ಮಾಗಡಿ: ಪಟ್ಟಣದ ಘನ ತ್ಯಾಜ್ಯ ಘಟಕ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕಸಕ್ಕೆ ಬೆಂಕಿ ಹಚ್ಚುತ್ತಿದ್ದು, ಕೆಲ ವಾರ್ಡ್ ನಿವಾಸಿಗಳಿಗೆ ಕೆಟ್ಟ ವಾಸನೆ ಬರುತ್ತಿದ್ದು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಿರುಮಲೆ ರಂಗನಾಥ ಸ್ವಾಮಿ ದೇವಾಲಯದ ಆವರಣದ ಪಕ್ಕದಲ್ಲಿ ಆರು ಎಕರೆ ವಿಸ್ತೀರ್ಣದಲ್ಲಿದೆ ಘನ ತ್ಯಾಜ್ಯ ಘಟಕ. ಇದು 2000ರಲ್ಲಿ ಉದ್ಘಾಟನೆಯಾಗಿದ್ದು, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಕಸವನ್ನು ಇಲ್ಲಿ ಸುರಿಯಲಾಗುತ್ತಿದೆ. ಆದರೆ ಈ ಘಟಕಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ತ್ಯಾಜ್ಯ ಸಂಸ್ಕರಣೆ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಇದರಿಂದ 25 ವರ್ಷಗಳಿಂದ ತ್ಯಾಜ್ಯ ಘಟಕಕ್ಕೆ ಬರುವ ಕಸವನ್ನು ಪುರಸಭೆಯ ಪೌರ ಕಾರ್ಮಿಕ ಸಿಬ್ಬಂದಿ ಬೆಂಕಿ ಇಡುವ ಮೂಲಕ ಕಸದ ರಾಶಿಯ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಹೀಗೆ ಕಸಕ್ಕೆ ಬೆಂಕಿ ಹಚ್ಚಿದಾಗ ಮಾಗಡಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಹೊಗೆಯಿಂದ ಆವೃತ್ತರಾಗಿ ಜನರು ಕೆಟ್ಟ ವಾಸನೆ ಹಾಗೂ ಕ್ಯಾನ್ಸರ್ ಹರಡುವ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.
ಇಲ್ಲಿ ಆಗುತ್ತಿರುವ ವಾಯಮಾಲಿನ್ಯವನ್ನು ತಪ್ಪಿಸಬೇಕೆಂದು 2024ರ ಮೇ ತಿಂಗಳಲ್ಲಿ ನಿಸರ್ಗ ಪರಿಚರಣ ಟ್ರಸ್ಟ್ ವತಿಯಿಂದ ಹೋರಾಟ ಮಾಡಲಾಗಿತ್ತು. ಅನಂತರ ಪೌರಕಾರ್ಮಿಕರು ಒಮ್ಮೆಗೆ ಕಸಕ್ಕೆ ಬೆಂಕಿ ಇಡದೆ ನಿಯಂತ್ರಿತವಾಗಿ ಬೆಂಕಿ ಹಚ್ಚುವ ಮೂಲಕ ಹೆಚ್ಚಿನ ಹೊಗೆ ಹೊರ ಹೊಮ್ಮದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ ವಾಯುಮಾಲಿನ್ಯ, ಜಲ ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜತೆಗೆ ಟ್ರಸ್ಟ್ ಘನ ತ್ಯಾಜ್ಯ ಘಟಕವನ್ನು ಜನವಸತಿ ಪ್ರದೇಶದಿಂದ ಸುಮಾರು 5 ಕಿ.ಮೀ ದೂರಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ 2024 ರ ಜುಲೈ ಅಲ್ಲಿ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆ ವೇಳೆ ಮಾಗಡಿ ಪುರಸಭೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ಆದಷ್ಟು ಬೇಗನೆ ಸೂಕ್ತ ಜಾಗ ಗುರುತಿಸಿ ಘನ ತ್ಯಾಜ್ಯ ಘಟಕ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಈ ಘಟಕದ ಹೊಗೆ, ತ್ಯಾಜ್ಯವು ಕಣ್ವ ನದಿ ಜಲಮೂಲವನ್ನು ಕಲುಷಿತಗೊಳಿಸುತ್ತಿದೆ. ತ್ಯಾಜ್ಯ ಘಟಕದ ಸಮೀಪದಲ್ಲಿರುವ ಅನೇಕ ಮಮೆಗಳ ಕುಟುಂಬಸ್ಥರು ಕ್ಯಾನ್ಸರ್ ಹಾಗೂ ಇತರೆ ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದಾರೆ. ಹಾಗಾಗಿ ಘಟಕವನ್ನು ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಹಸಿರು ನ್ಯಾಯಾಧೀಕರಣದ ಮೊರೆ ಹೋಗಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಸ್ಥಳ ನಿಗದಿಯಾದ ಕೂಡಲೇ ಸ್ಥಳಾಂತರ
ಮಾಗಡಿ ಪಟ್ಟಣದ ತಿರುಮಲೆಯಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ ಪರಿಸರದ ಮೇಲೆ ವ್ಯತಿರಿತ್ಯ ಪರಿಣಾಮ ಬೀರುತ್ತಿದೆ ಎಂಬ ದೂರುಗಳಿದ್ದು ಇದನ್ನು ಸ್ಥಳಾಂತರಿಸಲು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸ್ಥಳ ಗುರುತಿಸಲಾಗುತ್ತಿದೆ ಸ್ಥಳ ನಿಗದಿಯಾದ ಕೂಡಲೇ ತ್ಯಾಜ್ಯ ಘಟಕ ಸ್ಥಳಾಂತರಿಸಲಾಗುವುದು.
–ಎಚ್.ಸಿ.ಬಾಲಕೃಷ್ಣ ಶಾಸಕ ಮಾಗಡಿ
ತಾಂತ್ರಿಕ ಸಮಸ್ಯೆಯಿಂದ ವಿಳಂಬ
ಪುರಸಭೆ ವ್ಯಾಪ್ತಿಯ ತಿರುಮಲೆಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ಕಿಡಿಗೇಡಿಗಳು ಆಗಾಗ ಬೆಂಕಿ ಹಚ್ಚುವುದರಿಂದ ಈ ಭಾಗದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಸಂಬಂಧ ಸುಮಾರು 3 ಕಿ.ಮೀ ದೂರಕ್ಕೆ ಸ್ಥಳಾಂತರಿಸಲು ಆಡಳಿತ ಮಂಡಲಿಯೊಂದಿಗೆ ಚರ್ಚಿಸಿದ್ದು ಸ್ಥಳ ಗುರುತಿಸಲಾಗಿತ್ತು. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರದಲ್ಲಿಯೇ ಸ್ಥಳ ಗುರುತಿಸಲು ಶಾಸಕರು ಸೂಚನೆ ನೀಡಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು.
–ಶಿವರುದ್ರಯ್ಯ. ಪುರಸಭೆ ಮುಖ್ಯಾಧಿಕಾರಿ
ದಟ್ಟ ಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆ
ಪುರಸಭೆ ಕೂಡಲೇ ಕಸ ವಿಲೇವರಿ ಘಟಕವನ್ನು ಪಟ್ಟಣದಿಂದ ದೂರದ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಕಸಕ್ಕೆ ಬೆಂಕಿ ಹಚ್ಚುತ್ತಿರುವುರಿಂದ ಮನೆಯಲ್ಲಿ ವಾಸ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಬೆಂಕಿ ಹಚ್ಚುವುದಿಂದ ದೊಡ್ಡ ಹೊಗೆ ಬರುತ್ತಿದ್ದು ಉಸಿರಾಟದ ಸಮಸ್ಯೆಯಾಗುತ್ತಿದೆ. ಜತೆಗೆ ಕ್ಯಾನ್ಸರ್ ಕಾಯಿಲೆ ಬರುವ ಆತಂಕ ಇದೆ.
–ಕರಡಿ ನಾಗರಾಜು ಎನ್ಇಎಸ್ ನಿವಾಸಿ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.