ADVERTISEMENT

‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:22 IST
Last Updated 4 ಮಾರ್ಚ್ 2026, 4:22 IST
ಮಾಗಡಿ ಮಂಜುನಾಥ ಬಡಾವಣೆಯಲ್ಲಿ ಕನ್ನಡ ಪ್ರಸ್ತುತ ಪ್ರಾಧಿಕಾರದಿಂದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ನಡೆಯಿತು
ಮಾಗಡಿ ಮಂಜುನಾಥ ಬಡಾವಣೆಯಲ್ಲಿ ಕನ್ನಡ ಪ್ರಸ್ತುತ ಪ್ರಾಧಿಕಾರದಿಂದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭ ನಡೆಯಿತು   

ಮಾಗಡಿ: ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದರೆ ಮನಸ್ಸಿಗೆ ಬೇಸರವಾದಾಗ ಪುಸ್ತಕಗಳು ಸ್ನೇಹಿತರಾಗಿ ಬದುಕಲು ಸ್ಫೂರ್ತಿ ನೀಡುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹೇಳಿದರು.

ಪಟ್ಟಣದ ಮಂಜುನಾಥ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ ಅವರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ಸಹಯೋಗದೊಂದಿಗೆ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭದಲ್ಲಿ ಮಾತನಾಡಿದರು.

ಖಿನ್ನತೆಯಲ್ಲಿರುವ ವ್ಯಕ್ತಿಗಳಿಗೆ ಪುಸ್ತಕ ಸ್ನೇಹಿತರಾಗುತ್ತಾರೆ. ಮನೆಗೊಂದು ಗ್ರಂಥಾಲಯ ಮೂಲಕ ಲಕ್ಷ ಮನೆ ತಲುಪುವ ಕೆಲಸವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮಾಡುತ್ತಿದ್ದು, ಪ್ರಾಧಿಕಾರದ ಕಚೇರಿಯಿಂದ ಮನೆ ಬಾಗಿಲಿಗೆ ಬರುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡುತ್ತಿದೆ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಎಚ್.ಎಲ್.ಪುಷ್ಪ ಮಾತನಾಡಿ, ಪುಸ್ತಕ ಓದುವುದು ಸಾಹಿತಿಗಳಿಗೆ, ಲೇಖಕರಿಗೆ, ನಗರ ಪ್ರದೇಶದವರಿಗೆ ಎಂಬ ಕಲ್ಪನೆ ಹೋಗಲಾಡಿಸಬೇಕು. ಗ್ರಾಮೀಣ ಭಾಗಕ್ಕೂ ಈ ಉದ್ದೇಶ ತಲುಪುವ ಕೆಲಸ ಆಗಬೇಕು. ಯಾವುದೇ ಸಭೆ, ಸಮಾರಂಭದಲ್ಲಿ ಉಡುಗೊರೆ ಕೊಡುವುದಾದರೆ ಉತ್ತಮ ಪುಸ್ತಕಗಳನ್ನು ಕೊಡುವ ಮೂಲಕ ಮಕ್ಕಳಲ್ಲಿ ಪುಸ್ತಕ ತಿರುವಿ ಹಾಕುವ ಆಸಕ್ತಿಯನ್ನು ಬೆಳೆಸಬೇಕಿದೆ ಎಂದರು.

ಕಲ್ಪನಾ ಶಿವಣ್ಣ ಮಾತನಾಡಿ, ಜ್ಞಾನ ಎಂಬ ಹಸಿವನ್ನು ನೀಗಿಸುವುದೇ ಪುಸ್ತಕವಾಗಿದ್ದು. ರಾಜಕೀಯ ಭಾಷಣಗಳಿಗೆ ಉತ್ತಮ ಲೇಖಕರ ತುಣುಕುಗಳು ಸಹಕಾರಿ. ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗುವುದು ಎಂದರು.

ಜಿಲ್ಲಾ ಜಾಗೃತಿ ಸಮಿತಿ ಅಧ್ಯಕ್ಷ ಕವಿತಾ ರಾವ್ ಮಾತನಾಡಿ, ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್ ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳಲು ಅವರ ಜೊತೆ ಪ್ರತಿನಿತ್ಯವೂ ಒಂದು ಪುಸ್ತಕವಾದರೂ ಇರುತ್ತಿದ್ದುದ್ದು ಕಾರಣ. 32 ಪದವಿ, ಪಿಎಚ್‌ಡಿ ಪಡೆದಿರುವ ಅಂಬೇಡ್ಕರ್ ಎಷ್ಟು ಪುಸ್ತಕಗಳನ್ನು ಓದಿರಬೇಕು. ಅವರು 50,000 ಪುಸ್ತಕಗಳನ್ನು ಸಂಗ್ರಹಿಸಿದ್ದರು. ಅವರು ಅಷ್ಟು ಪುಸ್ತಕ ಓದಿದ ಪರಿಣಾಮ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಲಕ್ಷ ಗ್ರಂಥಾಲಯಗಳ ಯೋಜನೆ ರೂಪೇಶ್‌ಗಳ ಬಗ್ಗೆ ಕರಪತ್ರ ಬಿಡುಗಡೆ ಮಾಡಲಾಯಿತು. ನಿವೃತ್ತ ವಾಯುಸೇನೆ ಅಧಿಕಾರಿ ಶಿವಲಿಂಗಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಆಪ್ತ ಸಹಾಯಕ ಶ್ರೀನಿವಾಸ ಕರಿಯಪ್ಪ, ಜಾಗೃತ ಸಮಿತಿ ಸದಸ್ಯ ಎಸ್. ರುದ್ರೇಶ್ವರ, ಮುಖಂಡರಾದ ಡಿ.ಸಿ.ಶಿವಣ್ಣ, ಬಸವರಾಜು, ಶಿಕ್ಷಕ ವಿದ್ಯಾಸಾಗರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.