ADVERTISEMENT

ಮಾಗಡಿ | ಶೌಚ ಗುಂಡಿ ಸ್ವಚ್ಛತೆಗೆ ಕಾರ್ಮಿಕರ ಬಳಕೆ: ಐವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 17:56 IST
Last Updated 30 ಜುಲೈ 2025, 17:56 IST
<div class="paragraphs"><p>ಮಾಗಡಿ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಗ್ರಾಮದ ಮನೆಯೊಂದರ ಮಲದ ಗುಂಡಿಗಿಳಿದು ಸ್ವಚ್ಛಗೊಳಿಸಿದ್ದ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು</p></div>

ಮಾಗಡಿ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಗ್ರಾಮದ ಮನೆಯೊಂದರ ಮಲದ ಗುಂಡಿಗಿಳಿದು ಸ್ವಚ್ಛಗೊಳಿಸಿದ್ದ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು

   

ಮಾಗಡಿ (ರಾಮನಗರ): ತಾಲ್ಲೂಕಿನ ಬೀಚನಹಳ್ಳಿ ಗ್ರಾಮ ಪಂಚಾಯಿತಿಯ ಮೂವರು ಪೌರ ಕಾರ್ಮಿಕರನ್ನು ಮನೆಯೊಂದರ ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆ ನಡೆದಿದೆ. 

ಕಳೆದ ವಾರ ಈ ಘಟನೆ ನಡೆದಿದೆ. ಆದರೆ ಒತ್ತಡ ಹೆಚ್ಚಾದ ಬಳಿಕವಷ್ಟೇ ಪೊಲೀಸರು ಬುಧವಾರ ಸಂಜೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಘಟನೆ ಕುರಿತು ಸಮಗ್ರ ವರದಿ ನೀಡಲು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದೆ.

ಘಟನೆ ಗೊತ್ತಾದುದು ಹೇಗೆ?: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ–2013 ಅನುಷ್ಠಾನಕ್ಕೆ
(ಎಂ.ಎಸ್ ಕಾಯ್ದೆ) ಸಂಬಂಧಿಸಿದ ಜಾಗೃತಿ ಸಭೆಯಲ್ಲಿ ಘಟನೆ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಹುಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಮಾನತುಗೊಳಿಸಬೇಕು, ಪ್ರಕರಣ ದಾಖಲಿಸಲು ನಿರ್ಲಕ್ಷಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.  ಆಗ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸರು ಎಂ.ಎಸ್ ಕಾಯ್ದೆ ಹಾಗೂ ಎಸ್‌.ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಜೆ ಐವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. 

ಬೀಚನಹಳ್ಳಿಯ ಗ್ರಾಮದ ಮನೆ ಮಾಲೀಕ ಶ್ರೀನಿವಾಸ್, ಪತ್ನಿ ವಿಜಯಲಕ್ಷ್ಮಿ, ಪುತ್ರರಾದ ಪ್ರದೀಪ್, ಕೃಷ್ಣಮೂರ್ತಿ ಹಾಗೂ ಗುಂಡಿಗೆ ಇಳಿಸಲು ಪ್ರೇರಣೆ ನೀಡಿದ ಆರೋಪದ ಮೇಲೆ ಅಂಕಯ್ಯನಪಾಳ್ಯದ ವಿಜಯಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.  

ಪಂಚಾಯತಿ ಟ್ರಾಕ್ಟರ್‌ನಲ್ಲಿ ಬಂದಿದ್ದರು:  ‘ಶ್ರೀನಿವಾಸ್ ಅವರ ಮನೆಯ ಶೌಚದ ಗುಂಡಿ ಸ್ವಚ್ಛತೆ ಯಂತ್ರ ತರಿಸುವ ಬದಲು ಪರಿಚಿತರ ಮೂಲಕ ಪೌರ ಕಾರ್ಮಿಕರಾದ ಯೋಗೇಶ್, ಪ್ರವೀಣ್ (ಇಬ್ಬರೂ ಪರಿಶಿಷ್ಟ ಜಾತಿ), ನರಸಿಂಹಮೂರ್ತಿ (ಪರಿಶಿಷ್ಟ ಪಂಗಡ) ಎಂಬುವರನ್ನು ಪಂಚಾಯಿತಿ ಟ್ರಾಕ್ಟರ್ ಸಮೇತ ಸ್ಥಳಕ್ಕೆ ಕರೆಯಿಸಿದ್ದರು.

‘ಜುಲೈ 26ರಂದು ಇವರು ಗುಂಡಿ ಸ್ವಚ್ಛಗೊಳಿಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಜುಲೈ 28ರಂದು ಸ್ಥಳಕ್ಕೆ ತೆರಳಿ ಮಹಜರು ಮಾಡಲಾಯಿತು. ನಂತರ ಠಾಣೆಗೆ ತೆರಳಿ ದೂರು ನೀಡಿದೆ. ಪ್ರಕರಣ ದಾಖಲಿಸದ ಇನ್‌ಸ್ಪೆಕ್ಟರ್ ನವೀನ್, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಉಪ ವಿಭಾಗಾಧಿಕಾರಿ ಗಮನಕ್ಕೆ ತನ್ನಿ ಎಂದು ಹೇಳಿ ಕಳಿಸಿದ್ದರು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಉಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮನುಷ್ಯರನ್ನು ಶೌಚ ಗುಂಡಿಗಳಿಸಿ ಸ್ವಚ್ಛಗೊಳಿಸಬಾರದು. ಇಲ್ಲಿ ಕಾಯ್ದೆ ಉಲ್ಲಂಘಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ.
ಚಂದ್ರಕಲಾ, ಕಾರ್ಯದರ್ಶಿ, ಸಫಾಯಿ ಕರ್ಮಚಾರಿ ಆಯೋಗ
ಇಂತಹ ಘಟನೆ ನಡೆದಾಗ ನೇರವಾಗಿ ಎಫ್‌ಐಆರ್‌ ದಾಖಲಿಸಲು ಅವಕಾಶವಿಲ್ಲ. ಉಪ ವಿಭಾಗಾಧಿಕಾರಿ ಪರಿಶೀಲಿಸಿ ಸೂಚಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಮನಕ್ಕೆ ತರಲಾಗಿತ್ತು
ನವೀನ್,ಕುದೂರು ಠಾಣೆ ಇನ್‌ಸ್ಪೆಕ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.