ರಾಮನಗರ: ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಹಾಗೂ ಕೊಂಡೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ನೆರೆದಿದ್ದ ಭಕ್ತ ಸಮೂಹದ ‘ಜೈ ಬನ್ನಿ ಮಹಾಂಕಾಳಿ’, ‘ಗೋವಿಂದ ಗೋವಿಂದ’ ಎಂಬ ನಾಮಸ್ಮರಣೆಯ ಘೋಷಣೆಯೊಂದಿಗೆ ಕರಗಧಾರಕ ಆರ್.ಎನ್. ಯೋಗೇಶ್ ಅವರು ಅಗ್ನಿಕೊಂಡ ಹಾಯ್ದರು.
ಕರಗ ಪ್ರಯುಕ್ತ ದೇವಾಲಯ ಹಾಗೂ ಇಡೀ ಬೀದಿಯನ್ನು ವಿದ್ಯುದ್ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ರಾತ್ರಿ 11 ಗಂಟೆಗೆ ಸುಮಾರಿಗೆ ದೇವಾಲಯದಿಂದ ಹೊರಟ ಕರಗವು ತಿಗಳರ ಬೀದಿ, ರಾಘವೇಂದ್ರ ಕಾಲೊನಿ, ಛತ್ರದ ಬೀದಿ, ಅಗ್ರಹಾರ, ಕಾಯಿಸೊಪ್ಪಿನಬೀದಿ, ಐಜೂರು, ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳಾರತಿ ಸ್ವೀಕರಿಸಿತು.
ಗಾಂಧಿನಗರ, ಪೋಲೀಸ್ ಕ್ವಾಟ್ರಸ್, ಹಳೆ ಬಿ.ಎಂ. ರಸ್ತೆ, ಅರ್ಕೇಶ್ವರ ಕಾಲೊನಿ, ನೇರಳೆಕೇರಿ, ಡಾ. ಬಿ.ಆರ್. ಅಂಬೇಡ್ಕರ್ ಕಾಲೊನಿ, ಶೆಟ್ಟಹಳ್ಳಿಬೀದಿ, ಎಂ.ಜಿ. ರಸ್ತೆ, ಟ್ರೂಪ್‌ಲೈನ್, ಬಾಲಗೇರಿ ಸೇರಿದಂತೆ ವಿವಿಧೆಡೆ ರಾತ್ರಿಯಿಂದ ಬೆಳಗ್ಗಿನವರೆಗೆ ಸಂಚರಿಸಿತು. ಭಕ್ತರು ಕರಗ ಸಾಗುವ ಮಾರ್ಗದಲ್ಲಿ ಪುಷ್ಪಾಲಂಕಾರ ಮಾಡಿ ಸ್ವಾಗತಿಸಿದರು. ಬುಧವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಅಗ್ನಿಕೊಂಡ ಪ್ರವೇಶಿತು. ಸಾವಿರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು.
ಸಂಸದ ಡಾ. ಸಿ.ಎನ್. ಮಂಜುನಾಥ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಸೇರಿದಂತೆ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೊಂಡೋತ್ಸವದ ನಂತರ ಕರಗದ ಬೀದಿ ಮತ್ತು ಮುಖ್ಯರಸ್ತೆಗಳಲ್ಲಿ ಭಕ್ತರು ಪ್ರಸಾದ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.