ADVERTISEMENT

ವಿಪ್ ಉಲ್ಲಂಘನೆ: ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಪುರಸಭೆ ಮಾಜಿ ಸದಸ್ಯರು ಅನರ್ಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:35 IST
Last Updated 19 ಫೆಬ್ರುವರಿ 2026, 4:35 IST
ರಹಮತುಲ್ಲಾ ಖಾನ್
ರಹಮತುಲ್ಲಾ ಖಾನ್   

ಮಾಗಡಿ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ನಾಲ್ಕು ಪುರಸಭೆ ಸದಸ್ಯರು ಮತದಾನದಲ್ಲಿ ತಟಸ್ಥರಾಗಿ ಉಳಿದ ಕಾರಣ ಪಕ್ಷದ ವಿಪ್ ಉಲ್ಲಂಘನೆ ಮೇರೆಗೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಾಲ್ಕು ಸದಸ್ಯರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

ಜೆಡಿಎಸ್‌ನ ರಹಮತುಲ್ಲಾ ಖಾನ್, ಹೇಮಲತಾ ನಾಗರಾಜು, ವೆಂಕಟರಾಮು, ಕೆ.ಕೆ. ಕಾಂತರಾಜು ಅನರ್ಹಗೊಂಡಿದ್ದಾರೆ. ಈ ಆದೇಶ ಪುರಸಭೆ ಆಡಳಿತ ಅವಧಿ ಮುಗಿದ ನಂತರ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಾಗಡಿ ಪುರಸಭೆ ನ. 9, 2025ರಂದು ಆಡಳಿತ ಮಂಡಳಿ ಅವಧಿ ಮುಗಿದಿದೆ. ಈಗ ಬಿನಯ್ ಅವರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ADVERTISEMENT

ಜಿಲ್ಲಾಧಿಕಾರಿ 1987ರ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ ಸೆಕ್ಷನ್ 3(1)ಬಿ ಅಡಿಯಲ್ಲಿ ದೂರು ದಾಖಲಿಸಿ ಮಾಗಡಿ ಪುರಸಭೆಯ ನಾಲ್ಕು ಸದಸ್ಯರನ್ನು ಅನರ್ಹಗೊಳಿಸಲಾಗಿದೆ ಎಂದು ಜ. 22ರಂದು ಆದೇಶ ಹೊರಡಿಸಿದ್ದಾರೆ.

ಅವಧಿ ಮುಗಿದು ಎರಡು ತಿಂಗಳ ನಂತರ ಅನರ್ಹ ಆದೇಶ ಹೊರಡಿಸಿರುವುದು ವಿಪ್ ಉಲ್ಲಂಘನೆ ಮಾಡಿದ್ದ ಸದಸ್ಯರಿಗೆ ಅನ್ವಯವಾಗದಿದ್ದರೂ ಕೂಡ ಅವರ ರಾಜಕೀಯ ಜೀವನದಲ್ಲಿ ಈ ಆದೇಶ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಯಾವಾಗ ಚುನಾವಣೆ ನಡೆಯಿತು: ‌ಸೆ.18, 2024 ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 23 ಸ್ಥಾನ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್‌ನ 12, ಕಾಂಗ್ರೆಸ್‌ನ 10 ಸದಸ್ಯರು ಹಾಗೂ ಬಿಜೆಪಿ ಒಂದು ಸ್ಥಾನ ಹೊಂದಿತ್ತು.

ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವಥ್ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನಿಂದ ರಮ್ಯಾ ನರಸಿಂಹಮೂರ್ತಿ ಉಪಾಧ್ಯಕ್ಷ ಸ್ಥಾನಕ್ಕೆ ರಿಯಾಜ್ ಅಹ್ಮದ್ ಸ್ಪರ್ಧೆ ಮಾಡಿದ್ದರು.

ಜೆಡಿಎಸ್‌ ಮತ ನೀಡುವಂತೆ ಅಂದಿನ ಜೆಡಿಎಸ್ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಎ. ಮಂಜುನಾಥ್ ವಿಪ್ ಜಾರಿ ಮಾಡಿದ್ದರು. ವಿಪ್ ಉಲ್ಲಂಘನೆ ಮಾಡಿ ನಾಲ್ಕು ಜೆಡಿಎಸ್ ಸದಸ್ಯರು ತಟಸ್ಥರಾಗಿ ಉಳಿದರು. ಕಾಂಗ್ರೆಸ್‌ 10 ಸದಸ್ಯರು ಹಾಗೂ ಶಾಸಕ ಬಾಲಕೃಷ್ಣರ ಮತ ಸೇರಿ ಹನ್ನೊಂದು ಮತ ಪಡೆಯುವ ಮೂಲಕ ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಪರಾಜಿತರಾಗಿದ್ದರು.

ಜಿಲ್ಲಾಧಿಕಾರಿ ನೀಡಿರುವ ಆದೇಶ ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಕಾಣುತ್ತಿದೆ. ಕಾನೂನು ತಜ್ಞರ ಮೊರೆ ಹೋಗಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಯಾವ ಶಿಕ್ಷೆಗೆ ಗುರಿಯಾಗುತ್ತಾರೆ ಎಂಬುದರ ಬಗ್ಗೆ ನಿರ್ಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ದೂರು ನೀಡಿದ ಪುರಸಭೆ ಮಾಜಿ ಸದಸ್ಯ ಎಂ.ಎನ್. ಮಂಜುನಾಥ್ ಪ್ರತಿಕ್ರಿಯೆ ನೀಡಿದರು.

ವೆಂಕಟರಾಮು
ಕೆ.ಕೆ.ಕಾಂತರಾಜು
ಹೇಮಾಲತಾ ನಾಗರಾಜು
ಕಳೆದ‌ಎರಡು ವರ್ಷ ಹಿಂದೆ ನಡರದ ಪುರಸಭೆಯ ಚುನಾವಣೆ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಮಾಡಿರುವುದು.
ಅನರ್ಹರಾಗಿರುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈಗ ಪುರಸಭೆ ಅವಧಿ ಮುಕ್ತಾಯವಾಗಿ ಆಡಳಿತ ಅಧಿಕಾರಿ ನೇಮಕವಾಗಿದೆ. ಆದೇಶ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ
ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ
ತಕ್ಕ ಪಾಠ ಕಲಿಸಿದ್ದಾರೆ
ಜೆಡಿಎಸ್‌ ಚಿಹ್ನೆಯಿಂದ ಗೆದ್ದಿದ್ದ ನಾಲ್ಕು ಪುರಸಭಾ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿಪ್ ಜಾರಿ ಮಾಡಲಾಗಿತ್ತು. ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದು ಪಕ್ಷ ವಿರೋಧಿ ಚಟುವಟಿಕೆ. ಜಿಲ್ಲಾಧಿಕಾರಿ ಅನರ್ಹ ಮಾಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಎ.ಮಂಜುನಾಥ್ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.