ADVERTISEMENT

ಸಾಮಾಜಿಕ ಕಾರ್ಯ| 116 ಬಾರಿ ರಕ್ತದಾನ ಮಾಡಿದ ಪ್ರಗತಿಪರ ಕೃಷಿಕ

ಇಂದು ವಿಶ್ವ ರಕ್ತದಾನಿಗಳ ದಿನ; ತಂದೆಯ ಸಮಾಜಸೇವೆಗೆ ಮೂವರು ಮಕ್ಕಳ ಸಾಥ್‌

ಆರ್.ಜಿತೇಂದ್ರ
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
ಶಿಬಿರವೊಂದರಲ್ಲಿ ಪುತ್ರರೊಂದಿಗೆ ರಕ್ತದಾನ ಮಾಡಿದ ಕಾಂತರಾಜ ಪಟೇಲ್‌
ಶಿಬಿರವೊಂದರಲ್ಲಿ ಪುತ್ರರೊಂದಿಗೆ ರಕ್ತದಾನ ಮಾಡಿದ ಕಾಂತರಾಜ ಪಟೇಲ್‌   

ರಾಮನಗರ: ರಕ್ತದಾನವು ಜೀವಗಳನ್ನು ಉಳಿಸುವ ಮಹಾದಾನವಾಗಿದೆ. ಇಲ್ಲೊಂದು ಕುಟುಂಬವೇ ಈ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾಗಿದೆ.

ರಾಮನಗರದವರಾದ ಎಸ್‌.ಟಿ. ಕಾಂತರಾಜ ಪಟೇಲ್‌ ಮತ್ತವರ ಮೂವರು ಮಕ್ಕಳು ರಕ್ತದಾನಿಗಳಾಗಿ ಹೊರಹೊಮ್ಮಿದ್ದು, ತುರ್ತು ಸಂದರ್ಭಗಳಲ್ಲಿ ನೊಂದವರಿಗೆ ನೆರವಾಗುತ್ತ ಬಂದಿದ್ದಾರೆ. ಮಾತ್ರವಲ್ಲ, ತಮ್ಮಂತೆಯೇ ಇತರ ರಕ್ತದಾನಿಗಳ ಜೊತೆ ಸಂಪರ್ಕ ಹೊಂದಿದ್ದು, ಅಗತ್ಯ ಸಂದರ್ಭಗಳಲ್ಲಿ ನಾನಾ ರೋಗಿಗಳಿಗೆ ನೆರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ. ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಕ್ತದ ಅಗತ್ಯ ಇರುವ ಜಿಲ್ಲೆ–ಹೊರಜಿಲ್ಲೆಯ ರೋಗಿಗಳು, ಸಂಬಂಧಿಕರು ಇವರನ್ನು ಸಂಪರ್ಕಿಸುತ್ತಲೇ ಇರುತ್ತಾರೆ.

ಕಾಂತರಾಜ ಪಟೇಲ್‌ ರಾಮನಗರ ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರು. ಅದಕ್ಕಿಂತ ಹೆಚ್ಚಾಗಿ ಅವರೊಬ್ಬ ಪ್ರಗತಿಪರ ಕೃಷಿಕ. ಈವರೆಗೆ ಬರೋಬ್ಬರಿ 116 ಬಾರಿ ರಕ್ತದಾನ ಮಾಡಿದ ಶ್ರೇಯ ಅವರದ್ದು. ಅವರೊಂದಿಗೆ ಹಿರಿಯ ಪುತ್ರನಾದ ಹೈಕೋರ್ಟ್‌ ವಕೀಲ ರಾಜೇಂದ್ರ ಪಟೇಲ್ ಹಾಗೂ ಕಿರಿಯ ಪುತ್ರರಾದ ರಾಹುಲ್‌ ಪಟೇಲ್‌ ಮತ್ತು ಸಾಗರ್‌ ಪಟೇಲ್ ಸಹ ರಕ್ತದಾನ ಮಾಡುತ್ತಿದ್ದಾರೆ.

