
ರಾಮನಗರ ತಾಲ್ಲೂಕಿನ ಪೇಟೆ ಕುರುಬರಹಳ್ಳಿಯ ಪ್ರಾಣೇಶ್ ಅವರ ಮಾವಿನತೋಟದಲ್ಲಿ ತೋಟಗಾರಿಕೆ ಇಲಾಖೆಯು ಹಮ್ಮಿಕೊಂಡಿದ್ದ ಮಾವು ಬೆಳೆ ಸಂರಕ್ಷಣೆ ಮುನ್ನೆಚ್ಚರಿಕೆ ಕ್ರಮಗಳ ತರಬೇತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ರಾಮನಗರ: ‘ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಇದ್ದರೂ ಬೆಲೆ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ, ಬೆಲೆ ಕೊರತೆ ಪಾವತಿ ಯೋಜನೆಯಡಿ (ಪಿಡಿಪಿಎಸ್) ಬೆಳೆಗಾರರಿಗೆ ಬೆಂಬಲ ಬೆಲೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ ಡಾ. ಬಿ.ಸಿ. ಮುದ್ದು ಗಂಗಾಧರ್ ಭರವಸೆ ನೀಡಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಬೆಂಗಳೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ತಾಲ್ಲೂಕಿನ ಪೇಟೆ ಕುರುಬರಹಳ್ಳಿ ಪ್ರಾಣೇಶ್ ಅವರ ಮಾವಿನತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳೆ ಸಂರಕ್ಷಣೆ ಮುನ್ನೆಚ್ಚರಿಕೆ ಕ್ರಮಗಳ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣವು ಪ್ರಮುಖವಾದುದು. ಇಲ್ಲಿನ ಮಾವುಗಳೇ ಮೊದಲಿಗೆ ಮಾರುಕಟ್ಟೆ ಪ್ರವೇಶಿಸುತ್ತವೆ. ಅದಕ್ಕೆ ಪೂರಕವಾಗಿ ಮಾವಿಗೆ ಸ್ಥಳೀಯವಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.
ಅನುದಾನ ಇಳಿಕೆ: ‘ಜಗತ್ತನೇ ಕಾಡಿದ ಸಾಂಕ್ರಾಮಿಕ ರೋಗ ಕೋವಿಡ್ ಬಳಿಕ ಸರ್ಕಾರವು ಎಲ್ಲಾ ಮಂಡಳಿ ಹಾಗೂ ನಿಗಮಗಳ ಅನುದಾನವನ್ನು ಗಣನೀಯವಾಗಿ ಇಳಿಕೆ ಮಾಡಿದೆ. ಮುಂಚೆ ನಮ್ಮ ನಿಗಮಕ್ಕೆ ₹10 ಕೋಟಿ ಇದ್ದ ಅನುದಾನ ಇದೀಗ ₹50 ಲಕ್ಷಕ್ಕೆ ಬಂದು ನಿಂತಿದೆ. ಮುಂದಿನ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ’ ಎಂದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಹಾಗೂ ತೋಟಗಾರಿಕೆ ತಜ್ಞ ಡಾ. ಎಸ್.ವಿ. ಹಿತ್ತಲಮನಿ ಮಾತನಾಡಿ, ‘ಬೆಳೆಗಾರರರು ಕೆವಿಕೆ ಶಿಫಾರಸು ಮಾಡುವ ಔಷಧಗಳನ್ನು ಮಾತ್ರ ಬೆಳೆಗೆ ಸಿಂಪಡಿಸಬೇಕು. ತೋಟವನ್ನು ಸ್ವಚ್ಛವಾಗಿಟ್ಟುಕೊಂಡು ಚನ್ನಾಗಿ ನಿರ್ವಹಣೆ ಮಾಡಬೇಕು. ಆಗ ಮಾತ್ರ ರೋಗಗಳು ಬಾರದಂತೆ ತಡೆಯಬಹುದು’ ಎಂದು ಸಲಹೆ ನೀಡಿದರು.
ಉತ್ತಮ ಫಸಲು ನಿರೀಕ್ಷೆ: ಇಲಾಖೆಯ ಜಂಟಿ ನಿರ್ದೇಶಕ ಡಿ. ಮಂಜುನಾಥ್, ‘ಮಾವು ಮತ್ತು ತೆಂಗು ಜಿಲ್ಲೆಯ ಆರ್ಥಿಕ ಬೆಳೆಗಳಾಗಿವೆ. 27 ಸಾವಿರ ಹೆಕ್ಟೇರ್‌ನಲ್ಲಿ ಮಾವು ಮತ್ತು 30 ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ರೋಗಬಾಧೆ ನಿಯಂತ್ರಣ ಕ್ರಮಗಳ ಮಾಹಿತಿ ಒಳಗೊಂಡ ಕರಪತ್ರ ಮುದ್ರಿಸಿ ಬೆಳೆಗಾರರಿಗೆ ಹಂಚಲಾಗುತ್ತಿದೆ. ಈ ಸಲ ಮಾವಿನ ಮರಗಳಲ್ಲಿ ಹೂ ಚನ್ನಾಗಿ ಮೂಡಿದ್ದು, ಉತ್ತಮ ಫಸಲಿನ ನಿರೀಕ್ಷೆ ಹುಟ್ಟಿಸಿದೆ’ ಎಂದರು.
ಬೆಳೆಯಲ್ಲಿ ಹೂ ಬಿಡುವ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ರೋಗ ಮತ್ತು ಕೀಟ ನಿಯಂತ್ರಣ ಕುರಿತು ತಜ್ಞರು ಸಲಹೆಗಳನ್ನು ನೀಡಿದರು. ರೈತರೊಂದಿಗೆ ಸಂವಾದ ನಡೆಸಿ ಗೊಂದಲ ಪರಿಹರಿಸಿದರು. ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ವಿ. ಹಿತ್ತಲಮನಿ ಅವರನ್ನು ಬೆಳೆಗಾರರು ಸನ್ಮಾನಿಸಿದರು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಇಟ್ಟಮಡು ಗೋಪಾಲ್, ತಾಲ್ಲೂಕು ಅಧ್ಯಕ್ಷ ಶಾಂತಪ್ಪ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಬಿ. ದುಂಡಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೈ.ಬಿ. ಈಶ್ವರಪ್ಪ, ಮಾವು ಬೆಳೆಗಾರ ಪ್ರಾಣೇಶ್, ಬಿಳಗುಂಬ ವಾಸು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ರೈತರು ಇದ್ದರು.
ಮಾವು ಕೊಯ್ಲು ಮತ್ತು ಮಾರಾಟಕ್ಕೆ ಪೂರಕವಾಗಿ ಕ್ರೇಟ್ ಮತ್ತು ಕಾರ್ಟ್‌ನ್ ಬಾಕ್ಸ್ ಉಚಿತವಾಗಿ ನೀಡಲು ಕ್ರಮ ವಹಿಸಲಾಗಿದೆ. ಬೆಳೆಗೆ ಔಷಧ ಸಿಂಪಡಣೆಗೆ ರೈತರಿಗೆ ನೆರವಾಗಲು ₹2 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ– ಡಾ. ಬಿ.ಸಿ. ಮುದ್ದು ಗಂಗಾಧರ್ ಅಧ್ಯಕ್ಷ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.