ADVERTISEMENT

ಮಾಗಡಿ: ಕುರಿ ವ್ಯಾಪಾರಕ್ಕೆ ದಳ್ಳಾಳಿಗಳ ಕಾಟ

ವಿಜಯದಶಮಿ: ಮಾಗಡಿ ಸಂತೆಯಲ್ಲಿ ಮೇಕೆ ವ್ಯಾಪಾರ ಬಲು ಜೋರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 13:45 IST
Last Updated 20 ಅಕ್ಟೋಬರ್ 2023, 13:45 IST
ಮಾಗಡಿ ಕುರಿಸಂತೆಯಲ್ಲಿ ಮೇಕೆ ಖರೀದಿ ಬಲು ಜೋರಾಗಿ ನಡೆಯುತ್ತಿದೆ
ಮಾಗಡಿ ಕುರಿಸಂತೆಯಲ್ಲಿ ಮೇಕೆ ಖರೀದಿ ಬಲು ಜೋರಾಗಿ ನಡೆಯುತ್ತಿದೆ   

ಮಾಗಡಿ: ಪಟ್ಟಣದ ಕೋಟೆ ಬಯಲಿನ ಸಂತೆಯಲ್ಲಿ ಶುಕ್ರವಾರ ಕುರಿ, ಟಗರು ಮತ್ತು ಮೇಕೆಗಳ ವ್ಯಾಪಾರ ಬಲು ಜೋರಾಗಿ ನಡೆಯುತ್ತಿದ್ದು, ದಳ್ಳಾಳಿಗಳ ಕಾಟದಿಂದ ಮಾರಾಟಗಾರರಿಗೆ ನಿರೀಕ್ಷಿತ ಲಾಭ ದೊರೆಯದಂತಾಗಿದೆ.

ವಿಜಯದಶಮಿ ಹಬ್ಬದಂದು ವಾಹನ, ಮತ್ತು ಕಾರ್ಖಾನೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಪ್ರಾಣಿ ಬಲಿ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಕುರಿ–ಮೇಕೆ ಸಾಕಣಿಕೆದಾರರು ಕೋಟೆ ಬಯಲಿನಲ್ಲಿ ಗುರುವಾರ ರಾತ್ರಿಯಿಂದಲೇ ಬೀಡು ಬಿಟ್ಟಿದ್ದಾರೆ.

ಶಿರಾ ಮತ್ತು ಬಯಲು ಸೀಮೆಯ ಸಾಕಣಿಕೆದಾರರು ಭರ್ಜರಿ ವ್ಯಾಪಾರ ನಡೆ‌ಸುತ್ತಿದ್ದಾರೆ. ಊರೂರು ಅಲೆಯುತ್ತಾ ಕುರಿ–ಮೇಕೆ ಸಾಕುವ ಕುರಿಗಾಹಿಗಳು ಮಾಂಸಕ್ಕೆ ಹದವಾದ ಕುರಿ, ಟಗರು, ಮೇಕೆಗಳನ್ನು ತಂದಿದ್ದು, ಗಾತ್ರದ ಮೇಲೆ ಮಾರಾಟ ಆಗುತ್ತಿದೆ.

ADVERTISEMENT

ಹಳೆ ಮೈಸೂರು ಭಾಗದ ಮಂಡ್ಯ, ಮೈಸೂರು, ರಾಮನಗರ , ಹಾಸನ, ತಮಿಳುನಾಡಿನ ಡೆಂಕಣಿಕೋಟೆ, ಬೆಂಗಳೂರು ನಗರದ ಮಾಂಸದ ಅಂಗಡಿ ಮಾಲೀಕರು ಆಗಮಿಸಿದ್ದಾರೆ.

ಆದರೆ ದಳ್ಳಾಳಿ ಕಾಟದಿಂದ ಸಾಕಣಿಕೆದಾರರಿಗೆ ಲಾಭ ಹಾಗೂ ಗ್ರಾಹಕರಿಗೆ ಸರಿಯಾದ ಬೆಲೆಯಲ್ಲಿ ಕುರಿಗಳು ಸಿಗುತ್ತಿಲ್ಲ. ಕುರಿಮೇಕೆ ಮಾರಾಟಗಾರರಿಗೆ ಮುಂಗಡ ಹಣ ನೀಡಿ ನೂರಾರು ಕುರಿ–ಮೇಕೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಚಳಿ, ಗಾಳಿ, ಮಳೆ ಮತ್ತು ಬಿಸಿಲು ಎನ್ನದೆ ಕುರಿ–ಮೇಕೆ ಹಿಂಡಿನೊಡನೆ ಅಲೆದು ಶ್ರಮಪಟ್ಟ ಕುರಿಗಾಯಿಗಳಿಂದ ಕನಿಷ್ಠ ಬೆಲೆಗೆ ಕುರಿ ಖರೀದಿಸಿ, ಬೆಂಗಳೂರು, ಹೊಸೂರು, ಮಂಡ್ಯ ಸುತ್ತಲಿನ ಜಿಲ್ಲೆಗಳ ಮಾರಾಟಗಾರರಿಗೆ ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭಗಳಿಸುತ್ತಾರೆ. ಇದರಿಂದ ಸಾಕಣಿಕೆದಾರರಿಗೆ ನಿರೀಕ್ಷಿತ ಲಾಭ ಸಿಗದೆ ಬೇಸರಗೊಂಡಿದ್ದಾರೆ.

