
ಕುದೂರು: ತಾಲ್ಲೂಕಿನ ಇತಿಹಾಸ ‘ಶುಕಪುರಿ’ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಸುಗ್ಗನಹಳ್ಳಿಯಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವವು ಮಂಗಳವಾರ ವೈಭವಯುತವಾಗಿ ನಡೆಯಿತು.
ಮುಂಜಾನೆಯಿಂದಲೇ ಲಕ್ಷ್ಮಿ ನರಸಿಂಹಸ್ವಾಮಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿ, ನಂತರ ಅಲಂಕೃತ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಶಾಸಕ ಎಚ್.ಸಿ. ಬಾಲಕೃಷ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಎ. ಮಂಜುನಾಥ್ ರಥವನ್ನು ಎಳೆದರು. ಜಾತ್ರೆಯಲ್ಲಿ ಜನಸಂದಣಿ ಕಿಕ್ಕಿರಿದು ತುಂಬಿತ್ತು. ರಥೋತ್ಸವ ನಡೆಯುವ ವೇಳೆ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿತು.
ದೇವಸ್ಥಾನದ ಅರವಂಟಿಕೆಗಳಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ಹಾಗೂ ಪುಳಿಯೋಗರೆ ವಿತರಿಸಲಾಯಿತು.
ದೇವಸ್ಥಾನದ ಅರ್ಚಕರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.