
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಪೌರ ಕಾರ್ಮಿಕರೊಂದಿಗೆ ಉದ್ಘಾಟಿಸಿದರು.
ರಾಮನಗರ: ‘ಪೌರ ಕಾರ್ಮಿಕರ ಕೆಲಸವು ಜಾತಿ ಆಧಾರಿತವಲ್ಲ. ಆದರೂ, ಶೋಷಿತ ಪರಿಶಿಷ್ಟ ಜಾತಿಯವರೇ ಹೆಚ್ಚಾಗಿದ್ದಾರೆ. ಕಾರ್ಮಿಕರು ತಮ್ಮ ಮಕ್ಕಳನ್ನು ಈ ವೃತ್ತಿಯಲ್ಲಿ ಮುಂದುವರಿಸುವುದಿಲ್ಲ ಎಂದು ಶಪಥ ಮಾಡಬೇಕು. ಈ ವೃತ್ತಿಗೆ ಅಂಟಿರುವ ಜಾತಿ ಸೋಂಕು ತೊಳೆಯಬೇಕು’ ಎಂದು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಕರೆ ನೀಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಾಗೂ ಕರ್ನಾಟಕ ಪೌರ ನೌಕರರ ಸಂಘದ ಸಹಯೋಗದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾರ್ಮಿಕರು ತಮ್ಮ ಮಕ್ಕಳನ್ನು ಚನ್ನಾಗಿ ಓದಿಸಿ ಬೇರೆ ಕೆಲಸಗಳಿಗೆ ಕಳಿಸಬೇಕು. ಆಗ ಈ ಕೆಲಸಕ್ಕೆ ಅಂಟಿರುವ ಜಾತಿಯ ಲೇಬಲ್ ಹೋಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಬೇರೆ ಸಮುದಾಯಗಳಲ್ಲಿ ಪರಿಶಿಷ್ಟರಿಗಿಂತಲೂ ಕಡು ಬಡವರಿದ್ದಾರೆ. ಅವರೆಲ್ಲರೂ ಬೇರೆ ಕೆಲಸಗಳನ್ನು ಮಾಡಿ ಬದುಕುತ್ತಿದ್ದಾರೆ. ಆದರೆ, ಪರಿಶಿಷ್ಟರಷ್ಟೇ ಯಾಕೆ ಸ್ವಚ್ಛತಾ ಕೆಲಸ ಮಾಡಬೇಕು. ಕಾರ್ಮಿಕರು ತಮ್ಮ ಮುಂದಿನ ತಲೆಮಾರು ಈ ವೃತ್ತಿಗೆ ಬಾರದಂತೆ ನೋಡಿಕೊಳ್ಳಬೇಕು. ಆಗ ಸರ್ಕಾರ ಈ ಕೆಲಸಕ್ಕೆ ಸಾವಿರಾರು ರೂಪಾಯಿ ಸಂಬಳ, ಸೌಲಭ್ಯ ಕೊಡಲಿದೆ. ಆಗ ಎಲ್ಲಾ ಜಾತಿಯವರೂ ಓಡಿ ಬರಲಿದ್ದಾರೆ’ ಎಂದರು.
‘ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲೂ ಭ್ರಷ್ಟರಿದ್ದಾರೆ. ಆದರೆ, ಪೌರ ಕಾರ್ಮಿಕರಲ್ಲಿ ಇಲ್ಲ. ಹಾಗಾಗಿಯೇ ಕಾರ್ಮಿಕರ ಮೇಲೆ ಇದುವರೆಗೆ ಲೋಕಾಯುಕ್ತ ಅಥವಾ ಆದಾಯ ತೆರಿಗೆ ಇಲಾಖೆ ದಾಳಿಯಾಗಿಲ್ಲ. ಅವರು ಜನರಿಂದ ಪಡೆಯುವ ಲಂಚವೇನಿದ್ದರೂ ಟೀ, ಕಾಫಿ, ಊಟಕ್ಕೆ ಸೀಮಿತವಾದ ಚಿಲ್ಲರೆಯಷ್ಟೆ. ಅದನ್ನೂ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಶಾಸಕ, ತ್ರಿಮೂರ್ತಿಗಳು ಗೈರು: ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗೈರಾಗಿದ್ದರು. ವಿಶೇಷ ಆಹ್ವಾನಿತರಾಗಿದ್ದ ಜಿಲ್ಲೆಯ ತ್ರಿಮೂರ್ತಿ ಅಧಿಕಾರಿಗಳಾದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರ ಅನುಪಸ್ಥಿತಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ನೃತ್ಯ, ನಾಟಕದ ಮೋಡಿ: ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು ಪ್ರದರ್ಶಿಸಿದ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ, ಕರ್ನಾಟಕ ವೈಭವ ನೃತ್ಯ ರೂಪಕ, ಇತರ ನೃತ್ಯ, ಪೌರಾಯುಕ್ತ ಡಾ. ಜಯಣ್ಣ ನೇತೃತ್ವದಲ್ಲಿ ನೌಕರರು, ಕಾರ್ಮಿಕರು ಹಾಗೂ ನಗರಸಭೆ ಸದಸ್ಯರಿಂದ ಸ್ವಚ್ಛತೆ ಕುರಿತು ಸಮೂಹ ಗಾಯನ ಸೇರಿದಂತೆ ರಾತ್ರಿ 11ರವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಪ್ರೇಕ್ಷಕರನ್ನು ಮೋಡಿ ಮಾಡಿತು.
