ADVERTISEMENT

ಕೋವಿಡ್‌ ನಡುವೆ ಕಂಕಣಭಾಗ್ಯ- ‘ಸಪ್ತಪದಿ’ ಯೋಜನೆಯಡಿ ಮೊದಲ ಮದುವೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 5:49 IST
Last Updated 30 ಏಪ್ರಿಲ್ 2021, 5:49 IST
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದ ಜೋಡಿ
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದ ಜೋಡಿ   

ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ದೇವಾಲಯದ ವತಿಯಿಂದ ಗುರುವಾರ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ನೆರವೇರಿತು. ಸರ್ಕಾರದ ಸರಳ ವಿವಾಹ ಯೋಜನೆಯಡಿ ಜಿಲ್ಲೆಯಲ್ಲಿ ನಡೆದ ಮೊದಲ ಕಾರ್ಯಕ್ರಮ ಇದಾಗಿತ್ತು.

ಸರ್ಕಾರದ ನಿರ್ದೇಶನದ ಅನ್ವಯ ದೇವಾಲಯದ ವತಿಯಿಂದ ಹೆಸರು ನೋಂದಾಯಿಸಿದ್ದ ಮೂರು ಜೋಡಿಗಳ ವಿವಾಹವನ್ನು ಬೆಟ್ಟದ ರೇಣುಕಾಂಭ ದೇವಾಲಯದ ಆವರಣದಲ್ಲಿ ಸರಳವಾಗಿ ನೆರವೇರಿಸಲಾಯಿತು.

ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್ ಮಾತನಾಡಿ, ‘ಸರ್ಕಾರ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯಲ್ಲಿ ಪ್ರಮುಖ ದೇವಾಲಯಗಳಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸರಳ ವಿವಾಹ ನಡೆಸಲು ಆದೇಶಿಸಿದೆ. ಮೂರು ಜೋಡಿಗಳು ಮದುವೆಗೆ ಹೆಸರು ನೋಂದಾಯಿಸಿಕೊಂಡಿದ್ದವು. ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಈ ಜೋಡಿಗಳ ವಿವಾಹ ನಡೆಯಿತು’ ಎಂದರು.

ADVERTISEMENT

‘ಸರ್ಕಾರದ ಸಪ್ತಪದಿ ಯೋಜನೆಯ ಅನ್ವಯ ಸರಳ ವಿವಾಹವಾದ ವರನಿಗೆ ₹ 5 ಸಾವಿರ, ವಧುವಿಗೆ ₹ 10 ಸಾವಿರ, ಚಿನ್ನದ ತಾಳಿ, ಎರಡು ಗುಂಡು ದೇವಾಲಯದಿಂದ ನೀಡಲಾಗಿದೆ. ಜೊತೆಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಮುಖಂಡ ಅವ್ವೇರಹಳ್ಳಿ ಶಿವಲಿಂಗಯ್ಯ ಮಾತನಾಡಿ, ‘ಸರ್ಕಾರದ ಸಪ್ತಪದಿ ಸರಳ ವಿವಾಹ ಯೋಜನೆ ತುಂಬಾ ಅನುಕೂಲಕರವಾಗಿದೆ. ಸರ್ಕಾರವೇ ಆರ್ಥಿಕ ಸಹಕಾರ ನೀಡುವುದರಿಂದ ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಬಡಜನರು ಉಪಯೋಗಿಸಿಕೊಂಡರೆ ಮದುವೆಗಳಲ್ಲಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು’ ಎಂದರು.

ಕೋವಿಡ್ ನಿಯಮ ಪಾಲನೆ: ಮೂರು ಮದುವೆಗಳು ದೇವಾಲಯದ ಆವರಣದಲ್ಲಿ ನಡೆದರೂ ಸಂಖ್ಯೆ 40 ಮೀರಿರಲಿಲ್ಲ. ಅಂತರ ಪಾಲನೆ, ಸ್ಯಾನಿಸೈಜರ್, ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು. ಊಟೋಪಚಾರ ವ್ಯವಸ್ಥೆಯಲ್ಲೂ ಅಧಿಕಾರಿಗಳು ಎಚ್ಚರ ವಹಿಸಿದ್ದರು.

ಧಾರ್ಮಿಕ ಪರಿಷತ್ ಸದಸ್ಯ ಹನುಮಂತು, ಹೊಂಬೆಳಕು ಸ್ನೇಹಕೂಟದ ಪೊಲೀಸ್ ಸುರೇಶ್, ಸಮಾಜ ಸೇವಕ ತಮ್ಮಣ್ಣ, ಹುಲಿಕೆರೆ-ಗುನ್ನೂರು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಮುಖಂಡ ನೆಲಮಲೆ ಗಂಗಾಧರ್, ದೇವಾಲಯದ ಪ್ರಧಾನ ಅರ್ಚಕರಾದ ಎಸ್. ವಿಜಯಕುಮಾರ್, ಎ.ಸಿ. ಮಂಜುನಾಥ್, ಅರ್ಚಕ ವಿ. ಮೂರ್ತಿ, ಪುರೋಹಿತ ಎಸ್. ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.