ADVERTISEMENT

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಸವಿತಾ ಪಿ.ಆರ್

ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಪ್ರಯುಕ್ತ ಮನೋಸಂಗಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 4:58 IST
Last Updated 12 ಸೆಪ್ಟೆಂಬರ್ 2024, 4:58 IST
<div class="paragraphs"><p>ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ, ರಾಮನಗರ ಕಂದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮನೋಸಂಗಮ ಕಾರ್ಯಕ್ರಮದಲ್ಲಿ ಗಣ್ಯರು ಟೆಲಿ ಮನಸ್ ಪೋಸ್ಟರ್‌ ಪ್ರದರ್ಶಿಸಿದರು. </p></div>

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ, ರಾಮನಗರ ಕಂದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮನೋಸಂಗಮ ಕಾರ್ಯಕ್ರಮದಲ್ಲಿ ಗಣ್ಯರು ಟೆಲಿ ಮನಸ್ ಪೋಸ್ಟರ್‌ ಪ್ರದರ್ಶಿಸಿದರು.

   

ರಾಮನಗರ: ‘ಸಮಸ್ಯೆಗಳಿಗೆ ಆತ್ಮಹತ್ಯೆ ಯಾವುದೇ ಕಾರಣಕ್ಕೂ ಪರಿಹಾರವಲ್ಲ. ಇತ್ತೀಚೆಗೆ ಮಕ್ಕಳು ಸಹ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಕಳವಳಕಾರಿಯಾಗಿದೆ. ಪೋಷಕರು ತಮ್ಮ ಮಕ್ಕಳು ಎದುರಿಸುವ ಮಾನಸಿಕ ಒತ್ತಡದ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಪರಿಹರಿಸಿ ಆತ್ಮವಿಶ್ವಾಸ ತುಂಬಬೇಕು. ಆತ್ಮಹತ್ಯೆಯಂತಹ ಆಲೋಚನೆ ಅವರಲ್ಲಿ ಬಾರದಂತೆ ಸುಳಿಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿಮ್ಹಾನ್ಸ್ ಸಂಸ್ಥೆ, ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಕಂದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮನೋಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಮಕ್ಕಳ ತಮ್ಮ ಸಮಸ್ಯೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವ ಮುಕ್ತ ವಾತಾವರಣವನ್ನು ಪೋಕಷರು ಕಲ್ಪಿಸಬೇಕು. ಮುಖ್ಯವಾಗಿ ಮಕ್ಕಳು ಹೇಳುವುದನ್ನು ಪೂರ್ವಾಗ್ರಹವಿಲ್ಲದೇ ಕೇಳಿಸಿಕೊಳ್ಳಬೇಕು. ಆಗ ಮಾತ್ರ, ಮಕ್ಕಳು ಪೋಷಕರಿಗೆ ಗೊತ್ತಾಗದಂತೆ ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟಬಹುದು’ ಎಂದು ಹೇಳಿದರು.

‘ಮಕ್ಕಳ ಮಾನಸಿಕ ಒತ್ತಡವನ್ನು ನಿರ್ವಹಿಸಲು ಮುಖ್ಯವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಯೋಗ, ಧ್ಯಾನ, ವ್ಯಾಯಾಮ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಶಾಲೆಯಲ್ಲಿಯೂ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಮಕ್ಕಳ ಒತ್ತಡ ನಿರ್ವಹಣೆ ಹಾಗೂ ನಕಾರಾತ್ಮಕ ಆಲೋಚನೆ ದೂರ ಮಾಡುವಲ್ಲಿ ಪೋಷಕರಷ್ಟೇ ಶಿಕ್ಷಕರ ಪಾತ್ರವೂ ಮುಖ್ಯ’ ಎಂದು ತಿಳಿಸಿದರು.