ನಗರಸಭೆಯ ಸ್ವಚ್ಛತಾ ರಾಯಭಾರಿಯಾಗಿ ನೇಮಕವಾಗಿರುವ ಚಿತ್ರಾ ರಾವ್ ಅವರನ್ನು ಸನ್ಮಾನಿಸಲಾಯಿತು. ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಗ್ಯಾರಂಟಿ ಯೋಜನೆಗಳ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ಪಿಸಿಪಿಎಂಎಸ್ ಅಧ್ಯಕ್ಷ ದೊಡ್ಡಿ ಸೂರಿ, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಹಾಗೂ ಸದಸ್ಯರು ಇದ್ದರು. ದಿವ್ಯ ಆಲೂರು ನಿರೂಪಣೆ ಮಾಡಿದರು.
ಬಿ. ಬಸವಲಿಂಗಪ್ಪ ಮಲ ಹೊರುವ ಪದ್ಧತಿ ನಿಷೇಧಿಸಿದರೂ ಅಲ್ಲಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಈ ಪದ್ಧತಿ ತೊಲಗಬೇಕು. ಪೌರ ಕಾರ್ಮಿಕರ ಬಗ್ಗೆ ಅನುಕಂಪ ತೋರದೆ ಎಲ್ಲರಂತೆ ಸಮಾನವಾಗಿ ಕಾಣಬೇಕುಸಿ.ಎಂ. ಲಿಂಗಪ್ಪ ಮಾಜಿ ಶಾಸಕ
ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತೋರಿಸಿರುವ ಪರಿವರ್ತನೆಯ ಮಾರ್ಗಗಳ ಅರಿವೇ ನಮಗಿಲ್ಲ. ನಾವು ನಿಂತ ನೀರಾಗಬಾರದು. ಪರಿವರ್ತನೆಗಾಗಿಲಿ ನಾವು ನಮ್ಮ ಮುಂದಿನ ತಲೆಮಾರು ಜಾಗೃತವಾಗಬೇಕುಜನಾರ್ದನ ಜೆನ್ನಿ ರಂಗಕರ್ಮಿ
‘ಸೇವಾವಧಿಯಲ್ಲೇ ಶೇ 37ರಷ್ಟು ಕಾರ್ಮಿಕರು ಸಾವು’
‘ಪೌರ ಕಾರ್ಮಿಕನ ಮಗನಾಗಿರುವ ನಾನು ಪೌರಾಯುಕ್ತನಾಗಿ ಕೆಲಸ ಮಾಡಿರುವೆ. 15 ವರ್ಷ ಸಂಘವನ್ನು ಮುನ್ನಡೆಸಿರುವೆ. ಒಮ್ಮೆ ನಾನು ಮತ್ತು ನಮ್ಮ ಅಧಿಕಾರಿಗಳು ಒಂದು ತಿಂಗಳು ಕಾರ್ಮಿಕರು ಮಾಡುವ ಕೆಲಸ ಮಾಡಿ ಅವರ ಕಷ್ಟಗಳನ್ನು ಅರಿಯಲು ಪ್ರಯತ್ನಿಸಿದೆವು. ಆದರೆ ತಿಂಗಳ ಬಳಿಕ ಎಲ್ಲರೂ ಆಸ್ಪತ್ರೆ ಸೇರಿದೆವು. ಕೆಲವರ ಆರೋಗ್ಯ ಸುಧಾರಿಸಲು ತಿಂಗಳುಗಳು ಬೇಕಾಯಿತು. ಅಂದರೆ ಕಾರ್ಮಿಕರು ಮಹಾನಗರ ನಗರ ಹಾಗೂ ಪಟ್ಟಣಗಳ ಸ್ವಚ್ಛತೆಗಾಗಿ ತಮ್ಮ ಜೀವವನ್ನೇ ಮುಡಿಪಿಟ್ಟು ಕಾಪಾಡುತ್ತಿದ್ದಾರೆ. ಶೇ 37.5ರಷ್ಟು ಕಾರ್ಮಿಕರು ಸೇವಾವಧಿಯಲ್ಲೇ ಸಾಯುತ್ತಿದ್ದಾರೆ. ನಿವೃತ್ತಿವರೆಗೆ ಬದುಕುವುದೇ ಕಮ್ಮಿ’ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
‘ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕುವ ಸರ್ಕಾರಗಳು’
‘ಅರೆ ಸರ್ಕಾರಿ ವ್ಯವಸ್ಥೆಯಾಗಿರುವ ಸ್ಥಳೀಯ ಸಂಸ್ಥೆಗಳು ಬಲಗೊಂಡರೆ ನಮ್ಮ ಶಕ್ತಿ ಕುಂದುತ್ತದೆಂದು ಎಲ್ಲಾ ಪಕ್ಷಗಳ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕಿಕೊಂಡು ಬಂದಿವೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಅದಕ್ಕೆ ಎಲ್ಲಾ ಶಾಸಕರು ಚಿಂತನೆ ನಡೆಸಬೇಕು. ಜನರೊಂದಿಗೆ ನಿಕಟ ಒಡನಾಟವಿರುವ ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ ಅವರಿಗೆ ಇಲಾಖೆ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಇದ್ದಿದ್ದರೆ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದರು. ಜಿ.ಎಸ್. ಮಂಜುನಾಥ್ ಅವರಂತಹವರ ಕೈಗೆ ಇಲಾಖೆ ಸಿಕ್ಕರೆ ಅದರ ಕಥೆಯೇ ಬೇರಾಗುತ್ತದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.