ADVERTISEMENT

ಮಾಗಡಿ | ದುಃಸ್ಥಿತಿಯಲ್ಲಿ ಪ್ರೌಢಶಾಲಾ ಕಟ್ಟಡ

ದೊಡ್ಡಬಾಣಗೆರೆ ಮಾರಣ್ಣ
Published 8 ಅಕ್ಟೋಬರ್ 2023, 5:04 IST
Last Updated 8 ಅಕ್ಟೋಬರ್ 2023, 5:04 IST
ಮಾಗಡಿ ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಮೇಲ್ಚಾವಣಿ ಕಿತ್ತು ಬಂದಿರುವುದು
ಮಾಗಡಿ ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಮೇಲ್ಚಾವಣಿ ಕಿತ್ತು ಬಂದಿರುವುದು   

ಮಾಗಡಿ: ಕಿತ್ತು ಹೋಗಿರುವ, ಪಾಚಿಗಟ್ಟಿರುವ ಮೇಲ್ಚಾವಣಿ, ಆಗಾಗ ತೊಟ್ಟಿಕ್ಕುವ ನೀರು....

ಇದು ಮಾಗಡಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಕಟ್ಟಡದ ಸ್ಥಿತಿ. ಈ ಕಟ್ಟಡದಲ್ಲೇ ವಿದ್ಯಾರ್ಥಿಗಳು ಜೀವ ಹಿಡಿದು ಪಾಠ ಕೇಳುವ ಸ್ಥಿತಿ ಇದೆ. 

1948ರ ಆಗಸ್ಟ್ 26ರಂದು ಅಂದಿನ ಮೈಸೂರು ಸರ್ಕಾರದ ಸಚಿವ ಕೆ. ಚಂಗಲರಾಯರೆಡ್ಡಿ ಅವರಿಂದ ಈ ಶಾಲೆಗೆ ಶಂಕುಸ್ಥಾಪನೆ ಆಗಿತ್ತು. ಈ ಪ್ರೌಢಶಾಲೆಯಲ್ಲಿ ಪ್ರಸ್ತುತ 8ರಿಂದ 10ನೇ ತರಗತಿಯವರೆಗೆ 201 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕನ್ನಡ, ಆಂಗ್ಲ ಮಾಧ್ಯಮ, ಉರ್ದು, ಸಂಸ್ಕೃತ ವಿಭಾಗಗಳಿವೆ. ನುರಿತ ಶಿಕ್ಷಕರಿದ್ದಾರೆ. ಪ್ರಯೋಗಾಲಯವೂ ಇದೆ. ಆದರೆ ಶೌಚಾಲಯದ ಸ್ಥಿತಿ ಮಾತ್ರ ಅಧೋಗತಿ!

ADVERTISEMENT

ಮೇಲ್ಚಾವಣೆಯ ಗಾರೆ ಕಿತ್ತು ನೆಲಕ್ಕೆ ಉದುರುತ್ತಿದೆ. ಮಳೆಗಾಲದಲ್ಲಿ ನೀರು ಸೋರುತ್ತದೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ  ಕಟ್ಟಡ ಶಿಥಿಲವಾಗಿದೆ. ಸುಮಾರು 30 ವರ್ಷಗಳಿಂದಲೂ ಕಟ್ಟಡ ದುರಸ್ತಿಯಾಗಿಲ್ಲ. 

ಟೊಯೊಟಾ ಸಂಸ್ಥೆಯವರು ಶಾಲೆಗೆ ಡೆಸ್ಕ್‌ಗಳನ್ನು ನೀಡಿದ್ದಾರೆ. ಆದರೆ, ಇವುಗಳನ್ನು ಹಾಕಲು ಸ್ಥಳದ ಅಭಾವದಿಂದಾಗಿ ಡೆಸ್ಕ್‌ಗಳನ್ನು ಒಂದೆಡೆ ಜೋಡಿಸಿಡಲಾಗಿದೆ. ರೋಟರಿ ಮಾಗಡಿ ಸೆಂಟ್ರಲ್‌ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂಗಳನ್ನು ನೀಡಲಾಗಿದೆ

‘ಪ್ರೌಢಶಾಲೆಯ ಕಟ್ಟಡ ಕುಸಿಯುವ ಹಂತ ತಲುಪಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ’ ಎನ್ನುತ್ತಾರೆ ಪೋಷಕರು. 

‘ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಿಗೂ ಉಪಪ್ರಾಂಶುಪಾಲರಿಗೂ ಹೊಂದಾಣಿಕೆ ಇಲ್ಲದ ಕಾರಣ, ಶಾಲಾ ಕಟ್ಟಡದತ್ತ ಯಾರೂ ಗಮನಿಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ನಿವೃತ್ತರಾಗಿ ಒಂದು ವರ್ಷವಾಗಿದೆ. ಮತ್ತೊಬ್ಬ ಬಿಇಒ ಬಂದಿಲ್ಲದ ಕಾರಣ, ಶಿಕ್ಷಣ ಇಲಾಖೆ ದಿಕ್ಕು ತಪ್ಪಿದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

 ಪ್ರೌಢಶಾಲಾಕಟ್ಟಡದ ಗೋಡೆಯ ಹೊರಮೈ.
ಮಾಗಡಿಯ ಸರ್ಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಮೇಲ್ಚಾವಣಿ ಕುಸಿದು ಬೀಳುವುದನ್ನು ನೋಡುತ್ತಾ ಕಲಿಯುತ್ತಿರುವ ಮಕ್ಕಳು.
ಮಾಗಡಿಯ ಸರ್ಕಾರಿ ಪ್ರೌಢಶಾಲಾ ಕಟ್ಟಡದ ಮೇಲೆ ಪಾಚಿ ಕಟ್ಟಿರುವುದು
ಮಾಗಡಿ  ಸರ್ಕಾರಿ ಪ್ರೌಢಶಾಲೆಯ ಶೌಚಾಲಯದ ದುಃಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.