ADVERTISEMENT

ಮಾರುಕಟ್ಟೆಗೆ ಮಾವು: ಮಾರಾಟದ್ದೇ ಚಿಂತೆ!

ಹಣ್ಣುಗಳ ರಾಜನಿಗೆ ಕೋವಿಡ್‌ ಎರಡನೇ ಅಲೆಯ ಭೀತಿ

ಆರ್.ಜಿತೇಂದ್ರ
Published 27 ಮಾರ್ಚ್ 2021, 19:31 IST
Last Updated 27 ಮಾರ್ಚ್ 2021, 19:31 IST
ರಾಮನಗರದಲ್ಲಿ ಕಟಾವಿಗೆ ಬಂದ ಮಾವು
ರಾಮನಗರದಲ್ಲಿ ಕಟಾವಿಗೆ ಬಂದ ಮಾವು   

ರಾಮನಗರ: ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಿದ್ದು, ಈ ಬಾರಿಯೂ ಕೋವಿಡ್ ಕಾರಣಕ್ಕೆ ಬೇಡಿಕೆ ಕುಸಿಯುವ ಆತಂಕ ಎದುರಾಗಿದೆ.

ಚನ್ನಪಟ್ಟಣದ ಮಾರುಕಟ್ಟೆಗೆ ನಿತ್ಯ ಸುಮಾರು ನಾಲ್ಕು ಸಾವಿರ ಕ್ರೇಟ್‌ ಹಾಗೂ ರಾಮನಗರದ ಮಾರುಕಟ್ಟೆಗೆ 500 ಕ್ರೇಟ್‌ ಮಾವು ಆವಕ ಆಗುತ್ತಿದೆ. ಈ ವಾರದ ಆರಂಭದಲ್ಲಿ ಬದಾಮಿ ತಳಿಯ ಮಾವು ಪ್ರತಿ ಕೆ.ಜಿ.ಗೆ ₹ 200ರಂತೆ ಮಾರಾಟ ಆಗಿದ್ದು, ಶನಿವಾರ ₹ 150ಕ್ಕೆ ಕುಸಿದಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚುತ್ತಿರುವುದು ಬೇಡಿಕೆ ಮತ್ತು ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ ವರ್ತಕರು.

ರಾಜ್ಯದಾದ್ಯಂತ 1.68 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ವರ್ಷ ಆರಂಭದಲ್ಲಿ ಮಾವಿನ ಹೂವು ಹೆಚ್ಚಿದ್ದರೂ ಹವಾಮಾನ ವೈಪರೀತ್ಯದಿಂದ ಅರ್ಧದಷ್ಟು ನಾಶವಾಗಿದೆ. 12–14 ಲಕ್ಷ ಟನ್‌ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ADVERTISEMENT

ರಾಮನಗರದಲ್ಲಿ ಮೊದಲ ಕೊಯ್ಲು: ರಾಜ್ಯದಲ್ಲಿ ಮೊದಲು ಮಾವು ಕೊಯ್ಲು ನಡೆಯುವುದು ರಾಮನಗರದಲ್ಲಿ. ಇಲ್ಲಿ ಈಗಾಗಲೇ ಮಾವು ಕೊಯ್ಲು ಆರಂಭಗೊಂಡಿದ್ದು, ಶೇ 90ರಷ್ಟು ಮಾವು ಹೊರ ರಾಜ್ಯಗಳಿಗೆ ಹೋಗುತ್ತದೆ.

ಮೇ ತಿಂಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೊಯ್ಲು ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಹಾವೇರಿ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗಿದೆ.

ಮೊದಲ ಹಾಗೂ ಎರಡನೇ ದರ್ಜೆಯ ಮಾವು ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ಸಾಗಣೆ ಆದರೆ, ಮೂರು ಹಾಗೂ ನಾಲ್ಕನೇ ದರ್ಜೆಯ ಕಾಯಿ ಚಿತ್ತೂರು, ಕೃಷ್ಣಗಿರಿ ಮೊದಲಾದ ಜಿಲ್ಲೆಗಳ ಪಲ್ಪ್‌ ಕಾರ್ಖಾನೆಗಳಿಗೆ ಸರಬರಾಜು ಆಗುತ್ತಿದೆ.

ಬೆಲೆ ಕುಸಿತದ ಭೀತಿ:ಕಳೆದ ವರ್ಷ ಮಾವು ಮಾರುಕಟ್ಟೆಗೆ ಬರುವ ವೇಳೆಗೆ ಕೋವಿಡ್‌ ಕಾಲಿಟ್ಟು ಮಾರುಕಟ್ಟೆ ಬಂದ್ ಆಗಿದ್ದವು. ಪಲ್ಪ್ ಕಾರ್ಖಾನೆಗಳಿಗೆ ಕೇಳಿದ ಬೆಲೆಗೆ ಹಣ್ಣು ನೀಡಿ ನಷ್ಟ ಅನುಭವಿಸಿದ್ದರು. ಕೋವಿಡ್ ಅಲೆ ಹೆಚ್ಚಾದರೆ ಈ ಬಾರಿಯೂ ಆರಂಭದಲ್ಲೇ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾವು ಬೆಳೆಗಾರ ಜೋಗಿ ಶಿವರಾಮಯ್ಯ.

ಅಮೆಜಾನ್, ಫ್ಲಿಫ್‌ಕಾರ್ಟ್‌ ಉತ್ಸುಕ

ಮಾವು ಮಾರುಕಟ್ಟೆ ಮೇಲೆ ಅಮೆಜಾನ್‌ ಕಂಪನಿಯು ಕಣ್ಣಿಟ್ಟಿದ್ದು, ಆನ್‌ಲೈನ್‌ ಮಾರಾಟಕ್ಕಾಗಿ ಸರ್ಕಾರದ ಮುಂದೆ ಹಲವು ಷರತ್ತುಗ ಪ್ರಸ್ತಾವ ಇರಿಸಿದೆ.

ರೈತ ಉತ್ಪಾದಕ ಕಂಪನಿಗಳ (ಎಫ್‌ಪಿಒ) ಮೂಲಕ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡಲು ಅಮೆಜಾನ್‌ ಯೋಜಿಸಿದೆ. ಎಫ್‌ಪಿಒಗಳು ರೈತರಿಂದ ಹಣ್ಣು ಖರೀದಿಸಿ, ಗ್ರಾಹಕರಿಗೆ ನೇರ ಮಾರಾಟ ಮಾಡಲಿವೆ. ಇದಕ್ಕಾಗಿ ಅಮೆಜಾನ್‌ ಶೇ 4.5 ರಷ್ಟು ಶುಲ್ಕ ಪಡೆಯುವುದಾಗಿ ಹೇಳಿದೆ.

ಈ ಸಂಬಂಧ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಹಾಗೂ ತೋಟಗಾರಿಕೆ ಇಲಾಖೆ ನಡುವೆ ಮಾತುಕತೆ ನಡೆದಿದ್ದು, ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ. ಫ್ಲಿಫ್‌ಕಾರ್ಟ್‌ ಸಹ ಮಾವು ಮಾರಾಟಕ್ಕೆ ಆಸಕ್ತಿ ತೋರಿದ್ದು, ಇದು ಇನ್ನೂ ಪ್ರಸ್ತಾವದ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.