ADVERTISEMENT

ರಾಮನಗರ: ಹೂ ಬಿಟ್ಟ ಮಾವು, ಔಷದೋಪಚಾರಕ್ಕೆ ಸಲಹೆ

ಕೆಲವೆಡೆ ಅವಧಿಗೆ ಮುನ್ನ ಹೂ; ಕುಡಿಕೊರಕ, ಜಿಗಿ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:45 IST
Last Updated 7 ಡಿಸೆಂಬರ್ 2019, 19:45 IST
ರಾಮನಗರ ತಾಲ್ಲೂಕಿನ ಅರೇಹಳ್ಳಿಯ ಜಯಲಕ್ಷ್ಮಮ್ಮ ಅವರ ತೋಟದಲ್ಲಿ ಹೂ ಬಿಟ್ಟ ಮಾವು
ರಾಮನಗರ ತಾಲ್ಲೂಕಿನ ಅರೇಹಳ್ಳಿಯ ಜಯಲಕ್ಷ್ಮಮ್ಮ ಅವರ ತೋಟದಲ್ಲಿ ಹೂ ಬಿಟ್ಟ ಮಾವು   

ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಮಾವು ಹೂ ಬಿಟ್ಟಿದ್ದು, ಸಾಕಷ್ಟು ಚಿಗುರು ಬಂದಿದೆ. ಮಾವು ಬೆಳೆಯನ್ನು ಕೀಟ ಬಾಧೆಯಿಂದ ತಪ್ಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯು ರೈತರಿಗೆ ಹಲವು ಸಲಹೆ ನೀಡಿದೆ.

ಮಾವು ಬೆಳೆಯುವ ಜಿಲ್ಲೆಗಳಲ್ಲಿ ರಾಮನಗರಕ್ಕೆ ಎರಡನೇ ಸ್ಥಾನ. ರಾಜ್ಯದಲ್ಲೇ ಮೊದಲು ಮಾವು ಕೊಯ್ಲಿಗೆ ಬರುವುದು ಇಲ್ಲಿಯೇ. ಇಲ್ಲಿನ 22 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ.
ಬಾದಾಮಿ, ರಸಪೂರಿ, ತೋತಾಪುರಿ, ಸೇಂಧೂರ ಪ್ರಮುಖ ತಳಿಯಾಗಿದೆ.

ಪ್ರಶಸ್ತ ಕಾಲ: ಡಿಸೆಂಬರ್ ಆರಂಭದಿಂದ ಫೆಬ್ರುವರಿ ಅಂತ್ಯದವರೆಗೆ ಮಾವು ಬೆಳವಣಿಗೆ ಹೆಚ್ಚಾಗಿ ಕಂಡು ಬರುತ್ತದೆ. ನವೆಂಬರ್ ಅಂತ್ಯಕ್ಕೆ ಮಾವು ಚಿಗುರಿಗೆ ಬಂದಿದ್ದು, ಇದೀಗ ಹೂ ಬಿಡಲು ಆರಂಭಿಸಿದೆ. ಇದರ ಜೊತೆಗೇ ಕುಡಿ ಕೊರಕ, ಜಿಗಿ ಹುಳು, ನುಸಿ ಮತ್ತು ಇತರೆ ಕೀಟಬಾಧೆಯೂ ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿದೆ.

ADVERTISEMENT

ಸಮಿತಿ ಭೇಟಿ: ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ತಾಲೂಕುಗಳಿಗೆ ತಾಂತ್ರಿಕ ಸಲಹ ಸಮಿತಿ ಭೇಟಿ ನೀಡಿತ್ತು. ಈ ವೇಳೆ ಕೆಲವು ಭಾಗದಲ್ಲಿ ಮಾವಿಗೆ ಕೀಟಬಾಧೆ ಕಾಣಿಸಿಕೊಂಡರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಸಮಿತಿಯು ಸಲಹೆಗಳನ್ನು ನೀಡಿದೆ. ಡಿಸೆಂಬರ್ ಎರಡನೇ ವಾರದೊಳಗೆ ಬೂರ್ಫೋಜನ್,ಥಯೋಮೆಥಾಕ್ಸಾಮ್, ಕಾರ್ಬನ್ ಡೈಜಿಮ್, ಕ್ಲೋರೋಥೋನಿಯಲ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಿಸುವುದರಿಂದ ಕುಡಿ ಕೊರಕ, ಜಿಗಿ ಹುಳು ಇತರೆ ಶಿಲೀಂದ್ರ ರೋಗಗಳಿಂದ ಮಾವು ಬೆಳೆ ಸಂರಕ್ಷಿಸಬಹುದಾಗಿದೆ.

ಈಗಾಗಲೇ ಚಿಗುರಿರುವ ಗಿಡಗಳನ್ನು ಮುಂಬರುವ ಹಂಗಾಮಿನಲ್ಲಿ ಹೂ ಬಿಡುವ ಮುನ್ನಾ ಸದೃಡಗೊಳಿಸಲು ಹಾಗೂ ಎಲೆಗಳು ಆರೋಗ್ಯವಾಗಿ ಹಣ್ಣುಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಪೊಟ್ಯಾಷಿಯಂ ನೈಟ್ರೇಟ್, ಯೂರಿಯಾವನ್ನು ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಸಂಪರಣೆ ಮಾಡಬೇಕಾಗುತ್ತದೆ.

ಮ್ಯಾಂಗೋ ಸ್ಪೆಷಲ್: ಮಾವು ಬೆಳೆಗೆ ಅಗತ್ಯವಾದ ಲಘು ಪೋಕಾಂಶಗಳಾದ ಕ್ಯಾಲ್ಸಿಯಂ, ಬೋರಾನ್, ಮೆಗ್ನಿಯನ್ ಮಾವು ಸ್ಪೆಷಲ್‌ನಲ್ಲಿ ಲಭ್ಯವಿದ್ದು, ಇದನ್ನು ಸಿಂಪಡಿಸುವಂತೆ ಇಲಾಖೆ ಮನವಿ ಮಾಡಿಕೊಂಡಿದೆ.

ಬೆಳೆಗಾರರು ತಮ್ಮ ಸಮಸ್ಯೆ ಕುರಿತು ಪರಿಹಾರ ತಿಳಿದುಕೊಳ್ಳಲು ತೋಟಗಾರಿಕೆ ಇಲಾಖೆ ದೂರವಾಣಿ ಸಂಖ್ಯೆ 080-–22236837 ಅಥವಾ ಉಪ ನಿರ್ದೇಶಕ ಗುಣವಂತ ಅವರ ಮೊಬೈಲ್ ಸಂಖ್ಯೆ: 9448999241 ಸಂಪರ್ಕಿಸಬಹುದಾಗಿದೆ.

*
ಕೆಲವು ಕಡೆ ಅವಧಿ ಪೂರ್ವದಲ್ಲಿ ಮಾವು ಬೆಳೆ ಬಿಟ್ಟಿದೆ. ಅದರ ರಕ್ಷಣೆಗೆ ರೈತರು ಔಷದೋಪಚಾರ ಮಾಡುವುದು ಅಗತ್ಯವಾಗಿದೆ.
–ಗುಣವಂತ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.