ADVERTISEMENT

ಸ್ಪಂದನ, ಸಿಟಿಐಟಿಯು ಸಂಘಟನೆ ನೇತೃತ್ವದಲ್ಲಿ ಜಾಥಾ; ಅಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 2:47 IST
Last Updated 12 ಫೆಬ್ರುವರಿ 2026, 2:47 IST
   

ರಾಮನಗರ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಉಚಿತ ಚಿಕಿತ್ಸೆ ಹಾಗೂ ಔಷಧಿಗಳು ಸಿಗಬೇಕು ಎಂದು ಆಗ್ರಹಿಸಿ ಸ್ಪಂದನ ಸಂಘಟನೆ ಹಾಗೂ ಸಿಐಟಿಯು ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಆರೋಗ್ಯ ಹಕ್ಕಿಗಾಗಿ ಜಾಗೃತಿ ಜಾಥಾ ನಡೆಯಿತು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದರು.

ಕೇರಳ ಹಾಗೂ ರಾಜಸ್ಥಾನ ಮಾದರಿಯಂತೆ, ಕರ್ನಾಟಕದಲ್ಲೂ ಗುಣಮಟ್ಟದ ಉಚಿತ ಚಿಕಿತ್ಸೆ ಹಾಗೂ ಔಷಧಿ ಸಿಗಬೇಕು. ಹತ್ತಾರು ವರ್ಷಗಳಿಂದ ವಿವಿಧ ಜನಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೆ, ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಬರುತ್ತಿಲ್ಲ ಎಂದು ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಎಲ್ಲಾ ಜಿಲ್ಲೆಗಳಲ್ಲಿ ಫೆ. 2ರಿಂದ 17ರವರೆಗೆ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲು ಹೆಜ್ಜೆ ಇಟ್ಟಿದ್ದು, ಕೂಡಲೇ ಇದನ್ನು ಕೈ ಬಿಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸರ್ಕಾರ ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ
ಗುಣಮಟ್ಟದ ಔಷಧಗಳನ್ನು ಉಚಿತವಾಗಿ ಸಿಗುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳಿಗೆ ಹೊರಗಡೆ ಔಷಧ ಖರೀದಿಸುವಂತೆ ಸೂಚಿಸುವ ಅಥವಾ ಇತರ ಪರೀಕ್ಷೆಗಳನ್ನು ಮಾಡಿಸುವಂತೆ ಹೇಳುವ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಅದಕ್ಕಾಗಿ ಸರ್ಕಾರ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ಜಾರಿಗೆ ತರಬೇಕು. ಆರೋಗ್ಯ ರಕ್ಷಣೆಯು ಜನರ ಮೂಲಭೂತ ಹಕ್ಕಾಗಬೇಕು. ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಮನಬಂದಂತೆ ರೋಗಿಗಳಿಂದ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಇಎಸ್‍ಐ ಆಸ್ಪತ್ರೆ ತೆರೆಯಬೇಕು ಎಂದು ಆಗ್ರಹಿಸಿದರು.

ಬಳಿಕ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ಸಾರ್ವತ್ರಿಕ ಆರೋಗ್ಯ ಆಂದೋಲನದ ಆಶಾ ಕಿಲಾರ್, ಆ್ಯಕ್ಷನ್ ಫಾರ್ ಈಕ್ವಿಟಿಯ ಅಕ್ಷಯ್, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ವೈಶಾಲಿ, ಸ್ಪಂದನ ಸಂಸ್ಥೆ ಮಾಲಿನಿ ಅಂತರ್ಜನಂ, ಅಶ್ವಥ, ಕಾವ್ಯ, ಶ್ರೀನಿವಾಸ್, ಶೋಭಾ, ಸುನೀತ, ಮೇಘನಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ವಿವಿಧ ಕಾರ್ಮಿಕ ಮುಖಂಡರು, ಬೀಡಿ ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.