ಮಾಗಡಿ: ತಾಲ್ಲೂಕಿನಲ್ಲಿ ರೈತರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಿಲ್ಲ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಸಂಘದ ವತಿಯಿಂದ ವಿವಿಧ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸೋಮೇಶ್ವರ ಬಡಾವಣೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆ ನಡೆಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-2 ತಹಶೀಲ್ದಾರ್, ಒಂದು ವಾರದ ಒಳಗೆ ರೈತರು ಮತ್ತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ತಿಂಗಳು ಕಳೆದರೂ ರೈತರ ಸಭೆ ಕರೆಯಲಿಲ್ಲ ಎಂದು ದೂರಿದರು.
ಹಲವು ಸಮಸ್ಯೆಗಳನ್ನು ಬಗೆಹರಿಸಲು ತಹಶೀಲ್ದಾರ್ ಒಂದು ವಾರದ ಒಳಗೆ ರೈತರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಶಿವಲಿಂಗಯ್ಯ, ರವಿಕುಮಾರ್, ಬುಡೇನ್ ಸಾಬ್, ಗೊಲ್ಲರಹಟ್ಟಿ ನಾಗರಾಜ್, ಚಿಕ್ಕಣ್ಣ, ಪಟೇಲ್ ಹನುಮಂತಯ್ಯ, ರವಿ, ಚನ್ನರಾಯಪ್ಪ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.