‘ಸಮಾಜದಲ್ಲಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕವಾಗಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ ಆಚರಿಸಲಾಗುತ್ತಿದೆ. ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ ಜನ ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಇದಕ್ಕೆ ಸಮಾಜದ ನೆರವು ಅತ್ಯಗತ್ಯ, ಮಾನಸಿಕವಾಗಿ ಖಿನ್ನತೆ ಒಳಗಾದವರಿಗೆ ನೆರವು ನೀಡಿ ಅವರ ಮನಃಪರಿವರ್ತನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್, ಜಿಲ್ಲಾ ಗ್ರಂಥಪಾಲಕ ಅಧಿಕಾರಿ ಚನ್ನಕೇಶವ, ಮನೋವೈದ್ಯ ಡಾ. ಆದರ್ಶ್, ನರ್ಸಿಂಗ್ ಕಾಲೇಜು ಪ್ರಾಚಾರ್ಯೆ ಡಾ. ಕಾತ್ಯಾಯಿನಿ, ಬೆಂಗಳೂರು ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜಕಾರ್ಯ ಪ್ರಾಧ್ಯಾಪಕ ಡಾ. ಅನೀಶ್ ವಿ. ಚೆರಿಯನ್, ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ. ರಾಜೇಂದ್ರ ಕೆ.ಎಂ, ಮನೋರೋಗ ತಜ್ಞ ಡಾ. ಶಿವಸ್ವಾಮಿ, ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಕೆ. ಜಾನ್ ವಿಜಯ್ ಸಾಗರ್, ಆರೋಗ್ಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

ಮಕ್ಕಳ ಮಾತನ್ನು ಪೂರ್ವಾಗ್ರಹವಿಲ್ಲದೆ ಕೇಳಬೇಕು ಉಚಿತ ಸಮಾಲೋಚನೆಯ ಸಹಾಯವಾಣಿ 14416 ದಿನದ 24 ತಾಸು ಕಾರ್ಯನಿರ್ವಹಿಸುವ ಟೆಲಿ ಮನಸ್

ಉಚಿತ ಸಮಾಲೋಚನೆಗೆ ‘ಟೆಲಿ ಮನಸ್’

‘ಯಾವುದೇ ರೀತಿಯ ಮಾನಸಿಕ ಮಾನಸಿಕ ಆರೋಗ್ಯ ಕಾಯಿಲೆಯಿಂದ ಬಳಲುತ್ತಿದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿದೆ. ಜೊತೆಗೆ ಮಾನಸಿಕ ಸಮಸ್ಯೆಗಳಿದ್ದರೆ ಉಚಿತ ಆಪ್ತ ಸಮಾಲೋಚನೆಗಾಗಿ ಟೆಲಿ ಮನಸ್ ಉಚಿತ ಸಹಾಯವಾಣಿ: 14416ಗೆ ಕರೆ ಮಾಡಬಹುದು. ಕರೆ ಸ್ವೀಕರಿಸುವ ಸಮಾಲೋಚಕರು ಅಲ್ಲಿಯೇ ಸಮಾಲೋಚನೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕುಮಾರ್ ಕೆ. ತಿಳಿಸಿದರು. ‘ಪರೀಕ್ಷಾ ಒತ್ತಡ ಕೌಟುಂಬಿಕ ಸಮಸ್ಯೆ ಆತ್ಮಹತ್ಯೆ ಆಲೋಚನೆ ಮಾದಕವಸ್ತು ವ್ಯಸನದಿಂದ ಮುಕ್ತರಾಗಲು ಬಯಸುವವರು ಸಹ ಟೆಲಿ ಮನಸ್ ಸಹಾಯವಾಣಿಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದು. ಇದು ದಿನದ ಇಪ್ಪತ್ತನಾಲ್ಕು ತಾಸು ಹಾಗೂ ವರ್ಷದ 365 ದಿನಗಳು ಕಾರ್ಯನಿರ್ವಹಿಸುತ್ತದೆ’ ಎಂದು ಮನೋವೈದ್ಯಕೀಯ ಕಾರ್ಯಕರ್ತೆ ಪದ್ಮರೇಖಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.