ಕುರಿ–ಮೇಕೆಗಳನ್ನು ತೂಕ ಮಾಡದೆ‌, ಕುರಿಮರಿ ಸೊಂಟ ಹಿಡಿದು ಅಲ್ಲಾಡಿಸಿ, ಬೆಲೆ ನಿಗದಿ ಮಾಡಲಾಗುತ್ತಿದೆ. 20 ಕೆ.ಜಿ ತೂಕದ ಕುರಿಗಳನ್ನು ₹6 ರಿಂದ 7 ಸಾವಿರ ನೀಡಿ ಖರೀದಿಸಿ, ಅದನ್ನು ಮಾಂಸದಂಗಡು ಮಾಲೀಕರಿಗೆ ₹10 ರಿಂದ 12 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಸಾಕಣಿಕೆದಾರರ ಶ್ರಮವನ್ನು ದಳ್ಳಾಳಿಗಳು ಮಾತಿನ ಬಂಡವಾಳದ ಲಾಭ ಗಳಿಸುತ್ತಿದ್ದಾರೆ.

ಮಾಗಡಿ ಕುರಿಸಂತೆಯಲ್ಲಿ ಸೇರಿದ್ದ ಕುರಿಗಾರರು ಮತ್ತು ಖರೀದಿದಾರರು
ಮಾಗಡಿ ಸಂತೆಯಲ್ಲಿ ಮಚ್ಚು ಕುಡುಗೋಲು ಮಾರಾಟ

ಕುರಿ ಸಾಕಣಿಕೆ ಕುಲಕಸುಬು. ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳನ್ನು ತೂಕ ಮಾಡಿ ಮಾರಾಟ ಮಾಡಲಾಗುತ್ತಿದೆ. ಸಂತೆಯಲ್ಲಿ ಕುರಿ–ಮೇಕೆಯನ್ನು ತೂಕ ಹಾಕಿ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು

-ಜಯಣ್ಣ ಕಲ್ಯಾಗೊಲ್ಲರ ಹಟ್ಟಿ

ಕುರಿಮೇಕೆ ಸಾಕುವವರ ಸಂಘ ನಾಮಕಾವಸ್ತೆಗೆ ಇದೆ. ಸಂಘದಲ್ಲಿ ಕುರಿಮೇಕೆ ಸಾಕುವವರಿಲ್ಲದೆ ಪುಡಾರಿಗಳೆ ತುಂಬಿದ್ದು ಕುರಿಗಾರರ ಹಿತರಕ್ಷಣೆಗೆ ಗಮನಿಸುತ್ತಿಲ್ಲ

-ಲಿಂಗೇಗೌಡ ತಿಗಳರಪಾಳ್ಯ

ಮಾರಾಟಕ್ಕೆ ತರುವ ಕುರಿಮೇಕೆ ಸಾಕುವವರಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಿ ದಳ್ಳಾಳಿಗಳ ವಂಚನೆ ತಪ್ಪಿಸಬೇಕು

-ಪೂಜಾರಿ ಚಿತ್ತಯ್ಯ ಕುರಿಗಾರ ತಟವಾಳ್ ದಾಖಲೆಕಾಡುಗೊಲ್ಲರ ಹಟ್ಟಿ

ಅಧಿಕ ಸುಂಕ: ಸೌಕರ್ಯದ ಕೊರತೆ

ಸಂತೆಯಲ್ಲಿ ಕುಡಿಯುವ ನೀರು ಶೌಚಾಲಯ ಹೋಟೆಲ್ ಸೇರಿದಂತೆ ಇನ್ನಿತರ ಮೂಲ ‌ಸೌಕರ್ಯವಿಲ್ಲದೆ ಮಾರಾಟಗಾರರು ಮತ್ತು ಗ್ರಾಹಕರಿಗೆ ಪರದಾಡುವಂತಾಗಿದೆ. ದಳ್ಳಾಳಿಗಳು ಅತಿ ಹೆಚ್ಚು ಸುಂಕ ವಸೂಲಿ ಮಾಡುತ್ತಿದ್ದಾರೆ. ಆದರೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಕುರಿಗಾಹಿಗಳು ದೂರಿದರು. ಈ ಬಗ್ಗೆ ಪುರಸಭೆ ಅಧಿಕಾರಿಗಳ ಸಹ ಇತ್ತ ಗಮನಿಸುತ್ತಿಲ್ಲ. ಸಂತೆಗೆ ಬರುವ ಲಕ್ಷಾಂತರ ವಾಹನಗಳನ್ನು ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಂಕ ವಸೂಲಿ ಅನಧಿಕೃತ ಸಂತೆ ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಕೋಟೆ ಬಯಲಿನಲ್ಲಿ ಸಂತೆ ನಡೆಯುತ್ತಿದೆ. ಆದರೂ ಅನಧಿಕೃತವಾಗಿ ಕುರಿಗಾರರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ತಿಳಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.