ADVERTISEMENT

ಮಾಗಡಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ: ಪತ್ನಿ ಸಾವು, ಪತಿ- ಮಗುವಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 8:58 IST
Last Updated 1 ಜನವರಿ 2026, 8:58 IST
   

ಮಾಗಡಿ: ಪತಿ, ಪತ್ನಿ ಹಾಗೂ ಮಗು ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಪತ್ನಿ ಮೃತಪಟ್ಟಿದ್ದು, ಪತಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕುದೂರು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಅಶ್ವಿನಿ (26) ಮೃತರು. ಗಾಯಾಳುಗಳಾದ ಪತಿ ಪರಮೇಶ್ ಮತ್ತು ಒಂದು ವರ್ಷದ ಪುತ್ರ ಯುವಾನ್ ನೆಲಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಮೇಶ್ ಅವರು ಕುಟುಂಬದೊಂದಿಗೆ ಬೆಳಿಗ್ಗೆ 7.30ರ ಸುಮಾರಿಗೆ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ಕುಣಿಗಲ್ ಕಡೆಯಿಂದ ಮೂವರು ಯುವಕರಿದ್ದ ಕಾರು ವೇಗವಾಗಿ ಬಂದಿದೆ. ಲಕ್ಕೇನಹಳ್ಳಿಯಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡ ಚಾಲಕ, ರಸ್ತೆ ವಿಭಜಕದ ಮೇಲೆ ಹತ್ತಿ ಪಲ್ಟಿಯಾಗಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕೆಳಕ್ಕೆ ಬಿದ್ದ ಅಶ್ವಿನಿ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು. ಪತಿ ಮತ್ತು ಮಗು ಗಾಯಗೊಂಡರು. ‌ಘಟನೆಯಲ್ಲಿ ಬೈಕ್ ಮತ್ತು ಕಾರು ನಜ್ಜುಗುಜ್ಜಾಗಿದೆ. ಶವವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕುದೂರು ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.