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಮೂಲಕ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಷತ್ತಿನ ಮುಖಂಡ ಕಿರಣ್ ಮಾತನಾಡಿ,‌ ‘ಗಣೇಶೋತ್ಸವವು ಹಿಂದೂಗಳಿಗೆ ಐತಿಹಾಸಿಕವಾಗಿ ಮತ್ತು ಭಾವನಾತ್ಮಕವಾಗಿ ಅತ್ಯಂತ ಹತ್ತಿರವಾಗಿರುವ ಹಬ್ಬ. ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶ ಹಬ್ಬವನ್ನಾಗಿ ಪರಿವರ್ತಿಸಿದರು’ ಎಂದರು.

ADVERTISEMENT

‘ಅಂದಿನಿಂದ ಇಂದಿನವರೆಗೂ ಗಣೇಶೋತ್ಸವ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಇಂದು ಕಾಂಗ್ರೆಸ್ ಸರ್ಕಾರವು ಗಣೇಶೋತ್ಸವಕ್ಕೆ ಭಂಗ ತರುವಂತಹ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಹಬ್ಬಕ್ಕೆ ವಿಘ್ನಗಳು ಎದುರಾಗುತ್ತಿವೆ. ಇದೇ ಕಾರಣಕ್ಕೆ ಮದ್ದೂರಿನಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ’ ಎಂದು ಕಿಡಿಕಾರಿದರು.

‘ರಾಮನಗರದಲ್ಲೂ ಮುಂದೆ ಕಲ್ಲು ತೂರಾಟ ನಡೆಯಬಹುದು. ಅದಕ್ಕೆ ಅವಕಾಶ ಸಿಗದಂತೆ, ಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದವರನ್ನು ಕಾನೂನು ಪ್ರಕಾರ ಮಟ್ಟ ಹಾಕಬೇಕು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಪಾಠ ಕಲಿಸಬೇಕಿದೆ. ಜಿಲ್ಲೆಯಲ್ಲೂ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಮಾಹಿತಿ ಪೊಲೀಸ್ ಇಲಾಖೆಗೆ ಇಲ್ಲವೇ? ಇಲ್ಲೇನಾದರೂ ಕೋಮು ಗಲಭೆಯಾದರೆ ಅದಕ್ಕೆ ಇಲಾಖೆಯೇ ಹೊಣೆಯಾಗಲಿದೆ’ ಎಂದರು.

‘ರಾಜ್ಯ ಸರ್ಕಾರವು ಹಿಂದೂಗಳ ಹಬ್ಬ ಮತ್ತು ಆಚರಣೆಗಳ ಮೇಲೆ ನಿರ್ಬಂಧ ವಿಧಿಸುತ್ತಾ ದಬ್ಬಾಳಿಕೆ ನಡೆಸುತ್ತಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾಗುತ್ತಿರುವ ಪರಿಷತ್‌ನ ಮುಖಂಡರು ಜಿಲ್ಲೆ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಇದನ್ನು ಕೂಡಲೇ ತೆರವುಗೊಳಿಸಬೇಕು. ಸರಾಗವಾಗಿ ಗಣೇಶೋತ್ಸವದ ಮೆರವಣಿಗೆ ನಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬಳಿಕ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಿಶ್ವ ಹಿಂದೂ ಪರಿಷತ್, ಭಜರಂಗದಳದ ಶ್ರೀನಿಧಿ, ಪಲವಿ ದುರ್ಗಾವಾಹಿನಿ, ರಮೇಶ್, ಸುಹಾಸ್, ಜ್ಞಾನೇಶ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಜೆಪಿ ಮುಖಂಡರಾದ ಸುರೇಶ್, ರುದ್ರದೇವರು, ಕಾಳಯ್ಯ, ಜನಾರ್ದನ್, ಲಕ್ಷ್ಮಿ, ‌ನಾಗಮ್ಮ‌, ಪುಷ್ಪಲತಾ , ಶಶಿಕಲಾ, ಚನ್ನಪ್ಪ, ಸಂತೋಷ್, ಚಂದ್ರಶೇಖರ್, ರಾಘವೇಂದ್ರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.