ADVERTISEMENT

ರಾಮನಗರ: ಖರೀದಿಗೆ ವರ್ತಕರ ಹಿಂದೇಟು, ಪಾತಾಳಕ್ಕೆ ಕುಸಿದ ಮಾವಿನ ದರ

ಅಕಾಲಿಕ ಮಳೆಯಿಂದ ರೈತರಿಗೂ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 26 ಮೇ 2022, 6:07 IST
Last Updated 26 ಮೇ 2022, 6:07 IST
ರಾಮನಗರ ಎಪಿಎಂಸಿಯಲ್ಲಿ ಮಾವಿನ ವಹಿವಾಟು ನಡೆದಿರುವುದು
ರಾಮನಗರ ಎಪಿಎಂಸಿಯಲ್ಲಿ ಮಾವಿನ ವಹಿವಾಟು ನಡೆದಿರುವುದು   

ರಾಮನಗರ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಮಾವಿನ ಧಾರಣೆಯು ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯತೊಡಗಿದ್ದು, ಬೇಡಿಕೆ ಇಲ್ಲದೇ ಬೆಳೆಗಾರರು ಕಂಗಾಲಾಗಿದ್ದಾರೆ.

ಬುಧವಾರ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ಎಪಿಎಂಸಿಗಳಲ್ಲಿ ಬದಾಮಿ ತಳಿಯ ಮಾವು ಪ್ರತಿಕೆ.ಜಿ.ಗೆ ₹15–20ರ ದರದಲ್ಲಿ ಮಾರಾಟ ನಡೆಯಿತು. ಬೈಗನ್‌ಪಲ್ಲಿ ₹15, ಮಲಗೋವ ₹30, ಸೇಂದೂರ, ತೋತಾಪುರಿ–₹6, ನೀಲಂ ₹6–8ರಂತೆ ಮಾರಾಟ ನಡೆದಿತ್ತು.

ಅತಿವೃಷ್ಟಿಯಿಂದಾಗಿ ಮಾವಿಗೆ ರೋಗಬಾಧೆ ಹೆಚ್ಚಾಗಿದ್ದು, ಹೂಜಿ ಹುಳುಗಳು ಕಾಣಿಸಿಕೊಂಡಿವೆ. ಕಾಯಿಗಳು ಕಪ್ಪಾಗುತ್ತಿವೆ. ಹೀಗಾಗಿ ರೈತರು ಆತಂಕದಿಂದ ಕೊಯ್ಲು ನಡೆಸುತ್ತಿದ್ದಾರೆ. ಕಳೆದೆರಡು ವಾರಗಳಿಂದ ಮಾರುಕಟ್ಟೆಗೆ ಯಥೇಚ್ಛ ಪ್ರಮಾಣದಲ್ಲಿ ಮಾವು ಆವಕ ಆಗುತ್ತಿದೆ. ಆದರೆ ಬೇಡಿಕೆ ಇಲ್ಲದಾಗಿದೆ.

ADVERTISEMENT

ದಲ್ಲಾಳಿಗಳ ಮೇಲೆ ಆರೋಪ: ಮಧ್ಯವರ್ತಿಗಳು ಬೇಕಂತಲೇ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುವಂತೆ ಮಾವು ಬೆಲೆ ಕುಸಿತಕ್ಕೂ ಕಾರಣವಾಗಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಗುಣಮಟ್ಟದ ಕೊರತೆಯ ನೆಪವೊಡ್ಡಿ ಕಾರ್ಖಾನೆಗಳು ರೈತರಿಂದ ಮಾವು ಖರೀದಿ ಮಾಡಲು ಹಿಂದೇಟು ಹಾಕುತ್ತಿವೆ. ಕೆಲವು ಮಧ್ಯವರ್ತಿಗಳು ರೈತರಿಂದ ಕಡಿಮೆ ದರಕ್ಕೆ ಮಾವು ಖರೀದಿ ಮಾಡಿ ಕಾರ್ಖಾನೆಗಳಿಗೆ ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ ಎಂದು ರೈತರು ದೂರುತ್ತಾರೆ.

*
ಎರಡು ದಿನದ ಹಿಂದೆ ಬಾದಾಮಿ ಕೆ.ಜಿ.ಗೆ ₹11ಕ್ಕೆ ಮಾರಿದ್ದೇವೆ. ಮಾರುಕಟ್ಟೆಯಲ್ಲಿ ಕಾಯಿ ಕೇಳುವವರಿಲ್ಲ. ಕೆಲವರು ಬೇಕಂತಲೇ ಬೆಲೆ ಕುಸಿಯುವಂತೆ ಮಾಡುತ್ತಿದ್ದಾರೆ. -ಶಿವರಾಮು, ಮಾವು ಬೆಳೆಗಾರ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.