ADVERTISEMENT

ಮಳೆ ಹೊಡೆತ: ಮಾವು ದರ ಕುಸಿತ

ಇಳುವರಿ ಕಡಿಮೆ ಇದ್ದರೂ ಬೆಲೆ ಇಳಿಕೆ; ಬೆಳೆಗಾರರು ಕಂಗಾಲು

ಆರ್.ಜಿತೇಂದ್ರ
Published 13 ಮೇ 2022, 21:01 IST
Last Updated 13 ಮೇ 2022, 21:01 IST
ರಾಮನಗರ ಎಪಿಎಂಸಿಯಲ್ಲಿ ಮಾವಿನ ವಹಿವಾಟು ನಡೆದಿರುವುದು
ರಾಮನಗರ ಎಪಿಎಂಸಿಯಲ್ಲಿ ಮಾವಿನ ವಹಿವಾಟು ನಡೆದಿರುವುದು   

ರಾಮನಗರ:ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ನಿರಂತರ ಮಳೆ ಹೊಡೆತದಿಂದ ಕಳೆದೊಂದು ವಾರದದಲ್ಲಿ ಮಾವಿನ ಧಾರಣೆ ಅರ್ಧದಷ್ಟು ಕುಸಿದಿದೆ.

ಬಿರುಗಾಳಿ ಮತ್ತು ಆಲಿಕಲ್ಲಿನ ಹೊಡೆತದಿಂದ ಕಾಯಿಗಳು ನೆಲ ಕಚ್ಚುತ್ತಿವೆ. ಮಳೆ ಹೆಚ್ಚಾದರೆ ಕಾಯಿ ಕಪ್ಪಾಗುತ್ತದೆ ಎಂಬ ಆತಂಕದಿಂದ ಕಂಗಾಲಾಗಿರುವ ಬೆಳೆಗಾರರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದಾರೆ.

ಪರಿಸ್ಥಿತಿಯ ಲಾಭ ಪಡೆದು ಮಾವಿನ ಜ್ಯೂಸ್‌ ತಯಾರಿಕಾ ಕಾರ್ಖಾನೆಗಳು ದಲ್ಲಾಳಿಗಳ ಮೂಲಕ ಸಗಟು ಖರೀದಿಗೆ ಮುಂದಾಗಿವೆ. ಕಾರ್ಖಾನೆಗಳಿಗೆ ಸಗಟು ದರದಲ್ಲಿ ಬಾದಾಮಿ ಪ್ರತಿ ಕೆ.ಜಿ.ಗೆ ₹30 ಹಾಗೂ ಸೇಂದೂರ ₹19–20ರಂತೆ ಮಾರಾಟ ನಡೆದಿದೆ.

ADVERTISEMENT

ಮುಂದಿನ ದಿನಗಳಲ್ಲಿ ಮಾವಿನ ಬೆಲೆ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.

‘ಇಳುವರಿ ಕುಸಿತದಿಂದ ಉತ್ತಮ ಬೆಲೆ ಸಿಗಲಿದೆ ಎಂದು ನಂಬಿದ್ದೆವು. ಆದರೆ ನಮ್ಮ ಲೆಕ್ಕಾಚಾರ ತಲೆಕೆಳ ಕಾಗಿದೆ. ಮಾರುಕಟ್ಟೆಯಲ್ಲಿ ಕಡಿಮೆ ಉತ್ಪನ್ನ ಇದ್ದರೂ ಬೆಲೆ ಕುಸಿದಿದೆ’ ಎಂದು ರಾಮನಗರದ ಮಾವು ಬೆಳೆಗಾರ ಶಿವರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲೇ ಮೊದಲಿಗೆ ರಾಮನಗರದಲ್ಲಿ ಕೊಯ್ಲು ನಡೆದಿದ್ದು ಜಿಲ್ಲೆಯ 33 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುವ ಮಾವಿನ ಪೈಕಿ ಶೇಕಡ 70ರಷ್ಟು ಬಾದಾಮಿ ತಳಿಯದ್ದಾಗಿದೆ. ಶುಕ್ರವಾರ ರಾಮನಗರ, ಚನ್ನಪಟ್ಟಣ ಎಪಿಎಂಸಿಗಳಲ್ಲಿ ಬಾದಾಮಿ
ತಳಿಯ ಮಾವು ಪ್ರತಿ ಕೆ.ಜಿ.ಗೆ ₹45–₹50ರಂತೆ ಮಾರಾಟ ನಡೆಯಿತು. ಕಳೆದ ವಾರ ಇದೇ ತಳಿಯ ಕಾಯಿಗೆ ಎಪಿಎಂಸಿ ಕೆ.ಜಿ.ಗೆ ₹85–90ರವರೆಗೂ ಧಾರಣೆ ಇತ್ತು.

ಮಳೆಯ ಕಾರಣಕ್ಕೆ ರೈತರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದು, ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬಂದ ಕಾರಣ ಬೆಲೆಯಲ್ಲಿ
ಇಳಿಕೆ ಆಗಿದೆ ಎಂದು ಉಪ ನಿರ್ದೇಶಕ ಮುನೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.