ADVERTISEMENT

ಮಾಗಡಿ | ‘ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತೆ’

ಶಾಸಕ ಬಾಲಕೃಷ್ಣ ಮಾಜಿ ಶಾಸಕ ಎ.ಮಂಜುನಾಥ್‌ಗೆ ಟಾಂಗ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 2:50 IST
Last Updated 25 ಆಗಸ್ಟ್ 2025, 2:50 IST
ಮಾಗಡಿ ತಾಲ್ಲೂಕಿನ ಮರುಳುದೇವನಪುರದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು
ಮಾಗಡಿ ತಾಲ್ಲೂಕಿನ ಮರುಳುದೇವನಪುರದಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು   

ಮಾಗಡಿ: ತಾಲ್ಲೂಕಿನ ಮರುಳುದೇವನಪುರ ಗ್ರಾಮದಲ್ಲಿ ಭಾನುವಾರ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ನೀರು ಘಟಕ ಹಾಗೂ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

‘ಮಾಗಡಿ ಕೋಟೆ ಅಭಿವೃದ್ಧಿಗೆ ₹103 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ಅದು ಪಾರಂಪಾರಿಕ ಅಭಿವೃದ್ಧಿ ತಾಣಗಳ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲಾಗಿದೆ ಎಂಬ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೇಳಿಕೆಗೆ ಶಾಸಕ ಬಾಲಕೃಷ್ಣ ಅವರು ಟೀಕೆಗಳು ಸಾಯುತ್ತವೆ. ಕೆಲಸ ಉಳಿಯುತ್ತದೆ’ ಎಂದು ಉತ್ತರಿಸಿದರು.

‌‘ವಿರೋಧ ಪಕ್ಷದವರು ಟೀಕೆ ಮಾಡಲಿ, ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಜನರೇ ಉತ್ತರ ಕೊಡುತ್ತಾರೆ. ₹2 ಕೋಟಿ ವೆಚ್ಚದಲ್ಲಿ ಪಟ್ಟಣದ ಎನ್‌ಇಎಸ್‌ ಸರ್ಕಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹಿನ್ನೆಲೆ ಮಾಜಿ ಶಾಸಕ ಇಟ್ಟಿರುವ ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಿ, 10 ಅಡಿ ಎತ್ತರದ ಗಾಂಧೀಜಿ ಪ್ರತಿಭೆಯನ್ನು ನಿರ್ಮಿಸಲಾಗುವುದು. ಇದಕ್ಕೆ ಮಾಜಿ ಶಾಸಕರ ಹೆಸರನ್ನು ಪ್ರತಿಮೆ ಕೆಳಗೆ ಹಾಕಿಸುತ್ತೇನೆ’ ಎಂದು ಟಾಂಗ್ ನೀಡಿದರು.

ADVERTISEMENT

‘ಎಲ್ಲಾ ಕಚೇರಿಗಳು ಒಂದೆಡೆ ಬರುತ್ತಿರುವುದರಿಂದ ಸಕಲ ಅಭಿವೃದ್ಧಿ ಮಾಡುತ್ತೇನೆ. ವಿರೋಧ ಪಕ್ಷದವರು ಟೀಕೆ ಮಾಡುತ್ತಲೇ ಇರಲಿ, ನಾನು ಅಭಿವೃದ್ಧಿ ಕೆಲಸ ಮಾಡುತ್ತೇನೆ’ ಎಂದರು.

‘ರಾಜ್ಯ ಸರ್ಕಾರ ಎಸ್ಐಟಿ ಮೂಲಕ ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕವನ್ನು ತೊಳೆಯಲಾಗುತ್ತಿದೆ. ಇದರಿಂದ ಧರ್ಮಾಧಿಕಾರಿಗಳು ಹಾಗೂ ಭಕ್ತರು ನಿರಾಳವಾಗಿದ್ದಾರೆ’ ಎಂದರು.

ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್, ನರಸಿಂಹಮೂರ್ತಿ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜೆ.ಪಿ.ಚಂದ್ರೇಗೌಡ, ಪುಟ್ಟಣ್ಣಯ್ಯ, ಶ್ರೀನಿವಾಸ್ ಮೂರ್ತಿ, ಚಿಕ್ಕನರಸಿಂಹಯ್ಯ, ಸುಶೀಲಾ, ಶ್ರೀಧರ್, ಚಿಕ್ಕರಾಮೇಗೌಡ, ಕಂಬೇಗೌಡ, ಪರಮೇಶ, ಬಾಲಯ್ಯ, ನಾಗರಾಜು, ರಾಜಣ್ಣ, ಲೋಕೇಶ್, ಚಕ್ರಬಾವಿ ಶ್ರೀಧರ್, ಕಿರಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.