ADVERTISEMENT

ಆದರೆ ರಕ್ತದಾನ ಮಾಡಲು ಸರ್ಕಾರ ಈಚೆಗೆ ವಿಧಿಸಿರುವ ನಿಯಮಗಳು ದಾನಿಗಳಿಗೆ ತೊಂದರೆ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಜೊತೆಗೆ ರಾಮನಗರದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್‌ ಬಾಗಿಲು ಮುಚ್ಚಿರುವುದೂ ರಕ್ತದಾನಿಗಳಿಗೆ ತೊಂದರೆ ಆಗಿದೆ. ರಕ್ತ ನೀಡಲು ಬೆಂಗಳೂರಿಗೇ ಹೋಗಿ ಬರಬೇಕಾಗುತ್ತದೆ. ಇಲ್ಲವೇ ಖಾಸಗಿ ಕೇಂದ್ರಗಳಿಗೆ ನೀಡಬೇಕಾಗುತ್ತದೆ. ಇದರಂದಾಗಿ ಈಚೆಗೆ ರಕ್ತದಾನ ಕಡಿಮೆ ಮಾಡಿದ್ದೇನೆ ಎನ್ನುತ್ತಾರೆ ಅವರು.

ಈಗ ಆಸ್ಪತ್ರೆಗಳಲ್ಲಿ ರಕ್ತದಾನ ಮಾಡಬೇಕೆಂದರೆ ವೈದ್ಯರಿಂದ ಶಿಫಾರಸು ತರಬೇಕಾಗುತ್ತದೆ. ಬ್ಲಡ್‌ ಬ್ಯಾಂಕ್‌ಗಳ ಮೂಲಕವೇ ವ್ಯವಹರಿಸಬೇಕಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸಾಕಷ್ಟು ಮಂದಿ ರಕ್ತ ನೀಡುವುದಕ್ಕೆ ತೊಂದರೆ ಆಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಅವರ ಸಲಹೆ.

ಕಣ್ಣು ತೆರೆಸಿದ ಅಪಘಾತ
‘1977ರಲ್ಲಿ ನಾನು ಕನಕಪುರ ರೂರಲ್‌ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ ರಸ್ತೆ ಅಪಘಾತದಲ್ಲಿ ಬಾಲಕಿಯೊಬ್ಬಳಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಿದೆವು. ಆಗ ಅಕಸ್ಮಾತಾಗಿ ರಕ್ತ ಕೊಡಬೇಕಾಯಿತು. ಇದು ರಕ್ತದಾನದ ಮಹತ್ವದ ಕುರಿತು ನನ್ನ ಕಣ್ಣು ತೆರೆಸಿತು’ ಎನ್ನುತ್ತಾರೆ ಪಟೇಲ್‌.

ಅವರ ಅನುಭವಕ್ಕೆ ಬಂದ ಮತ್ತೊಂದು ಘಟನೆಯೂ ಇದೆ. 1990ರಲ್ಲಿ ಸ್ವತಃ ಪಟೇಲ್‌ ಅಪಘಾತಕ್ಕೆ ಒಳಗಾಗಿ ಗಾಯಗೊಂಡರು. ಆಗ ಅವರಿಗೆ 6 ಬಾಟಲ್‌ನಷ್ಟು ರಕ್ತ ಬೇಕಾಯಿತು. ರಕ್ತ ಕೊಡಲು ನೂರಾರು ಮಂದಿ ಮುಂದೆ ಬಂದರು. ಆದರೂ ವೈದ್ಯರು 5 ಬಾಟಲ್‌ನನ್ನು ರಕ್ತ ಮಾತ್ರ ತೆಗೆದುಕೊಂಡರು.

‘ರಕ್ತದಾನಿಗಳು ಸಾಕಷ್ಟಿದ್ದು, ಅವರಿಗೆ ರೋಗಿಗಳ ಜೊತೆ ಸಂಪರ್ಕ ಸಿಗಬೇಕು ಎನ್ನುವ ಅಂಶವೂ ಆಗ ಅರಿವಿಗೆ ಬಂತು. ಅಂದಿನಿಂದ ಈ ಕಾರ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಾ ಬಂದಿದ್ದೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.